ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಕೃತ ಬ್ಯಾಂಕಿಗೆ ಬೀಗ ಹಾಕಿಸುವ ಗುರಿ

ಸಾಲ ವಿತರಣಾ ಸಮಾರಂಭದಲ್ಲಿ ಶಾಸಕ ಕೆ.ಆರ್.ರಮೇಶ್‌ ಕುಮಾರ್ ಹೇಳಿಕೆ
Last Updated 15 ಫೆಬ್ರುವರಿ 2020, 14:35 IST
ಅಕ್ಷರ ಗಾತ್ರ

ಕೋಲಾರ: ‘ಸರ್ಕಾರದ ಎಲ್ಲ ಸಾಲ ಯೋಜನೆಗಳನ್ನು ಫಲಾನುಭವಿಗಳಿಗೆ ಡಿಸಿಸಿ ಬ್ಯಾಂಕ್ ಮೂಲಕ ವಿತರಿಸಲು ಯೋಜನೆ ರೂಪಿಸಲಾಗಿದ್ದು, ರಾಷ್ಟ್ರೀಯ ಬ್ಯಾಂಕ್‌ಗಳಿಗೆ ಬೀಗ ಹಾಕಿಸುವುದು ನನ್ನ ಗುರಿ’ ಎಂದು ಶಾಸಕ ಕೆ.ಆರ್.ರಮೇಶ್‌ ಕುಮಾರ್ ತಿಳಿಸಿದರು.

ತಾಲ್ಲೂಕಿನ ಅಣ್ಣಿಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವ್ಯಾಪ್ತಿಯ ೧೬೧ ಮಹಿಳಾ ಸಂಘದ ಸದಸ್ಯರಿಗೆ ಶನಿವಾರ ಡಿಸಿಸಿ ಬ್ಯಾಂಕ್‌ನಿಂದ ₨ ೮.೫ ಕೋಟಿ ಸಾಲದ ಚೆಕ್ ವಿತರಿಸಿ ಮಾತನಾಡಿ, ‘ಪ್ರಸ್ತುತ ಸರ್ಕಾರಿ ವ್ಯವಸ್ಥೆ ಹಾಳಾಗಿದ್ದು ಬಡವರಿಗೆ ಸೌಕರ್ಯ ಸಿಗುತ್ತಿಲ್ಲ. ಗಂಟು ಮುಳುಗಿಸುವವರಿಗೆ ನೂರಾರು ಕೋಟಿ ಸಾಲ ನೀಡಲಾಗುತ್ತಿದ್ದರೆ ಬಡವರ ಸಾಲಕ್ಕೆ ಗ್ಯಾರೆಂಟಿ ಕೇಳುತ್ತಿದ್ದಾರೆ’ ಎಂದು ವಿಷಾಧಿಸಿದರು.

‘ಬಡ ಮಹಿಳೆಯರ ಆರ್ಥಿಕ ಚಟುವಟಿಕೆಯಿಂದಾಗಿ ದೇಶದ ಆರ್ಥಿಕ ವ್ಯವಸ್ಥೆ ಬಲಗೊಂಡಿದೆ. ಮುಚ್ಚುವ ಸ್ಥಿತಿಯಲ್ಲಿದ್ದ ಡಿಸಿಸಿ ಬ್ಯಾಂಕ್ ಸುಧಾರಿಸಿಕೊಂಡು ಮಹಿಳೆಯರ ಸಬಲಿಕರಣಕ್ಕೆ ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ. ಪಡೆದುಕೊಂಡಿರುವ ಸಾಲ ಹಣದಲ್ಲಿ ಸ್ವಾವಲಂಭಿ ಬದುಕು ರೂಪಿಸಿಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಬ್ಯಾಂಕನ್ನು ಮುಚ್ಚಿಸಲು ಕೆಲ ವ್ಯಕ್ತಿಗಳು ಯೋಚನೆ ಮಾಡುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ಉಳಿತಾಯದ ಹಣವನ್ನು ಮಹಿಳೆಯರು ಸೊಸೈಟಿಗಳಲ್ಲಿ ಠೇವಣಿ ಇಡಬೇಕು. ಬ್ಯಾಂಕ್ ಉಳಿಸುವ ಅಥವಾ ಮುಚ್ಚಿಸುವ ಶಕ್ತಿ ತಾಯಂದಿರ ಮೇಲಿದೆ. ಇದನ್ನು ಮಹಿಳೆಯರು ಸವಾಲಾಗಿ ತೆಗೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಮಹಿಳೆಯರು ದೇಶದ ಇತಿಹಾಸ ತಿಳಿದುಕೊಂಡು ರಾಷ್ಟ್ರ ವಂಚಕರ ಕೈಯಿಂದ ಬಿಡಿಸಬೇಕು. ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ವಿಭಜಿಸಿ ಆಳುವ ಸರ್ಕಾರ ಬಾರದಂತೆ ಮಹಿಳೆಯರು ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳು ಜಾಗೃತರಾಗದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಎಚ್ಚರಿಸಿದರು.

‘ಶೂನ್ಯ ಬಡ್ಡಿ ಸಾಲದ ಮಿತಿ ₨ ೫೦ ಸಾವಿರದಿಂದ ₨ 1ಲಕ್ಷಕ್ಕೇರಿಸುವ ಬಯಕೆಗೆ ಅಡ್ಡಿಯಾಗಿದೆ. ಹಿಂದಿನ ಸರ್ಕಾರವಿದ್ದಾಗ ಹಲವು ಯೋಜನೆಗಳನ್ನು ಜಾರಿ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆಗ ಓಂಟಿ ಕಾಲಿನಲ್ಲಿ ನಿಂತ್ತಿದ್ದ ಸರ್ಕಾರ ಬಿದ್ದು ಹೋಯಿತು. ಆದರೆ ಇದೀಗ ಬಂದಿರುವ ಹೊಸ ಸರ್ಕಾರ ಆ ಜಾಗಕ್ಕೆ ಇನ್ನೂ ಬಂದು ಸರಿಯಾಗಿ ಕುಳಿತಿಲ್ಲ’ ಎಂದು ವ್ಯಂಗ್ಯವಾಡಿದರು.

‘ಡಿಸಿಸಿ ಬ್ಯಾಂಕ್‌ನಲ್ಲಿ ಸಾಲ, ವಾಣಿಜ್ಯ ಬ್ಯಾಂಕ್‌ನಲ್ಲಿ ಠೇವಣಿ ಎಂಬ ನಿಲುವಿನಿಂದಾಗಿ ಸಮಸ್ಯೆ ಆಗಿದೆ. ಹೀಗಾಗಿ ಮಹಿಳೆಯರು ತಮ್ಮ ಉಳಿತಾಯ ಖಾತೆಗಳನ್ನು ಸಹಕಾರಿ ಬ್ಯಾಂಕ್‌ನಲ್ಲಿ ತೆರೆಯುವ ಮೂಲಕ ಶಕ್ತಿ ತುಂಬಬೇಕು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮನವಿ ಮನವಿ ಮಾಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಎಂ.ಎಲ್.ಅನಿಲ್‌ ಕುಮಾರ್, ಬಿ.ವಿ.ವೆಂಕಟರೆಡ್ಡಿ, ಶ್ರೀನಿವಾಸಪುರ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಶೋಕ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷೆ ವನಿತಾ, ಗುತ್ತಿಗೆದಾರ ಸೊಣ್ಣೇಗೌಡ, ಕಾರ್ಯದರ್ಶಿ ಶ್ರೀನಿವಾಸ್, ಗೋಪಾಲಗೌಡ, ಚಂದ್ರಕಳಾ, ವೆಂಕಟೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT