ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸ್ಥಾನಕ್ಕೆ ಮಾಧುಸ್ವಾಮಿ ರಾಜೀನಾಮೆ ನೀಡಲಿ: ಮುನಿರತ್ನ

Last Updated 15 ಆಗಸ್ಟ್ 2022, 20:48 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರ ನಡಿತಾ ಇಲ್ಲ. ಮ್ಯಾನೇಜ್‌ ಮಾಡ್ತಾ ಇದ್ದೀವಷ್ಟೇ’ ಎಂಬ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಹೇಳಿಕೆಗೆ ತೋಟಗಾರಿಕಾ ಸಚಿವ ಮುನಿರತ್ನ ಕಿಡಿ ಕಾರಿದ್ದು, ‘ಸರ್ಕಾರದ ವಿರುದ್ಧ ಮಾಧುಸ್ವಾಮಿ ಏನಾದರೂ ಮಾತನಾಡುವುದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಆ ಬಳಿಕ ಮಾತನಾಡಲಿ’ ಎಂದಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಾಧುಸ್ವಾಮಿ ಸರ್ಕಾರದ ಭಾಗ. ಸಚಿವ ಸಂಪುಟದ ಎಲ್ಲ ನಿರ್ಧಾರಗಳಲ್ಲೂ ಅವರು ಭಾಗಿಯಾಗಿರುತ್ತಾರೆ. ಪ್ರತಿ ವಿಷಯದ ಕುರಿತೂ ಚರ್ಚಿಸುತ್ತಾರೆ. ಸರ್ಕಾರ ನಡೆಯುತ್ತಿಲ್ಲ ಎಂಬ ಹೇಳಿಕೆ ಕೊಟ್ಟಿದ್ದರೆ ಅದರಲ್ಲಿ ಅವರೂ ಪಾಲುದಾರರಾಗುತ್ತಾರೆ. ಆ ಹೇಳಿಕೆ ಅವರಿಗೂ ಅನ್ವಯಿಸುತ್ತದೆ. ಸಚಿವರಾಗಿ, ಜವಾಬ್ದಾರಿಯುತ ಸ್ಥಾನದಲ್ಲಿದ್ದು ಇಂಥ ಹೇಳಿಕೆ ನೀಡುವುದು ಅವರಿಗೆ ಶೋಭೆ ತರುವುದಿಲ್ಲ’ ಎಂದರು.

ವೈಯಕ್ತಿಕ ಹೇಳಿಕೆ: ‘ಸರ್ಕಾರ ಸರಿಯಾಗಿ ನಡೆಯುತ್ತಿಲ್ಲ ಎಂಬ ಮಾಧುಸ್ವಾಮಿ ಅವರ ಹೇಳಿಕೆ ವೈಯಕ್ತಿಕವಾದುದು. ಆದರೂ ಅವರು ಆ ರೀತಿ ಹೇಳಿಕೆ ಕೊಡಬಾರದಿತ್ತು’ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.

ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬೊಮ್ಮಾಯಿ ಪ್ರಾಮಾಣಿಕವಾಗಿ ಈ ರಾಜ್ಯಕ್ಕೆ ಏನೇನು ಮಾಡಬಹುದು, ಅದಕ್ಕಾಗಿ ಹಗಲಿರುಳು ಶ್ರಮಪಡುತ್ತಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕೆಲಸ ಮಾಡುತ್ತಿದ್ದಾರೆ. ಸಂಪುಟದಲ್ಲಿರುವ ನಾವೆಲ್ಲ ಒಂದೇ. ಏನಾದರೂ ಇದ್ದರೆ ಮುಖ್ಯಮಂತ್ರಿ ಅವರಿಗೆ ಹೇಳಬಹುದಿತ್ತು. ಬಹಿರಂಗವಾಗಿ ಹೇಳುವುದು ಸರಿಯಲ್ಲ’ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದರು.

‘ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳು ಮುಖ್ಯಮಂತ್ರಿಯವರ ಜತೆಗೆ ಇದ್ದೇವೆ. ನಮಗೆ ವಹಿಸಿರುವ ಜವಾಬ್ದಾರಿಗಳನ್ನು ಅರಿತು ಆಯಾ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದೂ ಗೋಪಾಲಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT