ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಕುಸಿದ ಬೇಡಿಕೆ; ಕೋಚಿಮುಲ್‌ಗೆ ನಷ್ಟದ ಭೀತಿ

ಗೋದಾಮಿನಲ್ಲೇ ಉಳಿದ ಹಾಲಿನ ಪುಡಿ– ಬೆಣ್ಣೆ
Last Updated 1 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಕೋಲಾರ: ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ (ಕೋಚಿಮುಲ್‌) ಹಾಲು ಶೇಖರಣೆ ಪ್ರಮಾಣ ಗಣನೀಯವಾಗಿ ಹೆಚ್ಚಿದ್ದು, ಹಾಲಿನ ಪುಡಿ ಮತ್ತು ಬೆಣ್ಣೆ ಉತ್ಪಾದನೆಯು ಒಕ್ಕೂಟಕ್ಕೆ ಹೊರೆಯಾಗಿ ಪರಿಣಮಿಸಿದೆ.

ಕೋವಿಡ್‌ ಹೊಡೆತಕ್ಕೆ ಜಾಗತಿಕವಾಗಿ ಹಾಲಿನ ಪುಡಿ ಮತ್ತು ಬೆಣ್ಣೆ ಬೆಲೆಯು ದಾಖಲೆ ಪ್ರಮಾಣದಲ್ಲಿ ಕುಸಿದಿದ್ದು, ಮಾರುಕಟ್ಟೆಯಲ್ಲಿ ಹಾಲಿನ ಪುಡಿ ಹಾಗೂ ಬೆಣ್ಣೆಗೆ ಬೇಡಿಕೆ ಇಲ್ಲವಾಗಿದೆ. ಹೀಗಾಗಿ ಹಾಲಿನ ಪುಡಿ ಮತ್ತು ಬೆಣ್ಣೆಯು ಗೋದಾಮುಗಳಲ್ಲೇ ಉಳಿದಿದ್ದು, ಒಕ್ಕೂಟಕ್ಕೆ ನಷ್ಟದ ಭೀತಿ ಎದುರಾಗಿದೆ.

ಹೈನುಗಾರಿಕೆಯು ಜಿಲ್ಲೆಯ ರೈತರ ಜೀವನಾಡಿಯಾಗಿದ್ದು, ಒಕ್ಕೂಟವು ಹಾಲು ಸಂಗ್ರಹಣೆಯಲ್ಲಿ ರಾಜ್ಯದಲ್ಲೇ 2ನೇ ಸ್ಥಾನದಲ್ಲಿದೆ. ಕೋಚಿಮುಲ್‌ ವ್ಯಾಪ್ತಿಯಲ್ಲಿ 1,870 ಪ್ರಾಥಮಿಕ ಹಾಲು ಸಹಕಾರ ಸಂಘಗಳಿದ್ದು, ಸುಮಾರು 2.87 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದಾರೆ. ಒಕ್ಕೂಟದಲ್ಲಿ ಸದ್ಯ ದಿನಕ್ಕೆ ಸುಮಾರು 10.30 ಲಕ್ಷ ಲೀಟರ್‌ ಹಾಲು ಶೇಖರಣೆಯಾಗುತ್ತಿದೆ.

ಒಕ್ಕೂಟದಿಂದ ಬೆಂಗಳೂರಿನ ಮದರ್‌ ಡೇರಿಗೆ ಪ್ರತಿನಿತ್ಯ 17 ಸಾವಿರ ಲೀಟರ್‌, ಆಂಧ್ರಪ್ರದೇಶಕ್ಕೆ 6 ಸಾವಿರ ಲೀಟರ್‌ ಹಾಲು ಕಳುಹಿಸಲಾಗುತ್ತಿದೆ. 3.15 ಲಕ್ಷ ಲೀಟರ್‌ ಸ್ಯಾಚೆಟ್‌ ಹಾಲು, 3.24 ಲಕ್ಷ ಲೀಟರ್‌ ಗುಡ್‌ ಲೈಫ್‌ ಹಾಲು ಮಾರಾಟವಾಗುತ್ತಿದೆ. 35 ಸಾವಿರ ಲೀಟರ್‌ ಹಾಲು ಮೊಸರು ಉತ್ಪಾದನೆಗೆ, 19 ಸಾವಿರ ಲೀಟರ್‌ ಫ್ಲೆಕ್ಸಿ ಫ್ಯಾಕ್‌ಗೆ, ಹಾಲಿನ ಪುಡಿ ತಯಾರಿಕೆಗೆ 2.30 ಲಕ್ಷ ಲೀಟರ್‌ ಹಾಲು ಬಳಸಲಾಗುತ್ತಿದೆ.

ಖರೀದಿ ಸ್ಥಗಿತ: ದೇಶದಲ್ಲಿ ಕೋವಿಡ್‌ ಪರಿಸ್ಥಿತಿ ಗಂಭೀರವಾಗುವುದಕ್ಕೂ ಮುನ್ನ ಫೆಬ್ರುವರಿ ತಿಂಗಳಲ್ಲಿ ಹಾಲಿನ ಪುಡಿ ದರ ಕೆ.ಜಿಗೆ ₹ 320 ಇತ್ತು. ಕೊರೊನಾ ಸೋಂಕು ಹೆಚ್ಚಳವಾದ ನಂತರ ಪ್ರಮುಖವಾಗಿ ಉತ್ತರ ಭಾರತದ ರಾಜ್ಯಗಳು ಒಕ್ಕೂಟದಿಂದ ಹಾಲಿನ ಪುಡಿ ಮತ್ತು ಬೆಣ್ಣೆ ಖರೀದಿ ನಿಲ್ಲಿಸಿವೆ. ಬೇಡಿಕೆ ಕುಸಿದಿರುವುದರಿಂದ ಹಾಲಿನ ಪುಡಿ ದರ ಕೆ.ಜಿಗೆ 130ಕ್ಕೆ ಮತ್ತು ಬೆಣ್ಣೆ ದರ 180ಕ್ಕೆ ಇಳಿದಿದೆ.

ಸ್ಥಳೀಯವಾಗಿ ಒಕ್ಕೂಟದಲ್ಲಿ ಹಾಲಿನ ಪುಡಿ ಮತ್ತು ಬೆಣ್ಣೆ ಉತ್ಪಾದನಾ ಘಟಕವಿಲ್ಲ. ಹೀಗಾಗಿ ರಾಮನಗರ ಒಕ್ಕೂಟ, ಬೆಂಗಳೂರಿನ ಯಲಹಂಕದಲ್ಲಿನ ಮದರ್‌ ಡೇರಿ ಘಟಕ ಅಥವಾ ಆಂಧ್ರಪ್ರದೇಶದ ಖಾಸಗಿ ಡೇರಿಗಳಿಗೆ ಒಕ್ಕೂಟದಿಂದ ಹಾಲು ಕಳುಹಿಸಿ ಹಾಲಿನ ಪುಡಿ ಮತ್ತು ಬೆಣ್ಣೆ ಉತ್ಪಾದನೆ ಮಾಡಿಸಲಾಗುತ್ತಿದೆ.

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ: 1 ಕೆ.ಜಿ ಹಾಲಿನ ಪುಡಿ ಉತ್ಪಾದನೆಗೆ 11 ಲೀಟರ್‌ ಹಾಲು ಬೇಕು. ಹಾಲು ಖರೀದಿ, ನಿರ್ವಹಣೆ ಮತ್ತು ಸಾಗಣೆ ವೆಚ್ಚ ಸೇರಿದಂತೆ 1 ಕೆ.ಜಿ ಹಾಲಿನ ಪುಡಿ ಉತ್ಪಾದನೆಗೆ ₹ 240 ಹಾಗೂ ಬೆಣ್ಣೆಗೆ ₹ 310 ವೆಚ್ಚವಾಗುತ್ತದೆ. ಇದೀಗ ಮಾರುಕಟ್ಟೆಯಲ್ಲಿ ಹಾಲಿನ ಪುಡಿ ಮತ್ತು ಬೆಣ್ಣೆ ಬೆಲೆ ಇಳಿಕೆಯಾಗಿರುವುದರಿಂದ ಒಕ್ಕೂಟಕ್ಕೆ ಉತ್ಪಾದನಾ ವೆಚ್ಚ ಸಹ ಸಿಗುತ್ತಿಲ್ಲ.

ಈ ಹಿಂದೆ ಒಕ್ಕೂಟದಿಂದ ಕ್ಷೀರ ಭಾಗ್ಯ ಯೋಜನೆಯಡಿ ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ವಿತರಣೆಗಾಗಿ ತಿಂಗಳಿಗೆ 120 ಟನ್‌ ಹಾಲಿನ ಪುಡಿ ಕಳುಹಿಸಲಾಗುತ್ತಿತ್ತು. ಅಂಗನವಾಡಿ ಮಕ್ಕಳಿಗಾಗಿ ತಿಂಗಳಿಗೆ 50 ಟನ್‌ ಹಾಲಿನ ಪುಡಿ ಪೂರೈಸಲಾಗುತ್ತಿತ್ತು. ಇದೀಗ ಕೋವಿಡ್‌ ಕಾರಣಕ್ಕೆ ಶಾಲೆಗಳನ್ನು ಮುಚ್ಚಿರುವುದರಿಂದ ಹಾಲಿನ ಪುಡಿ ಪೂರೈಕೆ ಸ್ಥಗಿತಗೊಂಡಿದೆ.

ಬಾಡಿಗೆ ಹೊರೆ: ಹಾಲಿನ ಪುಡಿ ಮತ್ತು ಬೆಣ್ಣೆಯನ್ನು ಕೆಡದಂತೆ ಸಂರಕ್ಷಣೆ ಮಾಡಲು ಒಕ್ಕೂಟದಲ್ಲಿ ಶೀತಲೀಕರಣ ವ್ಯವಸ್ಥೆಯ ಗೋದಾಮುಗಳಿಲ್ಲ. ಹೀಗಾಗಿ ಆಂಧ್ರದ ಖಾಸಗಿ ಡೇರಿಯ ಗೋದಾಮುಗಳಿಗೆ ಬಾಡಿಗೆ ಪಾವತಿಸಿ ದಾಸ್ತಾನು ಮಾಡಲಾಗುತ್ತಿದೆ. ಗೋದಾಮು ಬಾಡಿಗೆಯು ಒಕ್ಕೂಟಕ್ಕೆ ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT