ಸೋಮವಾರ, ಜುಲೈ 26, 2021
23 °C

ಲಾಕ್‌ಡೌನ್‌ ಸಡಿಲ: ದೇವಾಲಯಕ್ಕೆ ಭಕ್ತರ ದಂಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಲಾಕ್‌ಡೌನ್‌ ಕಾರಣಕ್ಕೆ 73 ದಿನಗಳಿಂದ ಬಂದ್‌ ಆಗಿದ್ದ ಜಿಲ್ಲೆಯ ದೇವಾಲಯಗಳಲ್ಲಿ ಸೋಮವಾರದಿಂದ ಪೂಜೆ ಆರಂಭವಾಗಿದ್ದು, ಭಕ್ತರ ದಂಡೇ ಹರಿದುಬಂದಿತು.

ಕೊರೊನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಭಕ್ತರು ತೀರ್ಥ ಪ್ರಸಾದವಿಲ್ಲದೆ ಮಂಗಳಾರತಿ, ಕುಂಕುಮ, ವಿಭೂತಿ ಪ್ರಸಾದ ಪಡೆದು ಕೃತಾರ್ಥರಾದರು.

ನಗರದ ಕೆಇಬಿ ಗಣಪತಿ ದೇವಾಲಯ, ನಂಜುಂಡೇಶ್ವರ, ವೆಂಕಟರಮಣಸ್ವಾಮಿ, ಪಂಚಮುಖಿ ಹನುಮ, ಶನೇಶ್ವರಸ್ವಾಮಿ, ಕಿಲಾರಿಪೇಟೆಯ ವೇಣುಗೋಪಾಲಸ್ವಾಮಿ, ಸತ್ಯಮ್ಮದೇವಿ, ಕೊಂಡರಾಜನಹಳ್ಳಿಯ ಆಂಜನೇಯ, ಸೀತಿ ಬೆಟ್ಟದ ಶ್ರೀಪತೇಶ್ವರಸ್ವಾಮಿ ದೇವಾಲಯ ಸೇರಿದಂತೆ ಬಹುತೇಕ ದೇವಾಲಯಗಳಲ್ಲಿ ಪ್ರತಿನಿತ್ಯದಂತೆ ಪೂಜಾ ಕೈಂಕರ್ಯ ನೆರವೇರಿತು.

ದೇವಾಲಯಗಳ ಆಡಳಿತ ಮಂಡಳಿಯು ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಗೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ದೇವಾಲಯಗಳ ಆವರಣದಲ್ಲಿ ಚೌಕಾಕಾರದಲ್ಲಿ ಮತ್ತು ವೃತ್ತಾಕಾರದಲ್ಲಿ ಪಟ್ಟಿ ಹಾಕಿತ್ತು. ಜತೆಗೆ ಭಕ್ತರಿಗೆ ಕೈ ಸ್ವಚ್ಛ ಮಾಡಿಕೊಳ್ಳಲು ಪ್ರವೇಶ ಭಾಗದಲ್ಲೇ ಸ್ಯಾನಿಟೈಸರ್‌ನ ವ್ಯವಸ್ಥೆ ಮಾಡಲಾಗಿತ್ತು.

ದೇವಾಲಯಗಳಿಗೆ ಬರುವ ಭಕ್ತರಿಗೆ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳ ಬಿಡಲಾಯಿತು. ಮಾಸ್ಕ್‌ ಧರಿಸಿ ಬಂದಿದ್ದ ಭಕ್ತರು ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದರು. ಸಣ್ಣಪುಟ್ಟ ದೇವಾಲಯಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇಲ್ಲದಿದ್ದರೂ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಂಡುಬಂತು.

ವಿಶೇಷ ಪೂಜೆ: ‘ಸರ್ಕಾರದ ಸುರಕ್ಷತಾ ಮಾರ್ಗಸೂಚಿ ಪಾಲಿಸಿದ್ದೇವೆ. ಭಕ್ತರು ಅಂತರ ಕಾಯ್ದುಕೊಳ್ಳಲು ಎಚ್ಚರಿಕೆ ವಹಿಸಿದ್ದೇವೆ. ಮೊದಲ ದಿನವಾಗಿದ್ದರೂ 200ಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಬಂದು ದೇವರ ದರ್ಶನ ಪಡೆದರು’ ಎಂದು ಕೆಇಬಿ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಅಪ್ಪಣ್ಣಶಾಸ್ತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಇಬಿ ಗಣಪತಿ ದೇವಾಲಯದಲ್ಲಿ ಸಂಕಷ್ಟ ಚತುರ್ಥಿ ಅಂಗವಾಗಿ ಮಂಗಳವಾರ ವಿಶೇಷ ಪೂಜೆಯಿದ್ದು, ಕಾರಣ ಭಕ್ತರು ಸೋಮವಾರವೇ ದೇವಾಲಯಕ್ಕೆ ಬಂದು ಹೆಸರು ನೊಂದಾಯಿಸುತ್ತಿದ್ದ ದೃಶ್ಯ ಕಂಡುಬಂತು.

ದರ್ಶನ ಭಾಗ್ಯವಿಲ್ಲ: ನಗರದ ಕೋಟೆ ಭಾಗದಲ್ಲಿ ಕೊರೊನಾ ಸೋಂಕಿತ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಡೀ ಬಡಾವಣೆ ಸೀಲ್‌ಡೌನ್‌ ಆಗಿದೆ. ಹೀಗಾಗಿ ಈ ಬಡಾವಣೆಯಲ್ಲಿ ಇತಿಹಾಸ ಪ್ರಸಿದ್ಧ ಕೋಲಾರಮ್ಮ ಹಾಗೂ ಸೋಮೇಶ್ವರಸ್ವಾಮಿ ದೇವಾಲಯಗಳನ್ನು ಸೋಮವಾರ ತೆರೆಯಲಿಲ್ಲ. ಇದರಿಂದ ಭಕ್ತರಿಗೆ ನಗರ ದೇವತೆಯ ದರ್ಶನ ಭಾಗ್ಯ ದೊರೆಯಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.