ಶುಕ್ರವಾರ, ಏಪ್ರಿಲ್ 23, 2021
28 °C
ಹಳೆ ವಾಹನ ವಿಲೇವಾರಿ ನೀತಿಗೆ ಆಕ್ರೋಶ

ಡೀಸೆಲ್‌ ಬೆಲೆ ಏರಿಕೆ: ಜಿಲ್ಲೆಯಲ್ಲಿ ಲಾರಿ ಮಾಲೀಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಡೀಸೆಲ್‌ ಬೆಲೆ ಏರಿಕೆ ಹಾಗೂ ಹಳೆ ವಾಹನ ವಿಲೇವಾರಿ ನೀತಿ ಖಂಡಿಸಿ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟವು ನೀಡಿದ್ದ ಮುಷ್ಕರದ ಕರೆ ಬೆಂಬಲಿಸಿ ಲಾರಿ ಮಾಲೀಕರು ಜಿಲ್ಲೆಯಲ್ಲೂ ಶುಕ್ರವಾರ ಪ್ರತಿಭಟನೆ ಮಾಡಿದರು.

ಲಾರಿಗಳನ್ನು ರಸ್ತೆಗಿಳಿಸದೆ ನಿಲ್ದಾಣದಲ್ಲಿ ನಿಲ್ಲಿಸಿದ ಮಾಲೀಕರು ಹಾಗೂ ಚಾಲಕರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಡೀಸೆಲ್ ಬೆಲೆ ಏರು ಗತಿಯಲ್ಲಿ ಸಾಗಿದ್ದು, ಲಾರಿಗಳ ಸಂಚಾರ ನಿತ್ಯವೂ ಹೊರೆಯಾಗುತ್ತಿದೆ. ವಾಹನ ವಿಮಾ ಮೊತ್ತ ಪ್ರತಿ ವರ್ಷ ಹೆಚ್ಚಿಸಲಾಗುತ್ತಿದೆ. ಇದರಿಂದ ಲಾರಿ ಮಾಲೀಕರು ವಿಮಾ ಕಂತು ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಜಿಲ್ಲಾ ಮಾಲೀಕರ ಸಂಘದ ಅಧ್ಯಕ್ಷ ಕುಮಾರ್ ಕಿಡಿಕಾರಿದರು.

‘ಗಾಯದ ಮೇಲೆ ಬರೆ ಎಳೆದಂತೆ ಟೋಲ್ ದರ ಹೆಚ್ಚಿಸಲಾಗಿದೆ. ಈ ಎಲ್ಲಾ ದರ ಏರಿಕೆಗಳಿಂದ ಹಾಗೂ ಸರ್ಕಾರದ ಸಾರಿಗೆ ವಿರೋಧಿ ನೀತಿಯಿಂದಾಗಿ ಶೇ 50ರಷ್ಟು ಲಾರಿಗಳು ನಿಂತಲ್ಲೇ ನಿಂತಿವೆ. ಸರ್ಕಾರ ದರ ಇಳಿಕೆ ಮಾಡದಿದ್ದರೆ ಮಾಲೀಕರು ಲಾರಿಗಳನ್ನು ಮಾರಾಟ ಮಾಡುವ ಸ್ಥಿತಿಗೆ ತಲುಪುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪೆಟ್ರೋಲ್‌, ಡೀಸೆಲ್‌ ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ದೈನಂದಿನ ಅಗತ್ಯ ವಸ್ತುಗಳ ಬೆಲೆಯೂ ಏರು ಗತಿಯಲ್ಲಿ ಸಾಗಿದೆ. ಕೋವಿಡ್‌ ಸಂಕಷ್ಟ, ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಜೀವನ ಸಾಗಿಸುವುದೇ ದುಸ್ತರವಾಗಿದೆ. ಆದರೆ, ಸರ್ಕಾರಕ್ಕೆ ಜನಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ’ ಎಂದು ಆರೋಪಿಸಿದರು.

ಬೀದಿಗೆ ಬಂದಿದ್ದಾರೆ: ‘ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ನಷ್ಟವಾಗುವ ಕಾರಣಕ್ಕೆ ತೈಲ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಸೇರಿಸುತ್ತಿಲ್ಲ. ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಅಂಬಾನಿ, ಅದಾನಿಯಂತಹ ಬಂಡವಾಳಶಾಹಿಗಳ ಆದಾಯ ಲಕ್ಷ ಕೋಟಿವರೆಗೆ ಬೆಳೆದಿದೆ. ಆದರೆ, ಲಾರಿ ಮಾಲೀಕರು ಹಾಗೂ ಚಾಲಕರು ತಮ್ಮ ವಾಹನ ಮಾರಿ ಬೀದಿಗೆ ಬಂದಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಲಾರಿಗಳ ನಿರ್ವಹಣೆ ಹಾಗೂ ಸಾಗಣೆ ವೆಚ್ಚ ಹೆಚ್ಚಾಗಿದೆ. ಸರ್ಕಾರ ರೂಪಿಸಿರುವ ಹಳೆ ವಾಹನಗಳ ವಿಲೇವಾರಿ ನೀತಿಯು ಮಾಲೀಕರಿಗೆ ನಷ್ಟ ಉಂಟು ಮಾಡಲಿದೆ. ಫಾಸ್ಟ್‌ಟ್ಯಾಗ್‌ ದರ ಏರಿಕೆಯಿಂದ ವಾಹನಗಳ ಮಾಲೀಕರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬಿದ್ದಿದೆ. ಕೇಂದ್ರವು ತೈಲೋತ್ಪನ್ನಗಳ ಬೆಲೆ ಏರಿಕೆಗೆ ಹಿಂದಿನ ಸರ್ಕಾರ 60 ವರ್ಷದಲ್ಲಿ ಮಾಡಿದ ಸಾಲಗಳೇ ಕಾರಣ ಎಂಬ ನೆಪ ಹೇಳುತ್ತಿದೆ’ ಎಂದು ಗುಡುಗಿದರು.

ಬದಲಿ ವ್ಯವಸ್ಥೆ: ‘ಇ–ವೇ ಬಿಲ್‌ ರದ್ದುಗೊಳಿಸಬೇಕು ಅಥವಾ ಅದರ ಅವಧಿ ಹೆಚ್ಚಿಸಬೇಕು. ಟೋಲ್‌ ದರ ಕಡಿಮೆ ಮಾಡಬೇಕು. ವಿಮಾ ಕಂತಿನ ಮೊತ್ತ ಇಳಿಕೆ ಮಾಡಬೇಕು. 15 ವರ್ಷಕ್ಕೂ ಹಳೆಯದಾದ ಲಾರಿಗಳನ್ನು ಗುಜರಿಗೆ ಹಾಕಬೇಕೆಂಬ ನಿಯಮ ಸರಿಯಲ್ಲ. ಈ ನಿಯಮ ಜಾರಿಗೊಳಿಸುವುದಾದರೆ ವಾಹನ ಮಾಲೀಕರಿಗೆ ಹೊಸ ಲಾರಿ ಖರೀದಿಗೆ ಬದಲಿ ವ್ಯವಸ್ಥೆ ಮಾಡಬೇಕು. ಡೀಸೆಲ್‌ ಬೆಲೆ ನಿಯಂತ್ರಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಶ್ರೀನಿವಾಸ್, ಪದಾಧಿಕಾರಿಗಳಾದ ಅಶ್ವತ್ಥ್‌ ನಾರಾಯಣ, ಅಯೂಬ್ ಪಾಷಾ, ಕೆ.ಶ್ರೀನಿವಾಸ್, ನವೀನ್, ಬಾಬು, ಮುಜಾಹಿದ್, ನಾರಾಯಣಸ್ವಾಮಿ, ನಟರಾಜ್, ಸೋಮನಾಥ್, ಸೀನಪ್ಪ ಪಾಲ್ಗೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು