ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿಗೆ ಅರಳಿದ ಲಕ್ಷ್ಮೀಪ್ರಿಯ ತಾವರೆ

Last Updated 15 ನವೆಂಬರ್ 2020, 16:48 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಉತ್ತರ ಭಾಗದ ಗಡಿ ಸಮೀಪದ ಕೆಲವು ಕೆರೆಗಳು ಹಾಗೂ ಕುಂಟೆಗಳಲ್ಲಿ ತಾವರೆ ಹೂಗಳು ಅರಳಿ ಕಣ್ಸೆಳೆಯುತ್ತಿವೆ. ಈ ಬಾರಿ ವಿಶೇಷವಾಗಿ ತುಂಬಿದ ಕೆರೆಗಳಲ್ಲಿ ಬಿಳಿ ತಾವರೆ ಹೂಗಳು ಕಾಣಿಸಿಕೊಂಡಿವೆ.

ತಾವರೆ ಲಕ್ಷ್ಮಿಗೆ ಅತ್ಯಂತ ಪ್ರಿಯವಾದ ಹೂವು ಎಂಬ ನಂಬಿಕೆ ಇದೆ. ಹಾಗಾಗಿ ವರಮಹಾಲಕ್ಷ್ಮಿ ವ್ರತ ಸೇರಿದಂತೆ, ಲಕ್ಷ್ಮಿಗೆ ಸಂಬಂಧಿಸಿದ ಯಾವುದೇ ಪೂಜಾ ಕಾರ್ಯಕ್ರಮದಲ್ಲಿ ಈ ಹೂವು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ತಾಲ್ಲೂಕಿನ ಪುರಾತನ ಕುಂಟೆಗಳಲ್ಲಿ ತಾವರೆ ಸಹಜವಾಗಿಯೇ ಬೆಳೆಯುತ್ತವೆ. ಮಳೆ ಸುರಿಯುವುದು ಕಡಿಮೆಯಾದಂತೆ, ಕುಂಟೆಗಳು ಬತ್ತಿಹೋಗಿ ತಾವರೆ ನೆಲೆ ಕಳೆದುಕೊಂಡಿದ್ದವು. ಆದರೆ ಕಳೆದ ವರ್ಷ ಹಾಗೂ ಈ ವರ್ಷ ಮಳೆ ಪ್ರಮಾಣ ಹೆಚ್ಚಿ ಕುಂಟೆಗಳಿಗೆ ನೀರು ಬಂದಿರುವುದರಿಂದ ಅಲ್ಲಲ್ಲಿ ಮತ್ತೆ ತಾವರೆ ಹೂವು ಕಾಣಿಸಿಕೊಂಡಿದೆ.

ಕೆಲವರು ಈ ಹೂಗಳನ್ನು ಕಿತ್ತು ತಂದು ಹಬ್ಬದ ದಿನ ಮನೆ ಮನೆಗೆ ಕೊಂಡೊಯ್ದು ಮಾರುತ್ತಾರೆ. ಇತರ ಹೂಗಳಂತೆ ಈ ಹೂವಿಗೂ ದುಬಾರಿ ಬೆಲೆ. ಉತ್ತಮ ಗುಣಮಟ್ಟದ ಹೂವೊಂದಕ್ಕೆ ₹20ರಿಂದ 30. ವ್ರತಾಚರಣೆ ಮಾಡುವವರು ದೇವಿಗೆ ತಾವರೆ ಹೂವಿನ ಅಲಂಕಾರ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ಹಾಗಾಗಿ ಬೇಡಿಕೆ ಹೆಚ್ಚುತ್ತದೆ.

ಕೆಲವು ರೈತರು ಕೊಳವೆ ಬಾವಿ ನೀರು ಸಂಗ್ರಹಿಸುವ ಗದ್ದೆಗಳಲ್ಲಿ ತಾವರೆ ಹೂವನ್ನು ಬೆಳೆಯುತ್ತಿದ್ದರು. ತಾವರೆಯ ಅಗಲವಾದ ಎಲೆಗಳು ನೀರಿನ ಮೇಲೆ ಹರಡಿಕೊಂಡು, ನೀರು ಬಿಸಿಲಿನ ತಾಪಕ್ಕೆ ಹಾವಿಯಾಗುವುದನ್ನು ಸ್ವಲ್ಪ ಮಟ್ಟಿಗೆ ತಡೆಯುತ್ತವೆ. ಹೀಗೆ ಬೆಳೆದ ತಾವರೆ ಹೂಗಳನ್ನು ವಿಶೇಷ ಸಂದರ್ಭಗಳಲ್ಲಿ ಕಿತ್ತು ಸಮೀಪದ ಪಟ್ಟಣಕ್ಕೆ ಕೊಂಡೊಯ್ದು ಮಾರಿ ನಾಲ್ಕು ಕಾಸು ಸಂಪಾದಿಸುತ್ತಿದ್ದರು. ಅಂತರ್ಜಲ ಕುಸಿತದಿಂದಾಗಿ ಹೆಚ್ಚಿನ ಸಂಖ್ಯೆಯ ಕೊಳವೆ ಬಾವಿಗಳು ಬತ್ತಿಹೋಗಿವೆ. ಗದ್ದೆಗಳಲ್ಲಿ ತಾವರೆ ಕೃಷಿ ನಿಂತುಹೋಗಿದೆ.

ತಾಲ್ಲೂಕಿನ ಕೆಸರು ತುಂಬಿದ ಕೆರೆ ಹಾಗೂ ಕಾಲುವೆಗಳಲ್ಲೂ ತಾವರೆ ಬೆಳೆಯುತ್ತಿತ್ತು. ಹಿಂದೆ ಈ ಹೂವಿಗೆ ಆರ್ಥಿಕ ಮೌಲ್ಯ ಇರಲಿಲ್ಲ. ಬಿರಿದ ಹೂಗಳು ನಿಸರ್ಗ ಪ್ರಿಯರ ಕಣ್ಣಿಗೆ ಹಬ್ಬ ಉಂಟುಮಾಡುತ್ತಿದ್ದವು. ಈಗ ಲಕ್ಷ್ಮೀಪ್ರಿಯ ತಾವರೆ ಮಾರಾಟದ ಸರಕಾಗಿ ಪರಿಣಮಿಸಿದೆ. ತಾಲ್ಲೂಕಿನಲ್ಲಿ ಕೆಂಪು ಹಾಗೂ ಬಿಳಿ ತಾವರೆ ಕಂಡುಬರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಬಿಳಿ ತಾವರೆ ಕಾಣುವುದು ಅಪರೂಪವಾಗುತ್ತಿದೆ. ಕೆಂಪು ತಾವರೆ ಸಾಮಾನ್ಯವಾಗಿ ಕಂಡುಬರುತ್ತದೆ.

ತಾಲ್ಲೂಕಿನ ಅಡ್ಡಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿವಾರಿಪಲ್ಲಿ ಗ್ರಾಮದ ಕೆರೆಯ ತುಂಬಾ ಬಿಳಿ ತಾವರೆ ಹೂಗಳು ಅರಳಿ ನಗುತ್ತಿವೆ. ಕೆಸರಿನಿಂದ ಕೂಡಿರುವ ಈ ಪುರತಾತನ ಬೊಗಸೆಯಂಥ ಕೆರೆ ಹಿಂದಿನಿಂದಲೂ ತಾವರೆಗೆ ಪ್ರಸಿದ್ಧಿ ಪಡೆದಿದೆ. ಅದರಲ್ಲೂ ನೈಸರ್ಗಿಕವಾಗಿ ಬಿಳಿ ತಾವರೆ ಬೆಳೆಯುವ ಅಪರೂಪದ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

‘ಕೆರೆಯಲ್ಲಿ ಬೆಳೆದಿರುವ ಬಿಳಿ ತಾವರೆ ಹೂವಿನ ಆಕರ್ಷಣೆಗೆ ಒಳಗಾದ ಸ್ಥಳೀಯರಲ್ಲ ಜನರು, ಹೂವನ್ನು ಕೀಳಲು ಕೆರೆಗೆ ಇಳಿದು ತೊಂದರೆಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಎಚ್ಚರ ತಪ್ಪಿದರೆ ಕೆಸರಲ್ಲಿ ಹೂತುಹೋಗುವ ಸಂಭವ ಇರುತ್ತದೆ. ತಾವರೆ ಪ್ರಿಯರು ಉದ್ದವಾದ ಶಿವದೋಟಿ ನೆರವಿನಿಂದ ಹೂಗಳನ್ನು ಕಿತ್ತುಕೊಳ್ಳುವುದು ಕ್ಷೇಮಕರ’ ಎಂದು ರೈತ ವೆಂಕಟರವಣ ತಿಳಿಸಿದರು.

‘ತಾವರೆ ಹೂ ಕೀಳಲು ನೀರಿಗೆ ಇಳಿಯುವ ಮುನ್ನ ಎಚ್ಚರ ವಹಿಸಬೇಕು. ಈಜು ಬರದ ವ್ಯಕ್ತಿಗಳು ಕೆರೆಗೆ ಇಳಿಯದಿರುವುದು ಒಳ್ಳೆಯದು’ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT