ಕೋಲಾರ: ‘ಕೆರೆಗಳಲ್ಲಿರುವ ಜಲಚರ ಪ್ರಾಣಿಗಳು ಹಾಗೂ ದಂಡೆಯಲ್ಲಿನ ಜಲಚರ ಸಸ್ಯಗಳನ್ನು ಸಂರಕ್ಷಿಸಿ ಕೆರೆಗಳ ಮೂಲ ಸ್ವರೂಪ ಕಾಪಾಡಿಕೊಂಡು ಅರಣ್ಯ ರಕ್ಷಣೆ ಮಾಡಬೇಕು’ ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದರು.
ಅರಣ್ಯ ಜೀವ ವೈವಿಧ್ಯ ಪರಿಸರ, ಕೆರೆ ಸಂರಕ್ಷಣೆ ಸಂಬಂಧ ಇಲ್ಲಿ ಶನಿವಾರ ನಡೆದ ಸಮಾಲೋಚನೆ ಸಭೆಯಲ್ಲಿ ಮಾತನಾಡಿ, ‘ಕೆರೆಗಳ ಸುಂದರೀಕರಣ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು.
‘ರಕ್ತಚಂದನ ಮತ್ತು ಶ್ರೀಗಂಧ ಮರಗಳು ನೈಸರ್ಗಿಕವಾಗಿ ಬೆಳೆಯುವ ಪ್ರದೇಶದ ರಕ್ಷಣೆಗೆ ವಿಶೇಷ ಯೋಜನೆಯಡಿ ಅಭಿಯಾನ ನಡೆಸಲಾಗುವುದು. ಜೌಗು ಪ್ರದೇಶಗಳನ್ನು ರಕ್ಷಿಸಿ ಅಭಿವೃದ್ಧಿಪಡಿಸಬೇಕು. ಪಂಚಾಯತ್‌ರಾಜ್, ನಗರಸಭೆ, ಅರಣ್ಯ ಇಲಾಖೆ ಒಟ್ಟಾಗಿ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಜಿಲ್ಲೆಯನ್ನು ಜೀವ ವೈವಿಧ್ಯತೆಯ ತಾಣವಾಗಿಸಬೇಕು’ ಎಂದು ಸಲಹೆ ನೀಡಿದರು.
‘ಕೋಲಾರ ಹೊರ ವಲಯದ ಅಂತರಗಂಗೆ ಬೆಟ್ಟ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಬಳಿಯ ಬೆಟ್ಟ, ಗುಡ್ಡಗಾಡು ಪ್ರದೇಶದಲ್ಲಿರುವ ಜನರಿಗೆ ಹೆಚ್ಚಿನ ಆದ್ಯತೆ ಕೊಟ್ಟು ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು. ಆ ಜನರಿಗೆ ಸರ್ಕಾರದ ಯೋಜನೆಗಳು ಸದುಪಯೋಗ ಆಗುವಂತೆ ಮಾಡಬೇಕು’ ಎಂದು ಸೂಚಿಸಿದರು.
ಅಪೌಷ್ಟಿಕತೆ ಸಮಸ್ಯೆ: ‘ನಿರ್ಬಂಧಿತ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜನರಿಗೆ ತಿಳಿವಳಿಕೆ ನೀಡಬೇಕು. ಪ್ಲಾಸ್ಟಿಕ್ ತ್ಯಾಜ್ಯದಿಂದ ಕೆರೆಗಳು ಕಲುಷಿತವಾಗುತ್ತಿವೆ. ಆ ಕೆರೆಗಳ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ. ಕಲುಷಿತ ನೀರಿನಿಂದ ಬೆಳೆದ ತರಕಾರಿ, ಸೊಪ್ಪು ಬಳಕೆಯಿಂದ ಜನರಲ್ಲಿ ಅಪೌಷ್ಟಿಕತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಕೆರೆಗೆ ಸುರಿಯದಂತೆ ಜನರಿಗೆ ಅರಿವು ಮೂಡಿಸಬೇಕು’ ಎಂದರು.
‘ಪರಿಸರ ಮಾಲಿನ್ಯವು ದೊಡ್ಡ ಸಮಸ್ಯೆಯಾಗಿದ್ದು, ಮುಂದಿನ 10 ವರ್ಷದಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತದೆ. ಕೋಲಾರವು ಕೈಗಾರಿಕಾ ಆಧಾರಿತ ಜಿಲ್ಲೆ ಆಗಿರುವುದರಿಂದ ಮಾಲಿನ್ಯ ಹೆಚ್ಚಿದೆ. ಕೈಗಾರಿಕಾ ತ್ಯಾಜ್ಯವನ್ನು ಕೆರೆಗೆ ಹರಿಸುವುದನ್ನು ತಡೆಯಬೇಕು’ ಎಂದು ತಿಳಿಸಿದರು.
‘ಜೇನು ಸಾಕಾಣಿಕೆಗೆ ಹೆಚ್ಚು ಉತ್ತೇಜನ ಕೊಡಬೇಕು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೀವ ವೈವಿಧ್ಯ ಕಾರ್ಯಕ್ರಮಗಳು ನಡೆಯುತ್ತಿವೆ. ಇನ್ನು ಹೆಚ್ಚು ಕ್ರಿಯಾಶೀಲವಾಗಿ ಅಭಿಯಾನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ವಿಶೇಷ ಗಿಡ -ಮರಗಳನ್ನು ಬೆಳೆಸಬೇಕು’ ಎಂದು ಹೇಳಿದರು.
ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಣಾಧಿಕಾರಿ ಎನ್.ಎಂ.ನಾಗರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಹಾಗೂ ವಿವಿಧ ಇಲಾಖೆಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.