ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರ್ಕಯ ಕೊರತೆ: ನಲುಗಿದ ಪ್ರಯಾಣಿಕರು

ನಿತ್ಯ 190ಕ್ಕೂ ಹೆಚ್ಚು ಬಸ್‌ಗಳ ಓಡಾಟ: ಬಸ್‌ ನಿಲ್ದಾಣದಲ್ಲೇ ಆಟೊ ಓಡಾಟ
Last Updated 28 ನವೆಂಬರ್ 2022, 5:00 IST
ಅಕ್ಷರ ಗಾತ್ರ

ಮಾಲೂರು: ಇಲ್ಲಿನ ಬಸ್‌ ನಿಲ್ದಾಣ ಮೂಲಸೌಕರ್ಯಗಳ ಕೊರತೆಯಿಂದ ಅವ್ಯವಸ್ಥೆಯ ಆಗರವಾಗಿದ್ದು, ನಿತ್ಯ 190ಕ್ಕೂ ಹೆಚ್ಚು ಬಸ್‌ಗಳು ನಿಲ್ದಾಣಕ್ಕೆ ಬಂದರೂ ಅಗತ್ಯ ಸೌಲಭ್ಯಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.

ಪಟ್ಟಣದ ಹೃದಯ ಭಾಗದಲ್ಲಿರುವ ಪುರಸಭೆಗೆ ಸೇರಿರುವ ಬಸ್ ನಿಲ್ದಾಣದಲ್ಲಿ ಪ್ರತಿ ದಿನ 82 ಬಸ್‌ ಹಾಗೂ 70 ಖಾಸಗಿ ಬಸ್‌ ಸೇರಿದಂತೆ ಒಟ್ಟು ಸುಮಾರು 190 ಬಸ್‌ ನಿಲ್ದಾಣಕ್ಕೆ ಬಂದರೂ ಮೂಲ ಸೌಕರ್ಯಗಳ ಕೊರತೆಯಿಂದ ಪ್ರಯಾಣಿಕರು ನಲುಗಿದ್ದಾರೆ.

ಪುರಸಭೆಯಿಂದ 1987ರಲ್ಲಿ ನಿರ್ಮಾಣವಾಗಿರುವ ಈ ಹಳೆ ಬಸ್ ನಿಲ್ದಾಣ ಬಹಳ ಕಿರಿದಾಗಿದೆ. ಈಗಿನ ಸಾರಿಗೆ ವ್ಯವಸ್ಥೆಗೆ ಹೊಂದಿಸಿಕೊಳ್ಳಲು ಸಾಧ್ಯವಾಗದೆ, ಪ್ರಯಾಣಿಕರು ರಸ್ತೆ ಬದಿಗಳಲ್ಲಿ ನಿಲ್ಲುವಂತಾಗಿದೆ.

ಮಾಜಿ ಶಾಸಕ ಎ.ನಾಗರಾಜು ಅವರು 1987ರಲ್ಲಿ ಪುರಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪಟ್ಟಣದ ಕಾರಂಜಿ ಕಟ್ಟೆ (ಕೆರೆಯಲ್ಲಿ ) ಬಸ್ ನಿಲ್ದಾಣ ನಿರ್ಮಾಣ ಮಾಡಲಾಯಿತು. ಆ ದಿನಗಳ ಜನ ಸಂಖ್ಯೆಗೆ ಅನುಗುಣವಾಗಿದ್ದ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್‌ ಹಾಗೂ ಖಾಸಗಿ ಬಸ್‌ಗಳು ಒಟ್ಟಾಗಿ ಬಂದು ಹೋಗುತ್ತಿದ್ದವು.

ಮಾಲೂರು ಪಟ್ಟಣದಿಂದ ರಾಜಾಧಾನಿಬೆಂಗಳೂರು 48 ಕಿ.ಮೀ ದೂರದಲ್ಲಿ ಇರುವುದರಿಂದ ಬಹಳಷ್ಟು ಮಂದಿ ಉದ್ಯೋಗಕ್ಕಾಗಿ ಹಾಗೂ ವಿದ್ಯಾಭ್ಯಾಸಕ್ಕಾಗಿ ಪ್ರತಿ ದಿನ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ. ಕೇವಲ 2 ಎಕರೆಯಲ್ಲಿ ನಿರ್ಮಾಣವಾಗಿರುವ ಬಸ್ ನಿಲ್ದಾಣದಲ್ಲಿ ಅಂಗಡಿ ಮಳಿಗೆ, ಹೂ ಅಂಗಡಿ, ನೀರಿನ ಮಳಿಗೆಗಳು ಆವರಿಸಿಕೊಂಡಿವೆ. ಉಳಿದಂತೆ ಆಟೊಗಳುಬಸ್ ನಿಲ್ದಾಣದಲ್ಲೇ ನಿಲ್ಲುವುದರಿಂದ
ಪ್ರಯಾಣಿಕರು ನಿಲ್ಲಲು ಸ್ಥಳವಿಲ್ಲದಂತಾಗಿದೆ.

ಜೀವಕ್ಕೆ ರಕ್ಷಣೆ ಇಲ್ಲದ ಬಸ್ ನಿಲ್ದಾಣ: ಬಸ್‌ಗಾಗಿ ಕಾಯುವ ಪ್ರಯಾಣಿಕರಿಗೆ ಬಸ್ ನಿಲ್ದಾಣದಲ್ಲಿ ನಿಲ್ಲಲು ಜಾಗವಿಲ್ಲ. ಇದರಿಂದ ಬಸ್‌ಗಳ ಬಳಿ ನಿಲ್ಲಬೇಕು. ಯಾವ ಬಸ್‌ ಯಾವಾಗ ಚಲಿಸುತ್ತದೆ ಎಂಬುದು ಪ್ರಯಾಣಿಕರಿಗೆ ಗೊತ್ತಾಗುವುದಿಲ್ಲ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಖಾಸಗಿ ಬಸ್‌ ಒಂದೇ ನಿಲ್ದಾಣದಲ್ಲಿರುವುದರಿಂದ ಚಾಲಕರ ನಡುವೆ ಪ್ರತಿ ದಿನ ಜಗಳ ನಡೆಯುತ್ತಿರುತ್ತದೆ.

ಮೂಲ ಸೌಕರ್ಯಗಳ ಕೊರತೆ: ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಯಾವುದೇ ರೀತಿಯ ಮೂಲ ಸೌಲಭ್ಯ ಇಲ್ಲ. ಕುಡಿಯುವ ನೀರು, ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯಲು ಸೂರು, ಕುಳಿತುಕೊಳ್ಳಲು ಆಸನ ಇಲ್ಲ. ನಿಲ್ದಾಣದಲ್ಲಿ ಶೌಚಾಲಯ ಪರಿಸ್ಥಿತಿ ಶೋಚನೀಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT