ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕೋಚಿಮುಲ್‌–ಡಿಸಿಸಿ ಬ್ಯಾಂಕ್‌ ವಿಭಜನೆ: ದುಡುಕು ನಿರ್ಧಾರವಿಲ್ಲ

ಅವಿಭಜಿತ ಜಿಲ್ಲೆಯ ಶಾಸಕರ ನಿಯೋಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ
Last Updated 14 ಸೆಪ್ಟೆಂಬರ್ 2021, 15:06 IST
ಅಕ್ಷರ ಗಾತ್ರ

ಕೋಲಾರ: ‘ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಚಿಮುಲ್‌) ಹಾಗೂ ಡಿಸಿಸಿ ಬ್ಯಾಂಕ್ ವಿಭಜನೆ ವಿಚಾರದಲ್ಲಿ ದುಡುಕಿನ ನಿರ್ಧಾರಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಳಿ ಜಿಲ್ಲೆಯ ಶಾಸಕರ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಕೋಚಿಮುಲ್, ಡಿಸಿಸಿ ಬ್ಯಾಂಕ್‌ ವಿಭಜನೆ ಕೂಗು ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಶಾಸಕರಾದ ಕೆ.ಆರ್‌.ರಮೇಶ್‌ಕುಮಾರ್, ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ಎಸ್‍.ಎನ್‌.ನಾರಾಯಣಸ್ವಾಮಿ, ವಿ.ಮುನಿಯಪ್ಪ, ಶಿವಶಂಕರರೆಡ್ಡಿ, ಎಂ.ರೂಪಾಕಲಾ, ವಿಧಾನ ಪರಿಷತ್ ಸದಸ್ಯ ನಜೀರ್‌ ಅಹಮ್ಮದ್‌ ಅವರ ನಿಯೋಗವು ಬೆಂಗಳೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು, ‘ಸಹಕಾರಿ ವ್ಯವಸ್ಥೆ ಬೆಳೆಸುವುದು ಸುಲಭವಲ್ಲ. ಏನೇ ಸಮಸ್ಯೆ ಇದ್ದರೂ ಚರ್ಚಿಸಿ ಬಗೆಹರಿಸೋಣ. ಹಿಂದೆ ಆಗಿರುವ ತಪ್ಪುಗಳ ಬಗ್ಗೆ ಚರ್ಚೆ ಮಾಡಿ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಸಧ್ಯದ ಪರಿಸ್ಥಿತಿಯಲ್ಲಿ ಯಾವುದೇ ದುಡುಕು ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸಂಸ್ಥೆಗಳಿಗೆ ದಕ್ಕೆ ಆಗದಂತೆ ಸೂಕ್ತ ತೀರ್ಮಾನ ಮಾಡುತ್ತೇವೆ’ ಎಂದು ನಿಯೋಗಕ್ಕೆ ಭರವಸೆ ನೀಡಿದರು.

‘ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪ ಒಳ್ಳೆಯ ಬೆಳವಣಿಗೆಯಲ್ಲ. ರಾಜಕೀಯ ದ್ವೇಷ ಏನೇ ಇದ್ದರೂ ಅದು ಸಹಕಾರಿ ಸಂಸ್ಥೆಗಳಲ್ಲಿ ನುಸುಳಲು ಅವಕಾಶ ಕೊಡುವುದಿಲ್ಲ’ ಎಂದು ಮುಖ್ಯಮಂತ್ರಿಗಳು ನಿಯೋಗಕ್ಕೆ ತಿಳಿಸಿದರೆಂದು ಗೊತ್ತಾಗಿದೆ.

ಸುಳ್ಳು ಆರೋಪ: ‘ಡಿಸಿಸಿ ಬ್ಯಾಂಕ್ 2014ರಲ್ಲಿ ದಿವಾಳಿ ಹಂತ ತಲುಪಿತ್ತು. ಆಗ ಬ್ಯಾಂಕ್‌ನ ವಹಿವಾಟು ₹ 30 ಕೋಟಿಯಿತ್ತು. ಈಗ ₹ 1,380 ಕೋಟಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಎರಡೂ ಜಿಲ್ಲೆಯ ರೈತರಿಗೆ, ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿದೆ. ಇದನ್ನು ಸಹಿಸದ ಕೆಲವರು ರಾಜಕೀಯ ದುರುದ್ದೇಶಕ್ಕೆ ಬ್ಯಾಂಕ್‌ನ ಆಡಳಿತ ಮಂಡಳಿ ವಿರುದ್ಧ ಸುಳ್ಳು ಆರೋಪ ಮಾಡಿ ಬ್ಯಾಂಕ್‌ ಹಾಳು ಮಾಡಲು ಹೊರಟಿದ್ದಾರೆ’ ಎಂದು ಶಾಸಕರು ಮುಖ್ಯಮಂತ್ರಿಗಳ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

‘ಡಿಸಿಸಿ ಬ್ಯಾಂಕ್‌ನಲ್ಲಿ ತಪ್ಪುಗಳು ಆಗಿದ್ದರೆ ಸರಿಪಡಿಸುವ ವ್ಯವಸ್ಥೆಯಿದೆ. ಅದನ್ನು ಮಾಡಲಿ. ಅದು ಬಿಟ್ಟು ಬ್ಯಾಂಕ್‌ನ ಅಸ್ತಿತ್ವವನ್ನೇ ಹಾಳು ಮಾಡಲು ಹೊರಟಿರುವುದು ಸರಿಯೇ? ಕೋವಿಡ್‌ ಮತ್ತು ಲಾಕ್‌ಡೌನ್‌ ಸಂಕಷ್ಟದಿಂದ ಬ್ಯಾಂಕ್ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಕೆಲವರು ಬ್ಯಾಂಕ್‌ ವಿಭಜಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಈ ಹಿಂದೆ ನಡೆದಿದ್ದ ಅಕ್ರಮವನ್ನು ಈಗಿನ ಆಡಳಿತ ಮಂಡಳಿ ಸದಸ್ಯರ ಮೇಲೆ ಹಾಕಿ ಬ್ಯಾಂಕ್‌ ನಾಶ ಮಾಡಲು ಹೊರಟಿದ್ದಾರೆ’ ಎಂದು ದೂರಿದರು.

ಕೋಚಿಮುಲ್‌ ಇಬ್ಭಾಗ ಬೇಡ: ‘ಹಾಲು ಒಕ್ಕೂಟವು ಬಹಳ ಕಷ್ಟದಿಂದ ಮೇಲಕ್ಕೆ ಬಂದಿದೆ. ಎರಡೂ ಜಿಲ್ಲೆಯ ಜೀವನಾಡಿಯಾಗಿರುವ ಹಾಲು ಒಕ್ಕೂಟವನ್ನು ಇಬ್ಭಾಗ ಮಾಡಿದರೆ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ. ಈಗಾಗಲೇ ಖಾಸಗಿ ಹಾಲಿನ ಡೇರಿಗಳ ಹಾವಳಿ ಹೆಚ್ಚಿದ್ದು, ಆತುರದ ನಿರ್ಧಾರಗಳಿಂದ ಖಾಸಗಿ ಸಂಸ್ಥೆಗಳು ಅನುಕೂಲ ಪಡೆಯುವ ಸಾಧ್ಯತೆಯಿದೆ. ಆದ ಕಾರಣ ಸದ್ಯಕ್ಕೆ ಕೋಚಿಮುಲ್‌ ವಿಭಜಿಸ ಬೇಡಿ’ ಎಂದು ಮನವಿ ಮಾಡಿದರು.

‘ಬೆಂಗಳೂರು ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಯಿದ್ದು, ದಿನಕ್ಕೆ ಸುಮಾರು 18 ಲಕ್ಷ ಹಾಲು ಸಂಗ್ರಹವಾಗುತ್ತಿದೆ. ಈ ಒಕ್ಕೂಟದ ವಿಭಜನೆ ಬಗ್ಗೆ ಈವರೆಗೆ ಯಾವುದೇ ಪ್ರಸ್ತಾಪ ಆಗಿಲ್ಲ. ಆದರೆ, ಕೋಚಿಮುಲ್‌ನಲ್ಲಿ ದಿನಕ್ಕೆ 9.50 ಲಕ್ಷ ಹಾಲು ಸಂಗ್ರಹವಾಗುತ್ತಿದ್ದು, ಕೋವಿಡ್‌ ಹೊಡೆತದಿಂದ ಮಾರುಕಟ್ಟೆ ಇಲ್ಲದೆ ಒಕ್ಕೂಟ ಸಂಕಷ್ಟ ಎದುರಿಸುತ್ತಿದೆ’ ಎಂದು ಮನವರಿಕೆ ಮಾಡಿಕೊಟ್ಟರು.

‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ₹ 220 ಕೋಟಿ ವೆಚ್ಚದಲ್ಲಿ ಮೆಗಾ ಡೇರಿ ಸ್ಥಾಪಿಸಲಾಗಿದೆ. ಅದರ ₹ 40 ಕೋಟಿ ಸಾಲ ತೀರಿಸಬೇಕಿದೆ. ಕೋಲಾರ ಜಿಲ್ಲೆಯಲ್ಲಿ ₹ 180 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದ ಎಂವಿಕೆ ಡೇರಿ ಯೋಜನೆ ನನೆಗುದಿಗೆ ಬಿದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ಒಕ್ಕೂಟ ವಿಭಜನೆಯಾದರೆ ಎರಡೂ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಮಸ್ಯೆಯಾಗುತ್ತದೆ. ಯಾರದೋ ರಾಜಕೀಯ ಲಾಭಕ್ಕೆ ಅವಕಾಶ ಕೊಡದೆ ಅವಿಭಜಿತ ಜಿಲ್ಲೆಯ ರೈತರ ಹಿತ ಕಾಯಬೇಕು ಮತ್ತು ಸಹಕಾರಿ ವ್ಯವಸ್ಥೆ ಉಳಿಸಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT