ಶನಿವಾರ, ಮೇ 8, 2021
27 °C
ಸತತ 3ನೇ ದಿನ ಮುಷ್ಕರ: ಬಸ್‌ ನಿಲ್ದಾಣ ಭಣಭಣ

ಕೋಲಾರ: ರಸ್ತೆಗಿಳಿಯದ ಬಸ್‌, ₹ 1.35 ಕೋಟಿ ನಷ್ಟ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ಒತ್ತಾಯಿಸಿ ಕೆಎಸ್ಆರ್‌ಟಿಸಿ ನೌಕರರು ಮುಷ್ಕರ ಮುಂದುವರಿಸಿದ್ದು, 3 ದಿನದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೋಲಾರ ವಿಭಾಗಕ್ಕೆ ಕೋಟ್ಯಂತರ ರೂಪಾಯಿ ಆದಾಯ ಖೋತಾ ಆಗಿದೆ.

ಕೋವಿಡ್‌ ಮತ್ತು ಲಾಕ್‌ಡೌನ್‌ ಸಂದರ್ಭದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದ ಕೆಎಸ್‌ಆರ್‌ಟಿಸಿಯ ಆದಾಯ ಇತ್ತೀಚೆಗೆ ಚೇತರಿಸಿಕೊಂಡಿತ್ತು. ಕಡಿಮೆ ಬಸ್‌ಗಳನ್ನು ಓಡಿಸುತ್ತಿದ್ದರೂ, ಆದಾಯದಲ್ಲಿ ಪ್ರಗತಿ ಕಂಡು ನಷ್ಟ ಇಳಿಮುಖವಾಗಿತ್ತು. ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದ ಸಾಕಷ್ಟು ನಷ್ಟ ಅನುಭವಿಸಿದ್ದ ಸಂಸ್ಥೆಗೆ ಇದೀಗ ನೌಕರರ ಮುಷ್ಕರವು ದೊಡ್ಡ ಪೆಟ್ಟು ಕೊಟ್ಟಿದೆ.

ಮುಷ್ಕರದ ಮೊದಲ ದಿನವಾದ ಬುಧವಾರ (ಏ.7) ಜಿಲ್ಲೆಯಲ್ಲಿ ಸಂಸ್ಥೆಯ ಎಲ್ಲಾ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಗೈರಾಗಿದ್ದರು. ಸಂಸ್ಥೆಯು ಮುಷ್ಕರದ ನಡುವೆಯೂ 5 ಬಸ್‌ಗಳನ್ನು ಮಾತ್ರ ರಸ್ತೆಗಿಳಿಸಿತ್ತು. ಮುಷ್ಕರದ 2ನೇ ದಿನ ಗುರುವಾರ (ಏ.8) ರಸ್ತೆಗಿಳಿದ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಸಂಜೆ ವೇಳೆಗೆ ಬಸ್‌ ಸಂಚಾರ ಸ್ಥಗಿತಗೊಳಿಸಲಾಯಿತು.

ಕೆಎಸ್‌ಆರ್‌ಟಿಸಿ ನೌಕರರು ಶುಕ್ರವಾರವೂ ಮುಷ್ಕರ ಮುಂದುವರಿಸಿದ್ದರಿಂದ ಜಿಲ್ಲೆಯಲ್ಲಿ ಮೂರನೇ ದಿನವೂ ಹೆಚ್ಚಿನ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಜಿಲ್ಲೆಯೊಳಗೆ ಕೆಲ ನಿರ್ದಿಷ್ಟ ಮಾರ್ಗಗಳಲ್ಲಿ ಪೊಲೀಸ್‌ ಬೆಂಗಾವಲಿನಲ್ಲಿ 8 ಬಸ್‌ಗಳು ಮಾತ್ರ ಸಂಚರಿಸಿದವು.

ಮುಷ್ಕರದ ಸಂಗತಿ ತಿಳಿದಿದ್ದ ಸಾರ್ವಜನಿಕರು ಖಾಸಗಿ ಬಸ್‌ ಹಾಗೂ ವಾಹನಗಳ ಮೊರೆ ಹೋದರು. ಖಾಸಗಿ ಬಸ್‌ ನಿಲ್ದಾಣಗಳಲ್ಲಿ ಎಂದಿಗಿಂತ ಹೆಚ್ಚಿನ ಜನಸಂದಣಿ ಕಂಡುಬಂತು. ಖಾಸಗಿ ವಾಹನಗಳ ಮಾಲೀಕರು ಮುಷ್ಕರದ ಲಾಭ ಪಡೆದು ಸಾರ್ವಜನಿಕರಿಂದ ದುಪ್ಪಟ್ಟು ಪ್ರಯಾಣ ದರ ವಸೂಲಿ ಮಾಡುತ್ತಿದ್ದುದ್ದು ಎಲ್ಲೆಡೆ ಸಾಮಾನ್ಯವಾಗಿತ್ತು.

₹ 1.35 ಕೋಟಿ ನಷ್ಟ: ಜಿಲ್ಲಾ ಕೇಂದ್ರ ಕೋಲಾರ, ಮಾಲೂರು, ಮುಳಬಾಗಿಲು, ಕೆಜಿಎಫ್‌ ಹಾಗೂ ಶ್ರೀನಿವಾಸಪುರ ಸೇರಿದಂತೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿಯ 5 ಡಿಪೊಗಳಿವೆ. ಜಿಲ್ಲೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಸಂಪರ್ಕವಿದೆ. ಆಂಧ್ರಪ್ರದೇಶ, ತಮಿಳುನಾಡು ರಾಜ್ಯಕ್ಕೂ ಪ್ರತಿನಿತ್ಯ ನೂರಾರು ಬಸ್‌ ಸಂಚರಿಸುತ್ತವೆ.

ಕೋಲಾರ ವಿಭಾಗದ 5 ಡಿಪೊಗಳಿಂದ ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ 514 ಅನುಸೂಚಿಗಳಲ್ಲಿ (ಶೆಡ್ಯೂಲ್‌) ಬಸ್‌ ಸಂಚರಿಸುತ್ತಿದ್ದವು. ಒಂದು ಅನುಸೂಚಿಗೆ ಕನಿಷ್ಠ 250 ಕಿಲೋ ಮೀಟರ್‌ನಿಂದ ಗರಿಷ್ಠ 500 ಕಿ.ಮೀ ಪ್ರಯಾಣದ ಗುರಿ ಇರುತ್ತದೆ. ಒಟ್ಟಾರೆ 514 ಅನುಸೂಚಿಗಳಿಂದ ದಿನಕ್ಕೆ ಸುಮಾರು 1.50 ಲಕ್ಷ ಕಿ.ಮೀ ದೂರ ಕ್ರಮಿಸಲಾಗುತ್ತಿತ್ತು ಮತ್ತು ಸರಾಸರಿ 1.60 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಟಿಕೆಟ್‌ ಮೂಲಕ ದಿನಕ್ಕೆ ಸರಾಸರಿ ₹ 45 ಲಕ್ಷ ಸಂಗ್ರಹವಾಗುತ್ತಿತ್ತು. ನೌಕರರ 3 ದಿನದ ಮುಷ್ಕರದಿಂದ ಬಸ್‌ಗಳು ಡಿಪೊಗಳಲ್ಲಿ ನಿಂತಲ್ಲೇ ನಿಂತಿದ್ದು, ಸುಮಾರು ₹ 1.35 ಕೋಟಿ ನಷ್ಟವಾಗಿದೆ.

ಕುಸಿದ ವಹಿವಾಟು: ಸದಾ ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಬಸ್‌ ನಿಲ್ದಾಣಗಳು ಮುಷ್ಕರದ ಕಾರಣದಿಂದ ಭಣಗುಡುತ್ತಿವೆ. ನಿಲ್ದಾಣದೊಳಗಿನ ಹಣ್ಣಿನ ಅಂಗಡಿಗಳು, ದಿನಪತ್ರಿಕೆ ಮತ್ತು ಪುಸ್ತಕ ಮಾರಾಟ ಮಳಿಗೆಗಳು, ಹೋಟೆಲ್‌ಗಳಿಗೂ ಮುಷ್ಕರದ ಬಿಸಿ ತಟ್ಟಿದೆ. ನಿಲ್ದಾಣಕ್ಕೆ ಪ್ರಯಾಣಿಕರು ಬಾರದ ಕಾರಣ ಅಂಗಡಿ ಹಾಗೂ ಹೋಟೆಲ್‌ಗಳಲ್ಲಿ ವಹಿವಾಟು ಕುಸಿದಿದೆ.

ಹೋಟೆಲ್‌ ಮಾಲೀಕರು ಗ್ರಾಹಕರ ನಿರೀಕ್ಷೆಯಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥಗಳು ಬಿಕರಿಯಾಗಿದೆ ಹಾಗೆಯೇ ಉಳಿಯುತ್ತಿವೆ. ಮಳಿಗೆಗಳಲ್ಲಿ ವಹಿವಾಟಿಗೆ ಜೋಡಿಸಿಟ್ಟ ಹಣ್ಣುಗಳು ಸ್ಥಳದಲ್ಲೇ ಕೊಳೆಯುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು