ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: ಭಾರತಕ್ಕೆ ವರವಾಗಿದ್ದ ಮಾತ್ರೆ ಕಾರ್ಖಾನೆ

2014ರ ವೇಳೆಗೆ ಕಾರ್ಖಾನೆ ಮಾತ್ರೆ ತಯಾರಿಕೆ ಸ್ಥಗಿತ
Published 12 ಸೆಪ್ಟೆಂಬರ್ 2023, 4:24 IST
Last Updated 12 ಸೆಪ್ಟೆಂಬರ್ 2023, 4:24 IST
ಅಕ್ಷರ ಗಾತ್ರ

ಬಂಗಾರಪೇಟೆ: ಪಟ್ಟಣದ ಉದ್ಯಾನದ ಹಿಂಭಾಗ ಇರುವ ಆಲ್ ಇಂಡಿಯಾ ಮಿಷನ್ಸ್ ಟ್ಯಾಬ್ಲೆಟ್ ಇಂಡಸ್ಟ್ರಿಗೆ 90 ವರ್ಷಗಳ ಇತಿಹಾಸವಿದೆ. ಏಷಿಯ ಖಂಡದ ರೋಗಿಗಳ ಕಾಯಿಲೆ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೆಗ್ಗಳಿಕೆ ಇದೆ.

ದೇಶದಲ್ಲಿ 1920ರ ದಶಕದಲ್ಲಿ ಪ್ಲೇಗ್ ವ್ಯಾಪಕವಾಗಿ ಹರಡಿದ್ದ ಕಾಲಘಟ್ಟ. ಈ ಸಮಯದಲ್ಲಿ ತುಂಬಾ ಸಾವು–ನೋವು ಉಂಟಾಗಿತ್ತು. ಈ ಕಾಯಿಲೆ ತಡೆಗೆ ಯಾರಾದರೂ ಮುಂದೆ ಬರಬಹುದು ಎಂದು ನಿರೀಕ್ಷಿಸಿದ ಆಗಿನ ಮೈಸೂರು ಸರ್ಕಾರ ನ್ಯೂಯಾರ್ಕ್ ಟೈಮ್ಸ್ ಪ್ರತಿಕೆಯಲ್ಲಿ ಈ ಬಗ್ಗೆ ಜಾಹೀರಾತು ನೀಡಿತ್ತು.

ಜಾಹೀರಾತು ಕಂಡ ಅಮೇರಿಕ ದೇಶದ ಕ್ರೈಸ್ತ ಮಿಷನರಿ ಡಾ.ಕ್ಯೂ.ಎಚ್.ಲಿನ್ ಅವರು ರೋಗಿಗಳಿಗೆ ಸಹಾಯಕ್ಕೆ ಮುಂದಾದರು. 1920ರಲ್ಲಿ ಪಟ್ಟಣದಲ್ಲಿ ಟ್ಯಾಬ್ಲೆಟ್ ಕಾರ್ಖಾನೆ ಆರಂಭಿಸಿದರು.

ಡಾ.ಕ್ಯೂ.ಎಚ್.ಲಿನ್ ಕ್ರೈಸ್ತ ಮಿಷನರಿ ಆಗಿದ್ದರೂ ಸಾಂಸ್ಥಿಕ ಧನ ಸಹಾಯ ಸಿಗದ ಕಾರಣ ತನ್ನ ಸ್ವಂತ ಹಣದಿಂದ ಈ ಕಾರ್ಖಾನೆ ಆರಂಭಿಸಿದರು. ಆಲೋಪತಿ ಔಷಧಿಗಳಲ್ಲಿ ಕೆಂಪು ದ್ರವ ಮತ್ತು ಬಿಳಿ ದ್ರವ ಮಿಶ್ರಣ ಮಾಡಿ ಕೊಡುತ್ತಿದ್ದ ಕಾಲದಲ್ಲಿ ಇಲ್ಲಿ ಕಾರ್ಖಾನೆ ಆರಂಭಗೊಂಡಿದ್ದು ಇಲ್ಲಿನ ನಾಗರಿಕರಲ್ಲಿ ಅಚ್ಚರಿ ಮೂಡಿಸಿತ್ತು.

ಆರಂಭದಲ್ಲಿ ಮಾತ್ರೆಗಳ ಮೇಲೆ ಯಾವ ಕಾಯಿಲೆಗೆ ಯಾವ ಮಾತ್ರೆ ಎಂದು ತಿಳಿಯುತ್ತಿರಲಿಲ್ಲ. ಹಾಗಾಗಿ ಇಲ್ಲಿ ತಯಾರಿಸಿದ ಮಾತ್ರೆಗಳನ್ನು ಮಿಷನರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಆಲ್ ಇಂಡಿಯಾ ಫ್ಯಾಕ್ಟರಿಸ್ ಆಕ್ಟ್ನಡಿ ದಕ್ಷಿಣ ಭಾರತದ ಮೊಟ್ಟ ಮೊದಲು ನೋಂದಾಯಿತ ಕಾರ್ಖಾನೆಯೂ ಇದೇ ಎನ್ನುವುದು ಹೆಗ್ಗಳಿಕೆ.

ದಕ್ಷಿಣ ಭಾರತದಾದ್ಯಂತ ಮಾತ್ರೆ ಸರಬರಾಜು ಮಾಡುತ್ತಿದ್ದ ಡಾ.ಕ್ಯೂ.ಎಚ್.ಲಿನ್ ಅವರು ತನ್ನ ಮಕ್ಕಳ ಸಹಕಾರದಿಂದ 1948ರವರೆಗೆ ಕಾರ್ಖಾನೆ ಉಸ್ತುವಾರಿ ನೋಡಿಕೊಂಡರು.

1948ರಲ್ಲಿ ಜೈ ಸುಕ್ಲಾಲ್ ಹಾತಿ ನೇತೃತ್ವದ ಸಮಿತಿ ದೇಶದ ಆರೋಗ್ಯ ನೀತಿ ಮತ್ತು ಆರೋಗ್ಯ ಸೇವೆ ನೀಡುತ್ತಿರುವ ಸಂಸ್ಥೆಗಳ ಕಾರ್ಯ ಚಟುವಟಿಕೆ ಬಗ್ಗೆ ಸರ್ವೆ ನಡೆಸಿತು. ಸಂಬಂಧಿಸಿದ ವರದಿಯನ್ನು ಭಾರತ ಸರ್ಕಾರಕ್ಕೆ ನೀಡಿತು.

ಆ ವರದಿಯಲ್ಲಿ ದಕ್ಷಿಣ ಭಾರತದಲ್ಲೇ ಈ ಟ್ಯಾಬ್ಲೆಟ್ ಕಾರ್ಖಾನೆ ಬಹಳ ಉತ್ತಮ ಎಂಬ ಉಲ್ಲೇಖ ಇರುವುದು ಗಮನಾರ್ಹ. 1948ರ ನಂತರ ಡಾ.ಕ್ಯೂ.ಎಚ್.ಲಿನ್ ಅವರ ಮಗ ಡಾ.ಕಿನ್ನಿಲಿನ್ ಕಾರ್ಖಾನೆ ಮುಂದುವರಿಸಿದರು. ಜತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡರು. ಡಾ.ಕಿನ್ನಿ ಲಿನ್ ಅವರ ಸೇವೆ ಫಲ ಪಡೆದ ಜನರು ಅವರನ್ನು ದೊರೆ ಎಂದೇ ಸಂಬೋಧಿಸುತ್ತಿದ್ದರು.

ಮಾಲೀಕ ಡಾ.ಕಿನ್ನಿ ಲಿನ್ 1982ರಲ್ಲಿ ಮೃತರಾದರು. ಅವರಿಗೆ ಇಲ್ಲಿನ ಜನರ ಜತೆಗಿನ ಸಂಬಂಧ ಎಷ್ಟಿತ್ತು ಎಂದರೆ ಅವರ ಶವವನ್ನು ಸ್ಮಶಾನದವರೆಗೆ ಹಿಂದೂಗಳೇ ಹೊತ್ತು ಸಾಗಿಸುತ್ತಾರೆ. ಕೊನೆಯಲ್ಲಿ ವಿಧಿ ವಿಧಾನ ಮಾಡಲು ಸಂಬಂಧಿಕರಿಗೆ ಬಿಟ್ಟುಕೊಡುತ್ತಾರೆ.

ಸದರಿ ಕಟ್ಟಡ ಮೆಥೊಡಿಸ್ಟ್ ಚರ್ಚ್ ಸುಪರ್ದಿಗೆ ಕಿನ್ ಮರಣದ ನಂತರ ಕಾರ್ಖಾನೆಯನ್ನು 1975-76ರಲ್ಲಿ ಮೆಥೊಡಿಸ್ಟ್ ಮಿಷನ್ ಟ್ರಸ್ಟ್‌ಗೆ ವಹಿಸಲಾಗುತ್ತದೆ. ಮೆಥೋಡಿಸ್ಟ್ ಟ್ರಸ್ಟ್ ಮಾಗರ್ದರ್ಶನದಲ್ಲಿ 'ಆಲ್ ಇಂಡಿಯಾ ಟ್ಯಾಬ್ಲೆಟ್ ಇಂಡಸ್ಟ್ರಿ ಟ್ರಸ್ಟ್' ರಚಿಸಲಾಗುತ್ತದೆ. ಟ್ರಸ್ಟ್‌ನ ಅಧ್ಯಕ್ಷ ತಾರಾನಾಥ್ ಸಾಗರ್ ಕಾರ್ಯದರ್ಶಿ ಜಯವಂತ್ ಖಜಾಂಚಿ ಸಂಜೀವ್ ದಯಾನಂದ್ ನೇತೃತ್ವದಲ್ಲಿ 2014ರವರೆಗೆ ಕಾರ್ಖಾನೆ ಕಾರ್ಯ ನಿರ್ವಹಿಸುತ್ತದೆ. ದೇಶದ್ಯಂತ ಮಾತ್ರೆ ತಯಾರಿಕೆ ಕಾರ್ಖಾನೆಗಳು ಆರಂಭಗೊಳ್ಳುತ್ತಿದ್ದಂತೆ ಇಲ್ಲಿ ಮಾತ್ರೆ ತಯಾರಿ ದುಬಾರಿಯಾಗುತ್ತದೆ. ಈ ಕಾರಣದಿಂದಾಗಿ 2014ರ ವೇಳೆಗೆ ಕಾರ್ಖಾನೆ ಮಾತ್ರೆ ತಯಾರಿಕೆ ಸ್ಥಗಿತಗೊಳಿಸುತ್ತದೆ. ಪ್ರಸ್ತುತ ಸದರಿ ಕಟ್ಟಡ ಮೆಥೊಡಿಸ್ಟ್ ಚರ್ಚ್ ಸುಪರ್ದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT