ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಜೆಡಿಎಸ್‌ನದ್ದು ಅಪವಿತ್ರ ಮೈತ್ರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಂಗಾರಪೇಟೆ ಪಟ್ಟಣದಲ್ಲಿ ಮುಖ್ಯಮಂತ್ರಿ ರೋಡ್‌ ಶೋ; ಮೋದಿ, ದೇವೇಗೌಡ ವಿರುದ್ಧ ಟೀಕಾ ಪ್ರಹಾರ
Published 21 ಏಪ್ರಿಲ್ 2024, 13:31 IST
Last Updated 21 ಏಪ್ರಿಲ್ 2024, 13:31 IST
ಅಕ್ಷರ ಗಾತ್ರ

ಕೋಲಾರ/ಬಂಗಾರಪೇಟೆ: ‘ಬಿಜೆಪಿ ಹಾಗೂ ಜೆಡಿಎಸ್‌ನದ್ದು ಅಪವಿತ್ರ ಮೈತ್ರಿ. ಜೆಡಿಎಸ್‌ನವರು ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ. ‌ಇವರಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಬಂಗಾರಪೇಟೆ ಪಟ್ಟಣದಲ್ಲಿ ಭಾನುವಾರ ಕೋಲಾರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ಪರ ತೆರೆದ ವಾಹನದಲ್ಲಿ ರೋಡ್‌ ಶೋನಲ್ಲಿ ಮತಯಾಚಿಸಿ ಅವರು ಮಾತನಾಡಿದರು.

ತಮ್ಮ ಭಾಷಣದ ಅವಧಿಯಲ್ಲಿ ಬಹುತೇಕ ನಿಮಿಷ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಟೀಕಿಸುತ್ತಾ ಸಾಗಿದ ಅವರು, ರಾಜ್ಯಕ್ಕೆ ಮೋದಿ ಕೊಡುಗೆ ಖಾಲಿ ಚೊಂಬು ಎಂದು ವ್ಯಂಗ್ಯವಾಡಿದರು.

ಪದೇಪದೇ ಖಾಲಿ ಚೊಂಬು ಎಂದು ಟೀಕಿಸುತ್ತಲೇ ಮೋದಿ ಹಾಗೂ ದೇವೇಗೌಡರಿಗೆ ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು.

‘ಮೋದಿ ಅವರು ರಾಜ್ಯಕ್ಕೆ ನೀಡಿದ ಖಾಲಿ ಚೊಂಬನ್ನು ಕೋಲಾರದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್‌ ಬಾಬು ಅವರ ಕೈಗೆ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಅವರನ್ನು ಗೆಲ್ಲಿಸಿ’ ಎಂದು ಕರೆ ನೀಡಿದರು.

‘15ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಮಾಡಿದ ಮೋಸಕ್ಕೆ ಮೋದಿ ಅವರ ಖಾಲಿ ಚೊಂಬು ಸಾಕ್ಷಿಯಾಗಿದೆ. ದೇವೇಗೌಡರೇ, ಈ ಚೊಂಬು ತಮ್ಮ ಕಣ್ಣಿಗೆ ಅಕ್ಷಯ ಪಾತ್ರೆಯಾಗಿದ್ದರೆ 15 ನೇ ಹಣಕಾಸು ಆಯೋಗದಲ್ಲಿ‌ ಆಗಿರುವ ನಷ್ಟ, ಅನ್ಯಾಯವನ್ನು ತುಂಬಿ ಕೊಡಿಸಿ. ಅಕ್ಷಯಪಾತ್ರೆಯಿಂದ ಉದುರಿಸಿ ನೋಡೋಣ’ ಎಂದು ಸವಾಲು ಹಾಕಿದರು.

‘ಮೋದಿಯವರು ತಮ್ಮ ಖಾತೆಗೆ ₹ 15 ಲಕ್ಷ ಹಾಕುವ ಭರವಸೆ ನೀಡಿದ್ದರು. ಎಷ್ಟು ಹಣ ಬಂತು? ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ್ದರು. ಎಷ್ಟು ಜನರಿಗೆ ನೇಮಕಾತಿ ಆದೇಶ ಬಂತು? ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಎಷ್ಟು ರೈತರ ಆದಾಯ ದ್ವಿಗುಣವಾಯಿತು’ ಎಂದು ಕೇಳಿದರು.

ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಾಗಿ ಘೋಷಿಸಿದ್ದ ದೇವೇಗೌಡರು ಈಗ ಮೋದಿ ಮತ್ತು ತಾವು ಭಾಯಿ ಭಾಯಿ ಎನ್ನುತ್ತಿದ್ದಾರೆ. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುತ್ತೀನಿ ಎಂದಿದ್ದ ದೇವೇಗೌಡರು ಈಗ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ’ ಎಂದು ಟೀಕಾ ಪ್ರಹಾರ ನಡೆಸಿದರು.

‘ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ದೇವೇಗೌಡ ಮತ್ತು ಮೋದಿ ಅವರ ಖಾಲಿ ಚೊಂಬನ್ನು ಸೋಲಿಸಿ ನಮ್ಮ ಗ್ಯಾರಂಟಿಗಳಿಗೆ ಆಶೀರ್ವದಿಸಿ’ ಎಂದು ಮನವಿ ಮಾಡಿದರು.

ಸಚಿವ ಬೈರತಿ ಸುರೇಶ್ ಮಾತನಾಡಿ, 'ಬಿಜೆಪಿ ದುಷ್ಟರ ಪಕ್ಷ. ಜಾತಿ, ಧರ್ಮಗಳ ‌ನಡುವೆ ತಂದಿಡುವ ಕೆಲಸ ಮಾಡುತ್ತಿದೆ‌. ನಾವು ಐದು ಗ್ಯಾರಂಟಿ ನೀಡಿದ್ದೇವೆ. ಗೌತಮ್ ಗೆದ್ದರೆ ಸಿದ್ದರಾಮಯ್ಯ ಗೆದ್ದರೆ ಕಾಂಗ್ರೆಸ್‌ನಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ' ಎಂದರು.

ಶಾಸಕ ಎಸ್.ಎನ್.ನಾರಾಯಣಸ್ವಾಮಿ, 'ಎಲ್ಲಾ ಜಾತಿ ವರ್ಗದವರನ್ನು ಸಿದ್ದರಾಮಯ್ಯ ಸರಿಸಮಾನಾಗಿ ಕಾಣುತ್ತಿದ್ದಾರೆ‌‌. ಕ್ಷೇತ್ರದ ಜನರು ನನ್ನನ್ನು ಮೂರು ಬಾರಿ ಶಾಸಕನಾಗಿ ಮಾಡಿದ್ದಾರೆ. ನಾನು ಕ್ಷೇತ್ರ ಅಭಿವೃದ್ಧಿ ಮಾಡುತ್ತಿದ್ದಿನಿ. ಇನ್ನೂ ಹೆಚ್ಚಿಗೆ ಅಭಿವೃದ್ಧಿ ಮಾಡಲು ಗೌತಮ್ ಗೆಲ್ಲಿಸಿ. ಭ್ರಷ್ಟ ಬಿಜೆಪಿ ಸೋಲಿಸಿ' ಎಂದು ಮನವಿ ಮಾಡಿದರು.

ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, 'ನಾವು ನುಡಿದಂತೆ ನಡೆದುಕೊಂಡಿದ್ದೇವೆ. ಮತ ಕೇಳಲು ನಮಗೆ ಹಕ್ಕು ಇದೆ‌. ಗ್ಯಾರಂಟಿ ನೀಡಿದ್ದೇವೆ' ಎಂದರು.

ಬಂಗಾರಪೇಟೆ–ಕೋಲಾರ ರಸ್ತೆಯಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಸಿದ್ದರಾಮಯ್ಯ ಮಾಲಾರ್ಪಣೆ ಮಾಡಿದರು. ಬಳಿಕ ಬೃಹತ್ ರೋಡ್ ‌ಶೋ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್‌, ಅಭ್ಯರ್ಥಿ ಕೆ.ವಿ.ಗೌತಮ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಶಾಸಕರಾದ ಎಸ್‌.ಎನ್‌.ನಾರಾಯಣಸ್ವಾಮಿ, ಕೊತ್ತೂರು ಮಂಜುನಾಥ್‌, ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ಓಬಿಸಿ ಮಂಜುನಾಥ್‌ ಪಾಲ್ಗೊಂಡಿದ್ದರು.

ಬಂಗಾರಪೇಟೆಯಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಡ್‌ ಶೋನಲ್ಲಿ ಪಾಲ್ಗೊಂಡು ಮತಯಾಚಿಸಿದರು
ಬಂಗಾರಪೇಟೆಯಲ್ಲಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ರೋಡ್‌ ಶೋನಲ್ಲಿ ಪಾಲ್ಗೊಂಡು ಮತಯಾಚಿಸಿದರು
ಕೋಲಾರ ಸಂಸದ ಎಸ್‌.ಮುನಿಸ್ವಾಮಿ ರಾಜ್ಯಕ್ಕೆ ಅನ್ಯಾಯ ಆಗಿರುವ ಬಗ್ಗೆ ಯಾವತ್ತಾದರೂ ಧ್ವನಿ ಎತ್ತಿದರೇ? ಬಂಗಾರಪೇಟೆ ಕ್ಷೇತ್ರದಲ್ಲಿ ಎರಡು ಬಾರಿ ಸೋತವರನ್ನು ಮತ್ತೊಮ್ಮೆ ಸೋಲಿಸಿ
- ಸಿದ್ದರಾಮಯ್ಯ ಮುಖ್ಯಮಂತ್ರಿ
ಕೋಲಾರ ಜಿಲ್ಲೆಗೆ 25 ಸಾವಿರ ಮನೆ ಕೊಟ್ಟಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ‌. ಒಂದು ಮನೆ ಕೊಟ್ಟಿದ್ದರೆ ಅವರು ಹೇಳಿದಂತೆ‌ ನಾವು ಕೇಳುತ್ತೇವೆ
- ಕೊತ್ತೂರು ಮಂಜುನಾಥ್‌ ಶಾಸಕ
ಈ ದೇಶದಲ್ಲಿ ಪ್ರಧಾನಿ ನರೇಂದ್ರ ‌ಮೋದಿ ಯಾರಿಗಾದರೂ ಹೆದರುತ್ತಾರೆ ಎಂದರೆ ಅದು ಸಿದ್ದರಾಮಯ್ಯ ಅವರಿಗೆ ಮಾತ್ರ.
ಕೆ.ವಿ.ಗೌತಮ್‌ ಅಭ್ಯರ್ಥಿ
ನನ್ನ ದೇವರು ಸಿದ್ದರಾಮಯ್ಯ‌. ನನ್ನ ಗೌರವ ಉಳಿಯಬೇಕೆಂದರೆ ನನ್ನ ಗುರುವಿಗೆ ಕಾಣಿಕೆ ಸಲ್ಲಿಸಲು ಗೌತಮ್ ಗೆಲ್ಲಿಸಿ. ಮೋದಿ ದೇಶ ಕಂಡ ದೊಡ್ಡ ಸುಳ್ಳುಗಾರ
-ಎಸ್‌.ಎನ್‌.ನಾರಾಯಣಸ್ವಾಮಿ ಶಾಸಕ

ವೆಂಕಟರಮಣ ಗೋವಿಂದ ಗೋವಿಂದ ಎಂದ ಶಾಸಕರು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರದ ವೇಳೆ ಮೋದಿ ಅವರನ್ನು ಟೀಕಿಸುತ್ತಾ ಪದೇಪದೇ ಖಾಲಿ ಚೊಂಬು ಎನ್ನುತ್ತಿದ್ದರು. ಆಗ ಶಾಸಕರಾದ ಕೊತ್ತೂರು ಮಂಜುನಾಥ್‌ ಹಾಗೂ ಎಸ್‌.ಎನ್.ನಾರಾಯಣಸ್ವಾಮಿ ‘ವೆಂಕಟರಮಣ ಗೋವಿಂದ ಗೋವಿಂದ’ ಎಂದು ಹೇಳುತ್ತಾ ವ್ಯಂಗ್ಯ ಮಾಡಿದರು.

ಎಸ್‌ಎನ್‌ ಹೊಗಳಿದ ಸಿ.ಎಂ

ಪ್ರಚಾರದ ವೇಳೆ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಗಳಿದರು. ‘ಕ್ಷೇತ್ರದಲ್ಲಿ ಎಸ್‌.ಎನ್‌.ನಾರಾಯಣಸ್ವಾಮಿ ಹ್ಯಾಟ್ರಿಕ್ ಗೆಲುವು ಬಾರಿಸಿದ್ದಾರೆ. ಅವರೊಬ್ಬ ಉತ್ತಮ ಶಾಸಕ. ಅಭಿವೃದ್ಧಿ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೌತಮ್ ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತಾರೆ. ಕ್ಷೇತ್ರದಲ್ಲಿ ಹೆಚ್ಚು ವೋಟು ಬಂದರೆ ನಾರಾಯಣಸ್ವಾಮಿ ಅವರಿಗೆ ಹೆಚ್ಚು ಶಕ್ತಿ ಬರುತ್ತದೆ‌’ ಎಂದರು.

ಬಿಸಿಲು; ಜನರ ಕ್ಷಮೆಯಾಚಿಸಿದ ಸಿ.ಎಂ

ರೋಡ್‌ ಶೋಗೆ ಬಿಸಿಲ ಧಗೆಯಲ್ಲೇ ಸಾವಿರಾರು ಜನ ಸೇರಿದ್ದರು. ನೆಲದಲ್ಲಿ ಕಾಲಿಡಲು ಆಗದ ಪರಿಸ್ಥಿತಿ ಇತ್ತು. ಸುಮಾರು ಅರ್ಧ ಗಂಟೆ ಜನರು ಬಿಸಿಲಿನಲ್ಲೇ ನಡೆದರು. ಇನ್ನರ್ಧ ಗಂಟೆ ಬಿಸಿಲಿನಲ್ಲೇ ನಿಂತು ಭಾಷಣ ಕೇಳಿದರು. ಈ ಬಗ್ಗೆ ಸಿದ್ದರಾಮಯ್ಯ ಮಾತನಾಡಿ ‘ತಾವೆಲ್ಲಾ ಬಿಸಿಲಿನಲ್ಲಿ ನಿಂತಿದ್ದೀರಿ. ನಾವು ನೆರಳಿನಲ್ಲಿ ಇದ್ದೇವೆ. ನಮ್ಮನ್ನು ಕ್ಷಮಿಸಿ’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT