ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬಿಇಒ ಕಚೇರಿ ಭ್ರಷ್ಟಾಚಾರ ಮುಕ್ತವಾಗಲಿ- ನಾರಾಯಣಸ್ವಾಮಿ ಸಲಹೆ

ಅಧಿಕಾರಿಗಳ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಸಲಹೆ
Last Updated 16 ಆಗಸ್ಟ್ 2020, 14:19 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳು ಭ್ರಷ್ಟಾಚಾರ ಮುಕ್ತವಾಗಬೇಕು. ಬಿಇಒ ಸೇರಿದಂತೆ ಇಲಾಖೆಯ ಸಿಬ್ಬಂದಿ ಹೋಬಳಿ ಮಟ್ಟಕ್ಕೆ ಹೋಗಿ ಸಮಸ್ಯೆ ಬಗೆಹರಿಸುವ ಪ್ರಾಯೋಗಿಕ ಯೋಜನೆ ಜಾರಿಗೊಳಿಸಿ’ ಎಂದು ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಸಲಹೆ ನೀಡಿದರು.

ಇಲ್ಲಿ ಇತ್ತೀಚೆಗೆ ನಡೆದ ಜಿಲ್ಲೆಯ ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ಸಭೆಯಲ್ಲಿ ಶಿಕ್ಷಕರ ಕುಂದು ಕೊರತೆ ಆಲಿಸಿ ಮಾತನಾಡಿ, ‘ರಾಜ್ಯದ ಬೇರೆ ಜಿಲ್ಲೆಗಳ ಕೆಲ ತಾಲ್ಲೂಕುಗಳಲ್ಲಿ ಲಂಚ ಕೊಟ್ಟರೆ ಮಾತ್ರ ಬಿಇಒ ಕಚೇರಿಯಲ್ಲಿ ಕೆಲಸವಾಗುತ್ತದೆ ಎಂಬ ಅಪವಾದವಿದೆ. ಜಿಲ್ಲೆಯಲ್ಲಿ ಇಂತಹ ದೂರು ಜಿಲ್ಲೆಯಲ್ಲಿ ಬಾರದಂತೆ ಎಚ್ಚರ ವಹಿಸಿ’ ಎಂದು ಕಿವಿಮಾತು ಹೇಳಿದರು.

‘ಕೊರೊನಾ ಸಂಕಷ್ಟವು ಜನರಲ್ಲಿ ದಾನ, ಧರ್ಮದ ಗುಣ ಬೆಳೆಸಿದೆ. ಆದರೆ, ಅಧಿಕಾರಿಗಳು ಹಳೇ ಚಾಳಿ ಮುಂದುವರಿಸಬೇಡಿ. ಶಿಕ್ಷಕರು ಕಚೇರಿಗೆ ಅಲೆಯಬಾರದು. ಹೋಬಳಿ ಮಟ್ಟದಲ್ಲಿ ನೀವೇ ಹೋಗಿ ಅದಾಲತ್ ಮಾದರಿಯಲ್ಲಿ ಶಿಕ್ಷಕರ ಸಮಸ್ಯೆ ಬಗೆಹರಿಸಿ’ ಎಂದು ತಿಳಿಸಿದರು.

‘ಶಿಕ್ಷಣ ಇಲಾಖೆಯು ಸಂಸ್ಕಾರ ಕಲಿಸುತ್ತದೆ. ಶಿಕ್ಷಕರು ಕಚೇರಿಗೆ ಬಂದಾಗ ಕೂರಿಸಿ ಸೌಜನ್ಯದಿಂದ ಮಾತನಾಡಿ ಕೆಲಸ ಮಾಡಿಕೊಡುವುದು ಧರ್ಮ. ಕಡತಗಳು ಬಾಕಿ ಇದ್ದರೆ ಶೀಘ್ರವೇ ಇತ್ಯರ್ಥಗೊಳಿಸಿ. ವೇತನ ವಿಳಂಬ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ. ಇದಕ್ಕೆ ಕಾರಣರಾದ ಸಿಬ್ಬಂದಿ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.

ಶಿಕ್ಷಕರಿಗೆ ಅಭಿನಂದನೆ: ‘ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ಎ ಗ್ರೇಡ್ ಪಡೆದಿದೆ, ಇದೊಂದು ಸಂತಸದ ವಿಷಯ. ಕೋವಿಡ್ ಆತಂಕ ದೂರವಾದ ನಂತರ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಅವರನ್ನು ಜಿಲ್ಲೆಗೆ ಆಹ್ವಾನಿಸಿ ಸಾಧಕ ಶಿಕ್ಷಕರು ಮತ್ತು ಶಾಲೆಗಳನ್ನು ಅಭಿನಂದಿಸಲಾಗುತ್ತದೆ’ ಎಂದರು.

‘ಈ ಬಾರಿ ಖಂಡಿತ ಶಿಕ್ಷಕರ ವರ್ಗಾವಣೆ ನಡೆಯುತ್ತದೆ. ಈ ಸಂಬಂಧ ಆ.20ರೊಳಗೆ ಹೊಸ ಮಾರ್ಗಸೂಚಿ ಬಿಡುಗಡೆಯಾಗಲಿದೆ. ಸಚಿವ ಸುರೇಶ್‌ಕುಮಾರ್‌ ಅವರು ಅಧಿಕಾರಿಗಳ ವಿರೋಧದ ನಡುವೆಯೂ ವರ್ಗಾವಣೆ ಮನವಿಗೆ ಸ್ಪಂದಿಸಿದ್ದಾರೆ’ ಎಂದು ವಿವರಿಸಿದರು.

ವೇತನಕ್ಕೆ ಕ್ರಮ: ‘ಕೋವಿಡ್‌ ಕಾರಣಕ್ಕೆ ಖಾಸಗಿ ಶಾಲಾ ಶಿಕ್ಷಕರಿಗೆ ವೇತನವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ಒಬ್ಬರಿಗೆ ಕನಿಷ್ಠ ₹ 10 ಸಾವಿರ ನೀಡಲು ₹ 150 ಕೋಟಿ ಅಗತ್ಯವಿದೆ. ಈ ಸಂಬಂಧ ಸಚಿವ ಸುರೇಶ್‌ಕುಮಾರ್‌ ಈಗಾಗಲೇ ಸಭೆ ನಡೆಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಡಿಡಿಪಿಐ ಕೆ.ಎಂ.ಜಯರಾಮರೆಡ್ಡಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಡಿವೈಪಿಸಿ ಮೋಹನ್ ಬಾಬು, ಬಿಸಿಯೂಟ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಬಿಇಒಗಳಾದ ಕೆ.ಎಸ್.ನಾಗರಾಜಗೌಡ, ಉಮಾದೇವಿ, ಕೃಷ್ಣಮೂರ್ತಿ, ಗಿರಿಜೇಶ್ವರಿದೇವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT