ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಬೂದಿ ಮುಚ್ಚಿದ ಕೆಂಡದಂತಿರುವ ಮನಸ್ತಾಪ!

ಕಾಂಗ್ರೆಸ್‌ಗೆ ಮುನಿಯಪ್ಪ ಮುನಿಸು ಚಿಂತೆ; ಜೆಡಿಎಸ್‌ಗೆ ಬಿಜೆಪಿ ನಾಯಕರ ಬಂಡಾಯ ಶಮನದ್ದೇ ಸವಾಲು!
Published 8 ಏಪ್ರಿಲ್ 2024, 7:11 IST
Last Updated 8 ಏಪ್ರಿಲ್ 2024, 7:11 IST
ಅಕ್ಷರ ಗಾತ್ರ

ಕೋಲಾರ: ಬಿಸಿಲ ಧಗೆಗಿಂತ ಲೋಕಸಭಾ ಚುನಾವಣಾ ಪ್ರಚಾರ ಕಾವು ಹೆಚ್ಚಿದ್ದು, ಮತದಾರರ ಮನವೊಲಿಸುವುದಕ್ಕಿಂತ ಮುಖಂಡರ ಬಂಡಾಯ ಶಮನವೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಕಾಂಗ್ರೆಸ್‌ಗೆ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಮುನಿಸು ಚಿಂತೆ ತಂದೊಡ್ಡಿದ್ದರೆ, ಜೆಡಿಎಸ್‌ಗೆ ಬಿಜೆಪಿ ಬಂಡಾಯ ನಾಯಕರು ಹಾಗೂ ಕಾರ್ಯಕರ್ತರ ಓಲೈಕೆಯೇ ಸವಾಲಾಗಿದೆ. ಎರಡೂ ಪಕ್ಷಗಳಲ್ಲಿ ಮನಸ್ತಾಪ ಬೂದಿ ಮುಚ್ಚಿದ ಕೆಂಡದಂತಿದೆ.

ಕೋಲಾರ ಮೀಸಲು ಕ್ಷೇತ್ರದಲ್ಲಿ ತಮ್ಮ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡಿರುವ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಮನಸ್ಸು ಗೆಲ್ಲುವುದು ಹೇಗೆ ಎಂಬ ತೊಳಲಾಟದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ಇದ್ದಾರೆ. ಬಣಗಳ ಮನಸ್ತಾಪದ ಬಿಸಿ ನಿಧಾನವಾಗಿ ತಟ್ಟುತಿರುವಂತಿದೆ.

ಶನಿವಾರ ಕುರುಡುಮಲೆ ಗಣೇಶನ ಸನ್ನಿಧಾನದಲ್ಲಿ ಲೋಕಸಭೆ ಚುನಾವಣೆಯ ಅಧಿಕೃತ ಪ್ರಚಾರಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿಯೇ ಮುನಿಯಪ್ಪ ಹಾಗೂ ಅವರ ಪುತ್ರಿಯೂ ಆಗಿರುವ ಶಾಸಕಿ ರೂಪಕಲಾ ಎಂ.ಶಶಿಧರ್‌ ಗೈರಾಗಿದ್ದದ್ದು ಮತ್ತಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಂದಿದ್ದರೂ ಅವರು ಕಾಣಿಸಿಕೊಳ್ಳಲಿಲ್ಲ. ಅವರ ಆಪ್ತರು ಹೇಳುವ ಪ್ರಕಾರ ಅವರಿಗೆ ಆಹ್ವಾನವೇ ಹೋಗಿರಲಿಲ್ಲವಂತೆ. ಪ್ರಚಾರದಲ್ಲಿ ಮುನಿಯಪ್ಪ ಆಪ್ತರನ್ನು ಘಟಬಂಧನ್‌ ಕಡೆಗಣಿಸುತ್ತಿರುವ ದೂರುಗಳಿವೆ. ಹೀಗಾಗಿ, ಅವರು ಕ್ಷೇತ್ರದ ಪ್ರಚಾರದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವ ಸಾಧ್ಯತೆ ಕಡಿಮೆ. ರೂಪಕಲಾ ಕೆಜಿಎಫ್‌ಗೆ ಸೀಮಿತವಾಗಿ ತಮ್ಮ ಭದ್ರಕೋಟೆ ಬಲಪಡಿಸಿಕೊಳ್ಳಲು ಕಾಂಗ್ರೆಸ್‌ ಪರ ಮತಯಾಚಿಸುತ್ತಿದ್ದಾರೆ. 

ನಾಮಪತ್ರ ಸಲ್ಲಿಕೆ ವೇಳೆ ಮುನಿಯಪ್ಪ ಹಾಗೂ ರೂಪಕಲಾ ಬಂದಿದ್ದರು. ಆಗ ಅಭ್ಯರ್ಥಿ ಜೊತೆ ಪ್ರತ್ಯೇಕವಾಗಿ ತೆರಳಿ ನಾಮಪತ್ರ ಸಲ್ಲಿಸಿದ್ದರು. ‘ಗ್ರೂಪ್‌ ಫೋಟೊ’ಗೆ ಸೀಮಿತವಾಗಿ ಬಣದೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಡಿ.ಕೆ.ಶಿವಕುಮಾರ್‌ ಅವರ ರೋಡ್‌ ಶೋ ವೇಳೆಗೆ ನಾಪತ್ತೆಯಾಗಿದ್ದರು.

ಇದೇ ಪರಿಸ್ಥಿತಿಯಲ್ಲಿ ಜೆಡಿಎಸ್‌ ಪಕ್ಷವೂ ಇದೆ. ಮತದಾನಕ್ಕೆ ಕೇವಲ 18 ದಿನಗಳಿದ್ದು, ಮತದಾರರನ್ನು ಸೆಳೆಯುವ ಸಮಯವಿದು. ಆದರೆ, ಬಿಜೆಪಿ ನಾಯಕರ ಬಂಡಾಯ ಶಮನಗೊಳಿಸುವುದೇ ದೊಡ್ಡ ಸವಾಲಾಗಿ ಮಾರ್ಪಟ್ಟಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣವಾಗಿದ್ದ ಹೂಡಿ ವಿಜಯಕುಮಾರ್‌ ಹಾಗೂ ಕೆಜಿಎಫ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ವಂಚಿತರಾಗಿ ಅಸಮಾಧಾನಗೊಂಡಿರುವ ಮೋಹನಕೃಷ್ಣ ಅವರ ಮನವೊಲಿಸಲಾಗುತ್ತಿದೆ. ಇಬ್ಬರೂ ತಮ್ಮ ಬೆಂಬಲಿಗರ ಸಭೆ ನಡೆಸಿ ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ಘೋಷಿಸಿದ್ದಾರೆ. ಆದರೆ, ಅವರ ಬೆಂಬಲಿಗರಲ್ಲಿ ಅಸಮಾಧಾನ ಇದ್ದೇ ಇದೆ.

ಅಷ್ಟೇ ಅಲ್ಲ; ಮೊದಲ ಸಮನ್ವಯ ಸಭೆಯಲ್ಲಿ ಬಿಜೆಪಿ ಮಾಜಿ ಶಾಸಕ ವೈ.ಸಂಪಂಗಿ ಕೋಪಿಸಿಕೊಂಡಿದ್ದರು. ಅವರ ಬೆಂಬಲಿಗರು ಭಾನುವಾರ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಸಂಸದರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಮನಗೆಲ್ಲಲು ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ ಬಾರಿ ಕಸರತ್ತು ನಡೆಸುತ್ತಿದ್ದಾರೆ. ಅವರ ‘ಬೇಡಿಕೆ’ ಪೂರೈಸುವುದೇ ಅವರಿಗೆ ದೊಡ್ಡ ಸವಾಲಾಗಿದೆ. ಹೀಗಾಗಿ, ಒಳೇಟು ತಪ್ಪಿದ್ದಲ್ಲ.

ಎರಡೂ ಪಕ್ಷಗಳಲ್ಲಿ ಒಳೇಟಿನ ಆತಂಕ ಹೂಡಿ ವಿಜಯಕುಮಾರ್‌, ಮೋಹನಕೃಷ್ಣ ಮನವೊಲಿಸಲು ಕಸರತ್ತು ಪ್ರಚಾರದಲ್ಲಿ ಮುನಿಯಪ್ಪ ಬೆಂಬಲಿಗರನ್ನು ಕಡೆಗಣಿಸುತ್ತಿರುವ ದೂರು
ಕೆ.ಎಚ್‌.ಮುನಿಯಪ್ಪ ಪ್ರಚಾರಕ್ಕೆ ಬರುತ್ತಾರೆ. ಯಾವುದೇ ಅಸಮಾಧಾನ ಇಲ್ಲ. ಕುರುಡುಮಲೆಗೆ ಅವರಿಗೂ ಆಹ್ವಾನ ಹೋಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಪ್ರಚಾರದಲ್ಲಿ ತೊಡಗಿದ್ದರು
ಸಿ.ಲಕ್ಷ್ಮಿನಾರಾಯಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ
ಬಂಡಾಯವೆದ್ದಿದ್ದ ಹೂಡಿ ವಿಜಯಕುಮಾರ್‌ ಮೋಹನಕೃಷ್ಣ ಮೈತ್ರಿ ಅಭ್ಯರ್ಥಿ ಬೆಂಬಲಿಸುತ್ತಾರೆ. ಮೋದಿ ಇಲ್ಲವೆಂದರೆ ಯಾರಿಗೂ ಭವಿಷ್ಯ ಇಲ್ಲ. ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕರೆ ದೇಶಕ್ಕೆ ಭವಿಷ್ಯ ಇಲ್ಲ
ಓಂಶಕ್ತಿ ಚಲಪತಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಕ್ಷೇತ್ರದ ಮೇಲೆ ಹಿಡಿತ ಕೈತಪ್ಪುವ ಆತಂಕ!
ಕೆ.ಎಚ್‌.ಮುನಿಯಪ್ಪ ಹಾಗೂ ಕೋಲಾರ ಲೋಕಸಭಾ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ. ಈ ಕ್ಷೇತ್ರದಲ್ಲಿ 1991ರಿಂದ 2019ರ ಚುನಾವಣೆ ವರೆಗೆ ಸ್ಪರ್ಧಿಸಿದ್ದಾರೆ. ಸತತ ಎಂಟು ಚುನಾವಣೆಗಳಲ್ಲಿ ಕಣಕ್ಕಿಳಿದು ಏಳು ಬಾರಿ ಗೆದ್ದಿದ್ದಾರೆ. ಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈಗಲೂ ಸಭೆ ಸಮಾರಂಭಗಳಲ್ಲಿ ಮೂಲೆಯಲ್ಲಿ ಕುಳಿತಿರುವ ಕಾರ್ಯಕರ್ತರನ್ನು ಹೆಸರಿಡಿದು ಕರೆದು ಮಾತನಾಡಿಸುತ್ತಾರೆ. ಇಂಥ ಕ್ಷೇತ್ರದಲ್ಲಿ ಮೊದಲ ಬಾರಿ ಟಿಕೆಟ್‌ ಬೇರೆಯವರ ಪಾಲಾಗಿದೆ. ಇದು ಸಹಜವಾಗಿಯೇ ಅವರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ‘ಕಾಂಗ್ರೆಸ್‌ ಅಭ್ಯರ್ಥಿ ಕೆ.ವಿ.ಗೌತಮ್‌ ಗೆದ್ದರೆ ಕ್ಷೇತ್ರದ ಮೇಲೆ ತಮ್ಮ ಹಿಡಿತ ಕೈತಪ್ಪುವ ಆತಂಕ ಮುನಿಯಪ್ಪ ಅವರಲ್ಲಿದೆ. ಜೊತೆಗೆ ಟಿಕೆಟ್‌ ವಿಚಾರದಲ್ಲಿ ಘಟಬಂಧನ್‌ ಕೈ ಮೇಲಾಗಿರುವ ಕೋಪವಿದೆ’ ಎಂದು ಕಾಂಗ್ರೆಸ್‌ನಲ್ಲಿರುವ ಅವರ ಆಪ್ತರು ಹೇಳುತ್ತಾರೆ.
ಬಂಡಾಯ ಶಮನಕ್ಕೆ ಕಸರತ್ತು
2023ರ ವಿಧಾನಸಭೆ ಚುನಾವಣೆಯಲ್ಲಿ ಬಂಡಾಯ ಬಿಜೆಪಿಗೆ ದೊಡ್ಡ ಮಟ್ಟದ ಹೊಡೆತ ನೀಡಿತ್ತು. ಮಾಲೂರು ಕೆಜಿಎಫ್‌ ಕೋಲಾರ ಬಂಗಾರಪೇಟೆ ಸೇರಿದಂತೆ ಹಲವೆಡೆ ಒಳೇಟು ಬಿದ್ದಿತ್ತು. ಪ್ರಮುಖವಾಗಿ ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್‌.ಮಂಜುನಾಥ್‌ ಗೌಡ ಕೇವಲ 257 ವೋಟುಗಳಿಂದ ಸೋತಿದ್ದರು. ಇದಕ್ಕೆ ಕಾರಣ ಹೂಡಿ ವಿಜಯಕುಮಾರ್‌ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದು. ಹೀಗಾಗಿ ಈ ಬಾರಿಯ ಜೆಡಿಎಸ್‌–ಬಿಜೆಪಿ ಮೈತ್ರಿಕೂಟ ಹೂಡಿ ವಿಜಯಕುಮಾರ್‌ ಅವರ ಮನವೊಲಿಸುವ ಕಸರತ್ತು ನಡೆಸಿವೆ. ಅವರನ್ನು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅಭ್ಯರ್ಥಿ ಮಲೇಶ್‌ ಬಾಬು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಮೈತ್ರಿಕೂಟದ ಅಭ್ಯರ್ಥಿ ಬೆಂಬಲಿಸುವ ಭರವಸೆ ಸದ್ಯಕ್ಕೆ ಸಿಕ್ಕಿದೆ.
ಅಸ್ತಿತ್ವ ಕಳೆದುಕೊಳ್ಳುವ ಭಯ!
ಕೋಲಾರ ಲೋಕಸಭೆ ಕ್ಷೇತ್ರ ಈಗ ಬಿಜೆಪಿ ಹಿಡಿತದಲ್ಲಿದೆ. ಎಸ್‌.ಮುನಿಸ್ವಾಮಿ ಚುನಾವಣೆ ಮುಗಿದು ಫಲಿತಾಂಶ ಬರುವವರೆಗೆ ಸಂಸದರೇ. ಆದರೆ ಮೈತ್ರಿಧರ್ಮ ಪಾಲನೆ ದೃಷ್ಟಿಯಿಂದ ಈ ಬಾರಿ ಕ್ಷೇತ್ರದ ಟಿಕೆಟ್‌ ಅನ್ನು ಜೆಡಿಎಸ್‌ಗೆ ನೀಡಲಾಗಿದೆ. ಆಕಸ್ಮಾತ್‌ ಜೆಡಿಎಸ್‌ ಅಭ್ಯರ್ಥಿ ಗೆದ್ದರೆ ಮುಂದೆ ಕ್ಷೇತ್ರದಲ್ಲಿ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಆಗಬಹುದೆಂಬ ಚಿಂತೆ ಕೆಲ ಬಿಜೆಪಿ ಮುಖಂಡರನ್ನು ಕಾಡುತ್ತಿದೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಬಿಜೆಪಿ ಮುಖಂಡರೆಲ್ಲರೂ ವೇದಿಕೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಒಳೇಟು ಬೀಳುವ ಆತಂಕದಲ್ಲಿ ಜೆಡಿಎಸ್‌ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT