ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದರು ಬಹಿರಂಗ ಚರ್ಚೆಗೆ ಬರಲಿ

ಡಿಸಿಸಿ ಬ್ಯಾಂಕ್‌ ವಿರುದ್ಧ ಹೇಳಿಕೆ: ನಿರ್ದೇಶಕ ದಯಾನಂದ್‌ ಸವಾಲು
Last Updated 17 ಡಿಸೆಂಬರ್ 2019, 15:25 IST
ಅಕ್ಷರ ಗಾತ್ರ

ಕೋಲಾರ: ‘ಸಹಕಾರಿ ಕ್ಷೇತ್ರದ ಬಗ್ಗೆ ಮಾಹಿತಿಯಿಲ್ಲದೆ ಅಸಂಬದ್ಧವಾಗಿ ಮಾತನಾಡಿದರೆ ಜನರ ಆಕ್ರೋಶಕ್ಕೆ ಗುರಿಯಾಗುತ್ತೀರಿ. ಬ್ಯಾಂಕ್‌ನ ಸಾಲ ವಿತರಣೆಯಲ್ಲಿ ಅಕ್ರಮ ನಡೆದಿದ್ದರೆ ದಾಖಲೆಪತ್ರ ಸಮೇತ ಬಹಿರಂಗ ಚರ್ಚಗೆ ಬನ್ನಿ. ಉತ್ತರ ಕೊಡಲು ಸಿದ್ಧ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್ ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಸವಾಲು ಹಾಕಿದರು.

ಜಿಲ್ಲಾ ಕೇಂದ್ರದಲ್ಲಿ ಸೋಮವಾರ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದರು, ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ ಡಿಸಿಸಿ ಬ್ಯಾಂಕ್‌ನಿಂದ ಸಾಲ ಕೊಡುವಂತೆ ಬ್ಯಾಂಕ್‌ನ ಬಗ್ಗೆ ಹಗುರವಾಗಿ ಮಾತನಾಡಿದ್ದರು.

ಇದಕ್ಕೆ ಇಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ದಯಾನಂದ್‌, ‘ಈ ಹಿಂದೆ ಬ್ಯಾಂಕ್‌ನ ವಿರುದ್ಧ ಮನಬಂದಂತೆ ಹೇಳಿಕೆ ನೀಡಿದ್ದಕ್ಕೆ ಜನ ತಿರುಗಿಬಿದ್ದಿದ್ದರು. ಜಿಲ್ಲೆಯಲ್ಲಿ ಸಂಸದರಿಗೆ ಎಲ್ಲಾ ಜಾತಿ ಹಾಗೂ ವರ್ಗದ ಜನರು ಮತ ಹಾಕಿದ್ದಾರೆ ಎಂಬುದನ್ನು ಮರೆಯಬಾರದು. ಬ್ಯಾಂಕ್‌ನ ಆಡಳಿತ ಮಂಡಳಿ ಪಕ್ಷಾತೀತವಾಗಿ ಕೆಲಸ ಮಾಡಿದೆ’ ಎಂದರು.

‘ಚುನಾವಣೆಯಲ್ಲಿ ಗೆದ್ದು ಹಲವು ತಿಂಗಳು ಕಳೆದಿದ್ದು, ಸಂಸದರ ನಿಧಿಯಿಂದ ಎಷ್ಟು ಅನುದಾನ ತಂದಿದ್ದೀರಿ. ನಬಾರ್ಡ್, ಅಫೆಕ್ಸ್‌ ಬ್ಯಾಂಕ್‌ ಹಾಗೂ ಬಡವರ ಠೇವಣಿ ಹಣದಿಂದ ರೈತರಿಗೆ, ಮಹಿಳೆಯರಿಗೆ ಸಾಲ ನೀಡಲಾಗುತ್ತಿದೆ. ಇದರಲ್ಲಿ ಸರ್ಕಾರದ ಪಾತ್ರವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರದ ಸರಕು ಸೇವಾ ತೆರಿಗೆ (ಜಿಎಸ್‌ಟಿ), ಬೆಳೆ ಸಾಲ ಕಡಿತ, ತೆರಿಗೆ ಹೆಚ್ಚಳದಿಂದ ಬ್ಯಾಂಕ್‌ಗಳ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ರೈತರು, ಮಹಿಳೆಯರು ಹಾಗೂ ಬಡವರ ಮೇಲೆ ಸಂಸದರಿಗೆ ಕಾಳಜಿಯಿದ್ದರೆ ಕೇಂದ್ರದ ಮೇಲೆ ಒತ್ತಡ ಹಾಕಿ ನಿಯಮಾವಳಿ ಸಡಿಲಗೊಳಿಸುವಂತೆ ಮಾಡಲಿ’ ಎಂದು ಹೇಳಿದರು.

‘ಚುನಾವಣೆಯಲ್ಲಿ ಗೆದ್ದ ನಂತರ ಸಂಸದರು ಹಲವು ಬಾರಿ ಬ್ಯಾಂಕ್ ವಿರುದ್ಧ ಮಾತನಾಡಿದ್ದಾರೆ. ಅವರು ಮೊದಲು ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡಿ ಜನರ ಮೆಚ್ಚುಗೆ ಗಳಿಸಲಿ. ಪ್ರತಿ ಕ್ಷೇತ್ರದಲ್ಲೂ ಹಿಡಿತ ಸಾಧಿಸಲು ಯತ್ನಿಸಿದರೆ ಮುಖಭಂಗ ಅನುಭವಿಸಬೇಕಾಗುತ್ತದೆ. ಚುನಾವಣೆಯಲ್ಲಿ ಜನ ಏಕೆ ಮತ ಹಾಕಿದ್ದಾರೆ ಎಂಬುದನ್ನು ಅರಿತು ಗೌರವಯುತವಾಗಿ ನಡೆದುಕೊಳ್ಳಬೇಕು’ ಎಂದು ಕುಟುಕಿದರು.

ಹೆಚ್ಚುಗಾರಿಕೆ ಇಲ್ಲ: ‘ಕ್ಷೇತ್ರದಲ್ಲಿ ಕೆ.ಎಚ್.ಮುನಿಯಪ್ಪ ಅವರ ವಿರೋಧಿ ಅಲೆಯಿಂದ ಮುನಿಸ್ವಾಮಿ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಮುನಿಸ್ವಾಮಿಯವರ ಹೆಚ್ಚುಗಾರಿಕೆ ಏನಿಲ್ಲ. ಜಿಲ್ಲೆಯಲ್ಲಿ ಮೋದಿ ಅಲೆ ಕೆಲಸ ಮಾಡಿಲ್ಲ ಎಂಬುದಕ್ಕೆ ವಿಧಾನಸಭೆ ಚುನಾವಣಾ ಫಲಿತಾಂಶವೇ ನಿದರ್ಶನ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬೇರೆ ಯಾರೇ ಸ್ಪರ್ಧಿಸಿದ್ದರೂ ಗೆಲ್ಲುತ್ತಿದ್ದರು’ ಎಂದು ವ್ಯಂಗ್ಯವಾಡಿದರು.

‘ಸ್ಥಳೀಯ ಶಾಸಕರ ಬೆಂಬಲದಿಂದಾಗಿ ಮುನಿಸ್ವಾಮಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಶಾಸಕ ಶ್ರೀನಿವಾಸಗೌಡರ ಮನವಿಯಂತೆ ನಾವೆಲ್ಲಾ ಲೋಕಸಭಾ ಚುನಾವಣೆಯಲ್ಲಿ ಮುನಿಸ್ವಾಮಿ ಅವರ ಪರ ಕೆಲಸ ಮಾಡಿದ್ದೆವು. ಇದನ್ನು ಅವರು ಮರೆಯಬಾರದು. ಶಾಸಕರು ಬೆಂಬಲಿಸದಿದ್ದರೆ ಮುನಿಸ್ವಾಮಿ ಅವರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಗೆಲ್ಲುವುದಿಲ್ಲ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT