ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಬಿಸಿ: ಕುಸಿದ ಟೊಮೆಟೊ ಬೆಲೆ

ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಅನ್ನದಾತರು ಕಂಗಾಲು
Last Updated 17 ಮೇ 2021, 13:49 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಟೊಮೆಟೊ ವಹಿವಾಟಿಗೆ ಕೊರೊನಾ ಸೋಂಕಿನ ಬಿಸಿ ತಟ್ಟಿದ್ದು, ಲಾಕ್‌ಡೌನ್‌ ಕಾರಣಕ್ಕೆ ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಕುಸಿತ ಕಂಡಿದೆ.

ಕೋವಿಡ್‌ ಭೀತಿಯಿಂದ ಕಂಗಾಲಾಗಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಟೊಮೆಟೊ ಬೆಲೆ ಕುಸಿತವು ದೊಡ್ಡ ಪೆಟ್ಟು ಕೊಟ್ಟಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಕು ಸಾಗಣೆ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ದಿನೇದಿನೇ ಇಳಿಮುಖವಾಗುತ್ತಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಗಾಗಿ ರಾಜ್ಯ ಸರ್ಕಾರ ಲಾಕ್‌ಡೌನ್‌ ಜಾರಿ ಮಾಡಿದ್ದು, ಹೊರ ರಾಜ್ಯಗಳ ವರ್ತಕರು ಜಿಲ್ಲೆಯ ಎಪಿಎಂಸಿಗಳಿಗೆ ಬರಲು ಸಮಸ್ಯೆಯಾಗಿದೆ. ಮತ್ತೊಂದೆಡೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದುವೆ, ಗೃಹ ಪ್ರವೇಶ ಸೇರಿದಂತೆ ಶುಭ ಸಮಾರಂಭಗಳು ಸ್ಥಗಿತಗೊಂಡಿರುವುದರಿಂದ ಟೊಮೆಟೊಗೆ ಬೇಡಿಕೆ ಕುಸಿದಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಸುಮಾರು 8,800 ಹೆಕ್ಟೇರ್‌ ಟೊಮೆಟೊ ಬೆಳೆಯಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಟೊಮೆಟೊ ಕೊಯ್ಲು ಆರಂಭವಾಗಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಇಳಿಕೆಯು ಆಘಾತ ನೀಡಿದೆ.

ಜಿಲ್ಲೆಯಲ್ಲಿ ವರ್ಷಕ್ಕೆ 5 ಲಕ್ಷ ಮೆಟ್ರಿಕ್‌ ಟನ್‌ ಟೊಮೆಟೊ ಉತ್ಪಾದನೆಯಾಗುತ್ತಿದ್ದು, ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಕ್ಕೆ ಪ್ರತಿನಿತ್ಯ ಟೊಮೆಟೊ ರಫ್ತಾಗುತ್ತದೆ. ಮುಖ್ಯವಾಗಿ ರಾಜಸ್ತಾನ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರಕ್ಕೆ ಟೊಮೆಟೊ ಪೂರೈಕೆಯಾಗುತ್ತದೆ. ಅಲ್ಲದೇ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಚೀನಾ ದೇಶಕ್ಕೂ ಟೊಮೆಟೊ ರಫ್ತಾಗುತ್ತದೆ.

ಕೇಳುವವರಿಲ್ಲ: ಜಿಲ್ಲೆಯಲ್ಲಿ ಏಪ್ರಿಲ್‌ ತಿಂಗಳಿನಿಂದ ಅಕ್ಟೋಬರ್‌ ಅಂತ್ಯದ ಅವಧಿಯು ಟೊಮೆಟೊ ಋತುಮಾನವಾಗಿದೆ. ಈ ಅವಧಿಯಲ್ಲಿ ಟೊಮೆಟೊ ಫಸಲು ಮತ್ತು ಕೊಯ್ಲು ಹೆಚ್ಚಿರುತ್ತದೆ. ಮಾರ್ಚ್‌ನಲ್ಲಿ ಹೊರ ರಾಜ್ಯಗಳಲ್ಲಿ ಟೊಮೆಟೊಗೆ ಬೇಡಿಕೆ ಹೆಚ್ಚಿತ್ತು. ಹೊರ ರಾಜ್ಯಗಳ ವರ್ತಕರು ಜಿಲ್ಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಖರೀದಿಸಿಕೊಂಡು ಹೋಗುತ್ತಿದ್ದರಿಂದ ಬೆಲೆ ಏರು ಗತಿಯಲ್ಲಿ ಸಾಗಿತ್ತು.

ಕೋವಿಡ್‌ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆದೇಶ ಜಾರಿಯಾದ ನಂತರ ಹೊರ ರಾಜ್ಯದ ವರ್ತಕರು ಸ್ಥಳೀಯ ಮಾರುಕಟ್ಟೆಗೆ ಬರುತ್ತಿಲ್ಲ. ಕೋವಿಡ್‌ ಭೀತಿಯಿಂದಾಗಿ ಅಲ್ಲಿನ ವ್ಯಾಪಾರಿಗಳು ಜಿಲ್ಲೆಯ ಎಪಿಎಂಸಿಗಳತ್ತ ಸುಳಿಯುತ್ತಿಲ್ಲ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಸದ್ಯ ಟೊಮೆಟೊ ಕೇಳುವವರಿಲ್ಲ.

ಹೆಚ್ಚಿದ ಆವಕ: ಸ್ಥಳೀಯ ಎಪಿಎಂಸಿಗಳಲ್ಲಿ ಟೊಮೆಟೊ ಆವಕ ಗಣನೀಯವಾಗಿ ಹೆಚ್ಚಿದೆ. ಆದರೆ, ಆವಕದ ಪ್ರಮಾಣಕ್ಕೆ ತಕ್ಕಂತೆ ಬೇಡಿಕೆ ಹೆಚ್ಚಿಲ್ಲ. ಇದು ಬೆಲೆ ಕುಸಿತಕ್ಕೆ ಮುಖ್ಯ ಕಾರಣವಾಗಿದೆ.

ಮಾರ್ಚ್‌ 17ರಂದು ಸ್ಥಳೀಯ ಎಪಿಎಂಸಿಯಲ್ಲಿ ಟೊಮೆಟೊ ಸಗಟು ದರ ಕ್ವಿಂಟಾಲ್‌ಗೆ ಕನಿಷ್ಠ ₹ 300 ಮತ್ತು ಗರಿಷ್ಠ ₹ 1 ಸಾವಿರವಿತ್ತು. ಸೋಮವಾರ (ಮೇ 17) ಸಗಟು ದರ ಕ್ವಿಂಟಾಲ್‌ಗೆ ಕನಿಷ್ಠ ₹ 260 ಮತ್ತು ಗರಿಷ್ಠ ₹ 660ಕ್ಕೆ ಇಳಿದಿದೆ. ಟೊಮೆಟೊ ಆವಕದಲ್ಲಿ ಭಾರಿ ಏರಿಕೆಯಾಗಿದೆ. ಮಾರ್ಚ್‌ನಲ್ಲಿ ಟೊಮೆಟೊ ಆವಕ ಸರಾಸರಿ 5,800 ಕ್ವಿಂಟಾಲ್‌ ಇತ್ತು. ಮಾರುಕಟ್ಟೆಗೆ ಸೋಮವಾರ 20,336 ಕ್ವಿಂಟಾಲ್‌ ಟೊಮೆಟೊ ಆವಕವಾಗಿದೆ.

ಸಗಟು ಬೆಲೆಗೆ ಅನುಗುಣವಾಗಿ ಚಿಲ್ಲರೆ ಮಾರಾಟ ದರವು ಕೆ.ಜಿಗೆ ₹ 10ಕ್ಕೆ ಕುಸಿದಿದ್ದು, ಟೊಮೆಟೊ ಕೊಯ್ಯಲು ಮತ್ತು ಸಾಗಣೆಗೆ ಮಾಡಿದ ಹಣ ಸಹ ರೈತರಿಗೆ ಸಿಗುತ್ತಿಲ್ಲ. ಬೆಲೆ ಕುಸಿತದ ಕಾರಣಕ್ಕೆ ರೈತರು ಟೊಮೆಟೊ ಕೊಯ್ಲು ಮಾಡುವುದನ್ನೇ ನಿಲ್ಲಿಸಿದ್ದು, ಜಮೀನುಗಳಲ್ಲಿ ಟೊಮೆಟೊ ಗಿಡದಲ್ಲೇ ಹಣ್ಣಾಗಿ ಕೆಳಗೆ ಉದುರಿ ಕೊಳೆಯಲಾರಂಭಿಸಿದೆ. ಮತ್ತೆ ಕೆಲ ರೈತರು ಹೊಲದಲ್ಲೇ ಟೊಮೆಟೊ ಬೆಳೆ ನಾಶಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT