ಮಂಗಳವಾರ, ಡಿಸೆಂಬರ್ 10, 2019
19 °C
ಬಿಜೆಪಿ ಪರ ಶಾಸಕ ಶ್ರೀನಿವಾಸಗೌಡ ಮೃದು ಧೋರಣೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯಲಿ: ಜೆಡಿಎಸ್‌ ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದು ಒಂದೂವರೆ ವರ್ಷ ಕಳೆದಿಲ್ಲ. ಮತ್ತೆ ಚುನಾವಣೆಗೆ ಜನರ ಮುಂದೆ ಹೋಗಲು ಕಷ್ಟವಾಗುತ್ತದೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯಬೇಕು’ ಎಂದು ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜನರು ಹಾಗೂ ಶಾಸಕರು ಪದೇ ಪದೇ ಚುನಾವಣೆ ಬಯಸಲ್ಲ. ಮೂರೂ ಪಕ್ಷಗಳ ಶಾಸಕರಿಗೆ ಮತ್ತೆ ಚುನಾವಣೆ ಬೇಕಿಲ್ಲ. ಈ ಕಾರಣದಿಂದ ಬಿಜೆಪಿ ಸರ್ಕಾರ ಇರೋದು ಒಳ್ಳೆಯದು’ ಎಂದು ಪರೋಕ್ಷವಾಗಿ ಬಿಜೆಪಿ ಪರ ಒಲವು ತೋರಿದರು.

‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೂ ಪಕ್ಷದ ಶಾಸಕರ ಹಿತದೃಷ್ಟಿಯಿಂದ ಮಾತನಾಡುತ್ತಿದ್ದಾರೆಯೇ ಹೊರತು ಅವರಿಗೆ ಬೇರೆ ಉದ್ದೇಶವಿಲ್ಲ. ನಾನು ಮುಚ್ಚು ಮರೆ ಮಾಡುತ್ತಿಲ್ಲ. ವಾಸ್ತವಾಂಶ ನೇರವಾಗಿ ಹೇಳುತ್ತೇನೆ. ಮತ್ತೆ ಚುನಾವಣೆ ಎದುರಾದರೆ ನಾನು ಸ್ಪರ್ಧಿಸಲ್ಲ. ಹಿಂದಿನ ಚುನಾವಣೆಗೆ ಮಾಡಿದ ಸಾಲ ಇನ್ನೂ ತೀರಿಸಿಲ್ಲ. ಚುನಾವಣೆಗೆ ಹೋದರೆ ಎಲ್ಲಾ ಪಕ್ಷಗಳಿಗೂ ತೊಂದರೆ’ ಎಂದರು.

‘ಈಗ ಚುನಾವಣೆ ಎದುರಿಸುವುದು ಅಷ್ಟು ಸುಲಭವಲ್ಲ. ಚುನಾವಣೆಯಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡಬೇಕು. ಬೈರೇಗೌಡರ ಕಾಲದಲ್ಲಿ ಎಲೆ ಅಡಿಕೆ ಖರ್ಚು ನೋಡಿಕೊಂಡರೆ ಸಾಕು ಎನಿಸುತ್ತಿತ್ತು. ಆದರೆ, ಈಗ ಮತದಾರರೂ ಹಿಂದಿನಂತಿಲ್ಲ. ಮತದಾರರು ಮಹಾ ಸಾಚಾಗಳಲ್ಲ. ಯಾರೂ ದುಡ್ಡು ಕೊಡುತ್ತಾರೊ ಅವರಿಗೆ ಮತ ಹಾಕುತ್ತಾರೆ’ ಎಂದು ಮಾರ್ಮಿಕವಾಗಿ ನುಡಿದರು.

ದುಡ್ಡು ಕೊಡಲಿಲ್ಲ: ‘ಕೋಲಾರ ನಗರಸಭೆ ಚುನಾವಣೆಯಲ್ಲಿ ನಾನು ಜನಕ್ಕೆ ದುಡ್ಡು ಕೊಡಲಿಲ್ಲ. ಅದಕ್ಕೆ ಜೆಡಿಎಸ್‌ ಅಭ್ಯರ್ಥಿಗಳು ಸೋತರು. ಚುನಾವಣೆಯಲ್ಲಿ ಯಾರು ಹೆಚ್ಚು ಹಣ ಖರ್ಚು ಮಾಡಿದ್ದಾರೋ ಅವರೆಲ್ಲಾ ಗೆದ್ದಿದ್ದಾರೆ. ದಿನ ಕಳೆದಂತೆ ಚುನಾವಣೆಗಳ ಸ್ವರೂಪ ಬದಲಾಗುತ್ತಿದೆ. ಚುನಾವಣಾ ವೆಚ್ಚ ಹೆಚ್ಚುತ್ತಿದೆ. ನಮ್ಮಂತಹವರು ಚುನಾವಣೆಯಿಂದ ದೂರ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಹೇಳಿದರು.

‘ನಗರಸಭೆ ಚುನಾವಣೆಯಲ್ಲಿ ಗೆದ್ದಿರುವ ಸದಸ್ಯರು ಸಾರ್ವಜನಿಕರ ಹಿತ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಸದಸ್ಯತ್ವಕ್ಕೆ ಕಳಂಕ ಬಾರದಂತೆ ಎಚ್ಚರಿಕೆ ವಹಿಸಬೇಕು. ನಗರದಲ್ಲಿ ಕುಡಿಯುವ ನೀರು, ಕಸ, ರಸ್ತೆ ಸಮಸ್ಯೆ ಗಂಭೀರವಾಗಿದ್ದು, ಇವುಗಳ ಪರಿಹಾರಕ್ಕೆ ಸಜ್ಜಾಗಬೇಕು. ಮತದಾರರ ನೋವು ನಲಿವಿಗೆ ಸ್ಪಂದಿಸುವುದು ಸದಸ್ಯರ ಕರ್ತವ್ಯ’ ಎಂದು ಕಿವಿಮಾತು ಹೇಳಿದರು.

‘ಚುನಾವಣೆಯಲ್ಲಿ ಸೋಲು ಗೆಲುವು ಸಹಜ. ಸೋಲೇ ಗೆಲುವಿನ ಮೆಟ್ಟಿಲೆಂದು ತಿಳಿದು ಕಾರ್ಯಕರ್ತರು ಕೆಲಸ ಮಾಡಬೇಕು. ನಾನೂ 4 ಬಾರಿ ಶಾಸಕನಾಗಿದ್ದೇನೆ, 2 ಬಾರಿ ಸೋತಿದ್ದೇನೆ. ಸೋಲಿನಿಂದ ಕಲಿಯಬೇಕಾದದ್ದು ಸಾಕಷ್ಟಿದೆ. ಮುಖಂಡರು ಕಾರ್ಯಕರ್ತರನ್ನು ಸಂಘಟಿಸಿ ಪಕ್ಷ ಬಲಪಡಿಸಬೇಕು’ ಎಂದು ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು