ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ: ಕೋಲಾರ ಕ್ಷೇತ್ರದ ಟಿಕೆಟ್‌ಗೆ ಹೆಚ್ಚಿದ ಪೈಪೋಟಿ

Published 29 ಜನವರಿ 2024, 7:32 IST
Last Updated 29 ಜನವರಿ 2024, 7:32 IST
ಅಕ್ಷರ ಗಾತ್ರ

ಕೋಲಾರ: ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೆ ದಿನಗಳು ಸಮೀಪಿಸುತ್ತಿರುವಂತೆ ಕೋಲಾರ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದಿಂದ ಟಿಕೆಟ್‌ ಆಕಾಂಕ್ಷಿಗಳು ದಿನೇದಿನೇ ಹೆಚ್ಚುತ್ತಲೇ ಇದ್ದಾರೆ. ಟಿಕೆಟ್‌ ಪಡೆಯಲು ತೆರೆಮರೆಯಲ್ಲಿ ಭಾರಿ ಪೈಪೋಟಿಯೂ ನಡೆಯುತ್ತಿದೆ. 

ಸತತ ಎಂಟು ಬಾರಿ ಸ್ಪರ್ಧಿಸಿರುವ ಕೆ.ಎಚ್‌.ಮುನಿಯಪ್ಪ ಅವರಿಗೆ ಟಿಕೆಟ್‌ ನೀಡುವಂತೆ ಬೆಂಬಲಿಗರು, ಅಭಿಮಾನಿಗಳು ಒತ್ತಡ ಹೇರುತ್ತಿದ್ದರೆ, ಇತ್ತ ಮುನಿಯಪ್ಪ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಕೂಡ ಟಿಕೆಟ್‌ ಬಯಸಿ ಅರ್ಜಿ ಸಲ್ಲಿಸಿದ್ದಾರೆ.

ಇವರಿಬ್ಬರ ಹೆಸರು ಮುನ್ನೆಲೆಯಲ್ಲಿದ್ದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗ ಎನ್ನಲಾದ ಡಾ.ಬಿ.ಸಿ.ಮುದ್ದು ಗಂಗಾಧರ್‌, ಕಲಾವಿದ ಮದನ್‌ ಪಟೇಲ್‌, ಬಿ.ಪ್ರಸನ್ನಕುಮಾರ್‌, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಶಾಂತಕುಮಾರಿ, ಮುನಿರಾಜು, ಕೆ.ವಿ.ಗೌತಮ್‌, ಲಕ್ಕೂರು ನಾರಾಯಣಸ್ವಾಮಿ, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್‌ ಸೇರಿದಂತೆ ಹಲವರು ಟಿಕೆಟ್‌ಗೆ ದುಂಬಾಲು ಬಿದ್ದಿದ್ದಾರೆ.

ರಾಜ್ಯ ರಾಜಕಾರಣ ಪ್ರವೇಶಿಸಿ ಆಹಾರ ಸಚಿವರಾಗಿರುವ ಮುನಿಯಪ್ಪ, ಹೈಕಮಾಂಡ್‌ ಸೂಚಿಸಿದರೆ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. 1991ರಿಂದ ಸತತ ಏಳು ಸಲ ಗೆಲುವು ಸಾಧಿಸಿದ್ದ ಅವರು 2019ರ ಚುನಾವಣೆಯಲ್ಲಿ ಬಿಜೆಪಿಯ ಎಸ್‌.ಮುನಿಸ್ವಾಮಿ ಎದುರು ಮೊದಲ ಸೋಲು ಕಂಡಿದ್ದರು.

ಈ ಬಾರಿ ಕಣಕ್ಕಿಳಿಯಲು ಅಷ್ಟೇನು ಉತ್ಸುಕರಾದಂತೆ ಅವರು ಕಾಣುತ್ತಿಲ್ಲ. ಈ ನಡುವೆ ಅವರ ಅಳಿಯ ಚಿಕ್ಕಪೆದ್ದಣ್ಣ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿರುವುದು ಮತ್ತೊಂದು ಬೆಳವಣಿಗೆ.

ಕೋಲಾರ ಲೋಕಸಭೆ ಕ್ಷೇತ್ರಕ್ಕೆ ಸೇರಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೋಡಿಗಲ್‌ ಗ್ರಾಮದ ಚಿಕ್ಕಪೆದ್ದಣ್ಣ ಕಂದಾಯ ಇಲಾಖೆಯ ಉದ್ಯೋಗಿ. ಹಿರಿಯ ಉಪನೋಂದಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುನಿಯಪ್ಪ ಅವರ ಪುತ್ರಿ ನಂದಿನಿ ಅವರನ್ನು ವಿವಾಹವಾಗಿದ್ದಾರೆ. ಮಾವನ ಜೊತೆ ರಾಜಕೀಯ ಒಡನಾಟ ಇಟ್ಟುಕೊಂಡಿರುವ ಅವರೀಗ ತೆರೆಮರೆಯಲ್ಲಿ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿರುವುದು ಗೊತ್ತಾಗಿದೆ.

‘ಒಂದೋ ಮುನಿಯಪ್ಪ ಅವರಿಗೆ ಟಿಕೆಟ್‌ ನೀಡಬೇಕು. ಇಲ್ಲವೇ ಅವರು ಸೂಚಿಸಿದವರನ್ನು ಅಭ್ಯರ್ಥಿ ಮಾಡಬೇಕು’ ಎಂಬುದು ಮುನಿಯಪ್ಪ ಬೆಂಬಲಿಗರ ಒತ್ತಾಯವೂ ಆಗಿದೆ. ಹೈಕಮಾಂಡ್‌ ಕೂಡ ಮುನಿಯಪ್ಪ ಅವರ ಅಭಿಪ್ರಾಯ ಕೋರಿರುವುದು ಗೊತ್ತಾಗಿದೆ.

ಕಾಂಗ್ರೆಸ್‌ನಲ್ಲಿ ಕೆ.ಆರ್‌.ರಮೇಶ್‌ ಕುಮಾರ್‌ ನೇತೃತ್ವದ ಘಟಬಂಧನ್‌ ಹಾಗೂ ಮುನಿಯಪ್ಪ ಬೆಂಬಲಿಗರ ನಡುವಿನ ಒಳಜಗಳ ಇನ್ನೂ ನಿಂತಿಲ್ಲ. ಒಬ್ಬರು ಪಾಲ್ಗೊಂಡ ಸಮಾರಂಭದಲ್ಲಿ ಇನ್ನೊಂದು ಬಣದವರು ಕಾಣಿಸಿಕೊಳ್ಳುವುದಿಲ್ಲ. ತಮ್ಮ ಇಷ್ಟದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಘಟಬಂಧನ್‌ ಮುಖಂಡರು ಪ್ರಯತ್ನ ನಡೆಸಿದ್ದಾರೆ. ಹೊಸ ಮುಖಕ್ಕೆ ಈ ಬಣದ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಬಾರಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಅಳೆದು ತೂಗಿ ಅಭ್ಯರ್ಥಿ ಆಯ್ಕೆ ಮಾಡುತ್ತಿದೆ. ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದವರ ಹಿನ್ನೆಲೆ ಸೇರಿದಂತೆ ಪೂರ್ಣ ಮಾಹಿತಿ ಕಲೆಹಾಕುತ್ತಿದೆ. ಜೊತೆ ಸಮೀಕ್ಷೆ ಕೂಡ ನಡೆಸುತ್ತಿದೆ.

‘ಮುನಿಯಪ್ಪ ಅವರೇ ಸ್ಪರ್ಧಿಸಬೇಕು ಎಂಬುದು ನಮ್ಮೆಲ್ಲರ ಆಸೆ. ಈ ಸಂಬಂಧ ಅವರಿಗೆ ಟಿಕೆಟ್‌ ನೀಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಅವರು ಸ್ಪರ್ಧಿಸಿದರೆ ಗೆಲುವು ಖಚಿತ’ ಎಂದು ಜಿಲ್ಲಾ ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷ, ಮುನಿಯಪ್ಪ ಬೆಂಬಲಿಗ ಕೆ.ಜಯದೇವ ಹೇಳಿದರು.

9ನೇ ಬಾರಿ ಸ್ಪರ್ಧಿಸುತ್ತಾರಾ ಮುನಿಯಪ್ಪ? ಸರ್ಕಾರಿ ಉದ್ಯೋಗಿಯಾಗಿರುವ ಚಿಕ್ಕಪೆದ್ದಣ್ಣ ಜಿಲ್ಲೆಯ ಕಾಂಗ್ರೆಸ್‌ನಲ್ಲಿನ ಬಣ ರಾಜಕೀಯಕ್ಕೆ ಇನ್ನೂ ಸಿಗದ ಮುಕ್ತಿ
‘ಟಿಕೆಟ್‌ ಕೋರಿ 13 ಅರ್ಜಿ’
ಕೋಲಾರ ಲೋಕಸಭೆ ಕ್ಷೇತ್ರದ‌ ಅಭ್ಯರ್ಥಿ ಆಯ್ಕೆ ಸಂಬಂಧ ಎಐಸಿಸಿ ಕೆಪಿಸಿಸಿ ಅಭಿಪ್ರಾಯ ಸಂಗ್ರಹಿಸುತ್ತಿವೆ. ಈಗಾಗಲೇ 13 ಮಂದಿ ಟಿಕೆಟ್‌ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಕೆ.ಎಚ್‌.ಮುನಿಯಪ್ಪ ಚಿಕ್ಕಪೆದ್ದಣ್ಣ ಮದನ್‌ ಪಟೇಲ್‌ ಡಾ.ಮುದ್ದು ಗಂಗಾಧರ್‌ ಸೇರಿದಂತೆ ಹಲವರು ಟಿಕೆಟ್‌ ಆಕಾಂಕ್ಷಿಗಳು ಇದ್ದಾರೆ. ಹೈಕಮಾಂಡ್‌ ಸೂಚಿಸುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಗೆಲ್ಲಿಸಿಕೊಡುತ್ತೇವೆ ಸಿ.ಲಕ್ಷ್ಮಿನಾರಾಯಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೋಲಾರ
ಟಿಕೆಟ್‌ ಕೈತಪ್ಪಿಸಿಕೊಂಡಿದ್ದವರು ಆಕಾಂಕ್ಷಿ!
2023ರ ವಿಧಾನಸಭೆ ಚುನಾವಣೆಯಲ್ಲಿ ಕಡೆಯ ಕ್ಷಣದಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ತಪ್ಪಿಸಿಕೊಂಡಿದ್ದ ಡಾ.ಬಿ.ಸಿ.ಮುದ್ದು ಗಂಗಾಧರ್‌ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅವರು ಟಿ.ಚನ್ನಯ್ಯರ ಮೊಮ್ಮಗ. ‘23 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದು ಟಿಕೆಟ್‌ ಆಕಾಂಕ್ಷಿ ಆಗಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಮುಳುಬಾಗಿಲು ಕ್ಷೇತ್ರದ ‘ಬಿ’ ಫಾರಂ ನನಗೇ ಸಿಕ್ಕಿತ್ತು. ಕೊನೆ ಗಳಿಗೆಯಲ್ಲಿ ಹೈಕಮಾಂಡ್‌ ಹಾಗೂ ಡಿ.ಕೆ.ಶಿವಕುಮಾರ್‌ ಮನವಿ ಮೇರೆಗೆ ಹಿಂದೆ ಸರಿದೆ. ಲೋಕಸಭೆ ಟಿಕೆಟ್‌ನ ಭರವಸೆ ನೀಡಿದ್ದಾರೆ’ ಎಂದು ಮುದ್ದು ಗಂಗಾಧರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT