ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಹಸಿವಿನಿಂದ ಹೆಚ್ಚು ಸಾವು, ಕೇಂದ್ರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

Last Updated 22 ಮೇ 2020, 14:19 IST
ಅಕ್ಷರ ಗಾತ್ರ

ಕೋಲಾರ: ‘ಬಿಜೆಪಿ ಸರ್ಕಾರ ಪ್ರತಿ ಪಕ್ಷಗಳೊಂದಿಗೆ ಚರ್ಚಿಸದೆ ಅವೈಜ್ಞಾನಿಕವಾಗಿ ಲಾಕ್‌ಡೌನ್‌ ಘೋಷಿಸಿದ್ದರಿಂದಾಗಿ ಹೆಚ್ಚು ಮಂದಿ ಕೊರೊನಾ ಸೋಂಕಿನ ಬದಲಿಗೆ ಹಸಿವಿನಿಂದ ಸಾವನ್ನಪ್ಪಿದ್ದಾರೆ’ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದರು.

ರಂಜಾನ್‌ ಪ್ರಯುಕ್ತ ಇಲ್ಲಿ ಶುಕ್ರವಾರ ಮುಸ್ಲಿಂ ಸಮುದಾಯದವರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ‘ಪ್ರಧಾನಿ ಮೋದಿ ಜನರನ್ನು ಮರಳು ಮಾಡುವುದರಲ್ಲಿ ನಿಸ್ಸೀಮರು. ಸಿನಿಮಾ ನಟರಿಗಿಂತಲೂ ಚೆನ್ನಾಗಿ ಅಭಿನಯಿಸುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಮೋದಿ ಚುನಾವಣೆ ವೇಳೆ ಪುಲ್ವಾಮಾ ಪಿಕ್ಚರ್‌ ತೋರಿಸಿದರು. ಆದರೆ, ಅದರಲ್ಲಿ ಪಾಕಿಸ್ತಾನಿ ಸೈನಿಕರನ್ನಾಗಲಿ ಅಥವಾ ಭಯೋತ್ಪಾದಕರನ್ನಾಗಲಿ ಸಾಯಿಸಿದ ಚಿತ್ರಣವೇ ಇರಲಿಲ್ಲ’ ಎಂದು ಲೇವಡಿ ಮಾಡಿದರು.

‘ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ₹ 68 ಸಾವಿರ ಕೋಟಿ ಮನ್ನಾ ಮಾಡಿದೆಯೇ ಹೊರತು ಬಡ ರೈತರ ಕೃಷಿ ಸಾಲ, ಬಡ್ಡಿ ಮನ್ನಾ ಮಾಡಿಲ್ಲ. ಮೋದಿಯವರು ಜನ್‌ಧನ್‌ ಯೋಜನೆಯಲ್ಲಿ ಮಹಿಳೆಯರ ಖಾತೆಗೆ ₹ 500 ಜಮೆ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ನೆರವು ನೀಡಲ್ಲ. ಕೊರೊನಾ ವಿಚಾರದಲ್ಲಿ ಎನ್‌ಜಿಒಗಳಿಗೆ ಇರುವಷ್ಟು ಕಾಳಜಿಯೂ ಬಿಜೆಪಿಗಿಲ್ಲ’ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಕುಟುಕಿದರು.

‘ದೇಶದ 130 ಕೋಟಿ ಜನರ ಪೈಕಿ ಕನಿಷ್ಠ 20 ಲಕ್ಷ ಮಂದಿಗೂ ಕೊರೊನಾ ಸೋಂಕಿನ ಪರೀಕ್ಷೆಯನ್ನು ಸಮರ್ಪಕವಾಗಿ ಮಾಡಿಲ್ಲ. ದೇಶದಲ್ಲಿ ಎಲ್ಲರಿಗೂ ವೈದ್ಯಕೀಯ ಪರೀಕ್ಷೆ ಮಾಡಿದರೆ 10 ಲಕ್ಷಕ್ಕೂ ಹೆಚ್ಚು ಕೊರೊನಾ ಸೊಂಕಿತರು ಪತ್ತೆಯಾಗುತ್ತಾರೆ’ ಎಂದರು.

ಕೋಮು ರಾಜಕಾರಣ: ‘ಮೋದಿಯವರು ಹಿಂದೂ, -ಮುಸ್ಲಿಂ ಎಂದು ಕೋಮುವಾದ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಾ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಆಟ ಹೆಚ್ಚು ದಿನ ನಡೆಯಲ್ಲ’ ಎಂದು ಮಾಜಿ ಸಂಸದ  ಕೆ.ಎಚ್.ಮುನಿಯಪ್ಪ ಹೇಳಿದರು.

‘ಮೋದಿ ₹ 20 ಲಕ್ಷ ಕೋಟಿ ಪ್ಯಾಕೇಜ್‌ನ ಸುಳ್ಳಿನ ಕಂತೆಯ ಬುರುಡೆ ಬಿಟ್ಟಿದ್ದಾರೆ. ಅದರಲ್ಲಿ ಬಜೆಟ್‌ನದೇ ₹ 16 ಲಕ್ಷ ಕೋಟಿಯಿದೆ. ಮೋದಿಯವರು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ, ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ತಂದು ಜನರ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತೇನೆ ಎಂದು ಚುನಾವಣೆ ಪೂರ್ವದಲ್ಲಿ ಹೇಳಿದ್ದರು. ಅಧಿಕಾರಕ್ಕೆ ಬಂದ ನಂತರ ಆ ಮಾತುಗಳೆಲ್ಲಾ ಅವರಿಗೆ ಮರೆತು ಹೋಗಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ವ್ಯಂಗವಾಡಿದರು.

ಕೆಪಿಸಿಸಿ ವಕ್ತಾರೆ ವಸಂತ ಕವಿತಾರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಮಾಜಿ ಸಚಿವ ನಿಸಾರ್‌ ಅಹಮ್ಮದ್‌, ಅಂಜುಮಾನ್ ಇಸ್ಲಾಮಿಯಾ ಸಂಘಟನೆ ಜಿಲ್ಲಾ ಅಧ್ಯಕ್ಷ ಜಮೀರ್ ಅಹಮ್ಮದ್‌, ನಗರಸಭೆ ಸದಸ್ಯ ಬಿ.ಎಂ.ಮುಬಾರಕ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT