ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರಗಂಡಹಳ್ಳಿ: ಕುಂಬಾಭಿಷೇಕ ಮಹೋತ್ಸವ

ಪುರಾತನ ಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರ
Last Updated 5 ಮಾರ್ಚ್ 2021, 17:10 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಕೋರಗಂಡಹಳ್ಳಿ–ಕೋನಾಪುರ ಗ್ರಾಮದಲ್ಲಿನ ಪುರಾತನ ಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಅಷ್ಟಬಂಧನ, ಜೀರ್ಣೋದ್ಧಾರ ಮತ್ತು ಮಹಾ ಕುಂಬಾಭಿಷೇಕ ಮಹೋತ್ಸವವು ಶನಿವಾರದಿಂದ ಮಾರ್ಚ್‌ 8ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚೋಳ ವಂಶಸ್ಥರು ನಿರ್ಮಿಸಿದ ಕಾಶಿ ವಿಶ್ವನಾಥಸ್ವಾಮಿ ದೇವಾಲಯವು ಸುಮಾರು 720 ವರ್ಷಗಳ ಪುರಾತನವಾದದ್ದು. ಪಾಳು ಬಿದ್ದಿದ್ದ ಈ ದೇವಾಲಯವನ್ನು 3 ವರ್ಷಗಳಿಂದ ಜೀರ್ಣೋದ್ಧಾರ ಮಾಡಲಾಗುತ್ತಿತ್ತು.

ಬೆಂಗಳೂರಿನ ಗವಿಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಎಸ್‌.ಸೋಮಸುಂದರ ದೀಕ್ಷಿತ್‌ ನೇತೃತ್ವದಲ್ಲಿ 3 ದಿನಗಳ ಕಾಲ ಶಾಸ್ತ್ರೋಕ್ತವಾಗಿ ಮಹಾ ಕುಂಬಾಭಿಷೇಕ ಮಹೋತ್ಸವ ನಡೆಯಲಿದೆ. ಅಷ್ಟಮಿ ದಿನವಾದ ಶನಿವಾರ ಗಣಪತಿ ಪ್ರಾರ್ಥನೆ, ಗ್ರಾಮ ಪ್ರದಕ್ಷಿಣೆ, ತೀರ್ಥ ಸಂಗ್ರಹ, ಗ್ರಾಮ ದೇವತೆಗಳ ಅನುಜ್ಞಾ, ರಕ್ಷಾಬಂಧನ, ಬಿಂಬ ಶುದ್ಧಿ ಕ್ಷೀರಾಧಿವಾಸ ಹಾಗೂ ಮಂಗಳಾರತಿ ನಡೆಯಲಿದೆ.

ಭಾನುವಾರ (ಮಾರ್ಚ್‌ 7) ಕಳಶ ಸ್ಥಾಪನೆ, ಸೋಮ ಕುಂಭ ಪೂಜೆ, ದ್ವಾರಪೂಜೆ ಮಂಟಪಾರ್ಚನೆ ಕಾರ್ಯಕ್ರಮ ನಡೆಯಲಿವೆ. ಅದೇ ದಿನ ರಾತ್ರಿ ಯಂತ್ರ ಸ್ಥಾಪನೆ, ಅಷ್ಟಬಂಧನ ಕ್ರಿಯೆ ಜರುಗಲಿದೆ. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಿತ್ರನಟ ಪುನಿತ್‌ರಾಜ್‌ಕುಮಾರ್‌ ಉದ್ಘಾಟಿಸುತ್ತಾರೆ. ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕರಾದ ವಿಜಯಪ್ರಕಾಶ್, ಅನುರಾಧಭಟ್ ಭಾಗವಹಿಸುತ್ತಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಸಂಸದ ಎಸ್‌.ಮುನಿಸ್ವಾಮಿ ಪಾಲ್ಗೊಳ್ಳುತ್ತಾರೆ.

ದಶಮಿ ದಿನವಾದ ಸೋಮವಾರ (ಮಾರ್ಚ್‌ 8) ನಾಡಿ ಸಂಧಾನ, ಜಪ-ಪಾರಾಯಣ ನಡೆಯಲಿದೆ. ಮಧ್ಯಾಹ್ನ 12.05ರಿಂದ 12.35ರೊಳಗೆ ಅಭಿಜಿನ್ ಲಗ್ನದಲ್ಲಿ ಕಾಶಿ ವಿಶ್ವನಾಥಸ್ವಾಮಿಗೆ ಮಹಾ ಕುಂಭಾಭಿಷೇಕ ಏರ್ಪಡಿಸಲಾಗಿದೆ. ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಿತ್ರನಟ ಸುದೀಪ್ ಭಾಗವಹಿಸುತ್ತಾರೆ.

ವಿಶೇಷ ಆಹ್ವಾನಿತರಾಗಿ ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ್, ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ಆರ್.ರಮೇಶ್‌ಕುಮಾರ್, ಬೈರತಿ ಸುರೇಶ್, ಕೆ.ವೈ.ನಂಜೇಗೌಡ, ಕೃಷ್ಣಬೈರೇಗೌಡ, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಸಿ.ಆರ್.ಮನೋಹರ್, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಶಾಸಕ ವರ್ತೂರು ಪ್ರಕಾಶ್, ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಭಾಗವಹಿಸುತ್ತಾರೆ.

ಕೋರಗಂಡಹಳ್ಳಿ ಮತ್ತು ಕೋನಾಪುರ ಗ್ರಾಮಸ್ಥರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಗ್ರಾಮದ ಮುಖಂಡರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT