ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಗಣಿಗಾರಿಕೆ ಆರಂಭವಾಗಲಿ

Last Updated 16 ಜನವರಿ 2020, 13:37 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯದ ಗಡಿ ಜಿಲ್ಲೆಯಾದ ಕೋಲಾರ ಜಿಲ್ಲೆಯಲ್ಲಿ ಕನ್ನಡ ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕನ್ನಡದ ಕಾರ್ಯಕ್ರಮಗಳು ಹೆಚ್ಚಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ಇಲ್ಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಕನ್ನಡ ಶೇ 100ರಷ್ಟು ಆಡಳಿತ ಭಾಷೆಯಾಗಬೇಕು. ದೇಶಕ್ಕೆ ಚಿನ್ನ ಕೊಟ್ಟ ಕೋಲಾರವು ಮತ್ತೆ ಏನಾದರೂ ಕೊಡುಗೆ ನೀಡಿ ಖ್ಯಾತಿ ಗಳಿಸಬೇಕು. ಚಿನ್ನದ ಗಣಿಗಾರಿಕೆ ಪುನರಾರಂಭವಾಗಬೇಕು’ ಎಂದು ತಿಳಿಸಿದರು.

‘ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಜಿಲ್ಲೆಯ ಕೆರೆಗಳು ತುಂಬುತ್ತಿವೆ. ಎತ್ತಿನಹೊಳೆ ಯೋಜನೆ ಪೂರ್ಣಗೊಂಡು ನೀರು ಬಂದರೆ ಜಿಲ್ಲೆಯು ಮಂಡ್ಯ ಜಿಲ್ಲೆಯಂತೆ ಹಸಿರಿನಿಂದ ಕಂಗೊಳಿಸುತ್ತದೆ. ಸದ್ಯ ಕೆ.ಸಿ ವ್ಯಾಲಿ ನೀರು ಜಿಲ್ಲೆಗೆ ಆಶ್ರಯವಾಗಿದೆ. ಮುಳಬಾಗಿಲು ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡುತ್ತೇನೆ’ ಎಂದು ಭರವಸೆ ನೀಡಿದರು.

‘ಮುಳಬಾಗಿಲಿನಲ್ಲಿ ಇತ್ತೀಚೆಗೆ ನಡೆದ ಉದ್ಯೋಗ ಮೇಳದಲ್ಲಿ 950 ಮಂದಿಗೆ ಉದ್ಯೋಗ ಸಿಕ್ಕಿದೆ. ಫೆ.11 ಮತ್ತು 12ರಂದು ಜಿಲ್ಲಾ ಕೇಂದ್ರದಲ್ಲಿ ಬೃಹತ್‌ ಉದ್ಯೋಗ ಮೇಳ ನಡೆಸಲಾಗುತ್ತದೆ. ಉದ್ಯೋಗ ಮೇಳದಲ್ಲಿ 150 ಕಂಪನಿಗಳು ಭಾಗವಹಿಸುತ್ತವೆ. 6 ಸಾವಿರ ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯಿದೆ’ ಎಂದು ವಿವರಿಸಿದರು.

‘ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿರುವ ಖಾಸಗಿ ಕಂಪನಿಗಳು ಉದ್ಯೋ ನೀಡುವಾಗ ಮೊದಲು ಸ್ಥಳೀಯರಿಗೆ ಆದ್ಯತೆ ಕೊಡಬೇಕು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಕಚೇರಿ ಕಟ್ಟಡಕ್ಕೆ ನಿವೇಶನ ನೀಡುತ್ತೇವೆ. ಸಮಿತಿ ರಚಿಸಿ ಒಂದು ವರ್ಷದೊಳಗೆ ಕಟ್ಟಡ ನಿರ್ಮಾಣ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

ರಾಜಕೀಯ ಅವಶ್ಯಕತೆಯಿಲ್ಲ: ‘ಕನ್ನಡಕ್ಕಾಗಿ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ. ಹೊಸದಾಗಿ ಸಂಘ ಸಂಸ್ಥೆಗಳನ್ನು ಹುಟ್ಟು ಹಾಕುವ ಬದಲು ಇರುವುದನ್ನೇ ಉಳಿಸಿ ಬೆಳೆಸಬೇಕು. ಎಲ್ಲರೂ ಸೇರಿ ಕನ್ನಡ ಬೆಳೆಸೋಣ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್‌ ಮನವಿ ಮಾಡಿದರು.

ಸಮ್ಮೇಳನಾಧ್ಯಕ್ಷ ಸಿ.ಎಂ.ಗೋವಿಂದರೆಡ್ಡಿ, ಅವರ ಪತ್ನಿ ಅಮರಾವತಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಉಪ ವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಶೋಭಿತಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT