ಶುಕ್ರವಾರ, ಮೇ 20, 2022
23 °C
ಮಾವು ಹೂವಿನ ಚಹರೆಯೇ ಇಲ್ಲ

ಶ್ರೀನಿವಾಸಪುರ: ಮಾರಕವಾದ ಹವಾಮಾನ ವೈಪರೀತ್ಯ, ಬೆಳೆಗಾರರ ಚಿಂತೆ

ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

Prajavani

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಾವಿನ ಹೂ ಪರಿಸ್ಥಿತಿ ತೃಪ್ತಿಕರವಾಗಿಲ್ಲ. ಮರಗಳಲ್ಲಿ ಒಂದೇ ಸಮನೆ ಹೂ ಬರುತ್ತಿಲ್ಲ. ಎಳೆ ಗಿಡಗಳು ಹೂವನ್ನು ಮುಡಿಗೇರಿಸಿಕೊಂಡು ಬೀಗುತ್ತಿದ್ದರೆ, ಹಳೆ ಮರಗಳು ಹೂವಿಲ್ಲದೆ ಸೆಟೆದು ನಿಂತಿವೆ.

ಕೋಲಾರ ಜಿಲ್ಲೆಯಲ್ಲಿ 53 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ ಮಾವನ್ನು ಬೆಳೆಯಲಾಗುತ್ತಿದೆ. ಅದರಲ್ಲಿ ಶ್ರೀನಿವಾಸಪುರ ತಾಲ್ಲೂಕಿನದು ಸಿಂಹಪಾಲು. ಇಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವನ್ನು ಬೆಳೆಯಲಾಗಿದೆ. ಮಾವಿನ ಮರಗಳಲ್ಲಿ ವಾಡಿಕೆಯಂತೆ ಡಿಸೆಂಬರ್ ಕೊನೆ ವಾರ ಅಥವಾ ಜನವರಿ ಮೊದಲ ವಾರದಲ್ಲಿ ಹೂ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಫೆಬ್ರುವರಿ ತಿಂಗಳಲ್ಲಿ ಒಂದು ವಾರ ಕಳೆದಿದ್ದರೂ, ಮಾವಿನ ಮರಗಳು ಹಂತ ಹಂತವಾಗಿ ಹೂ ಬಿಡುತ್ತಿವೆ.

ಅದರಲ್ಲೂ ವಿಶೇಷವಾಗಿ ಬಾದಾಮಿ, ಬೇನಿಷಾ ಹಾಗೂ ತೋತಾಪುರಿ ಜಾತಿಯ ಮರಗಳಲ್ಲಿ ಹೂವಿನ ಪ್ರಮಾಣ ಹೆಚ್ಚಾಗಿದೆ. ಉಳಿದ ಜಾತಿಯ ಮರಗಳಲ್ಲಿ ತೆಳುವಾಗಿ ಹೂ ಬಂದಿದೆ. ಒಂದೇ ತೋಟದಲ್ಲಿ ಕೆಲವು ಮರಗಳಲ್ಲಿ ಹೂ ಬಂದಿದ್ದರೆ, ಇನ್ನು ಕೆಲವು ಮರಗಳಲ್ಲಿ ಹೂವಿನ ಚಹರೆಯೇ ಇಲ್ಲ. ಇಂಥ ಪರಿಸ್ಥಿತಿ ಮಾವು ಬೆಳೆಗಾರರ ಚಿಂತೆಗೆ ಕಾರಣವಾಗಿದೆ.

‘ಈ ಬಾರಿ ತಾಲ್ಲೂಕಿನಲ್ಲಿ ಒಳ್ಳೆ ಮಳೆಯಾಗಿದೆ. ಇತ್ತೀಚಿನವರೆಗೆ ಮಳೆ ಆಗುತ್ತಲೇ ಇತ್ತು. ವಾತಾವರಣದಲ್ಲಿ ಉಷ್ಣಾಂಶದ ಕೊರತೆಯಿಂದಾಗಿ ಮಾವಿನ ಮರಗಳಲ್ಲಿ ಹೂ ಬರುವುದು ತಡವಾಗಿದೆ’ ಎಂದು ಮಣಿಗಾನಹಳ್ಳಿ ಗ್ರಾಮದ ಅನುಭವಿ ಮಾವು ಬೆಳೆಗಾರ ಎನ್.ಶ್ರೀರಾಮರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾವಿನ ಮರಗಳಲ್ಲಿ ಹೂ ಬರಲು ಪೂರಕವಾದ ಔಷಧ ಸಿಂಪಡಣೆ ಮಾಡಿದ ಬಳಿಕವೂ ನಿರೀಕ್ಷಿತ ಪ್ರಮಾಣದಲ್ಲಿ ಹೂ ಬರುತ್ತಿಲ್ಲ. ವಯಸ್ಸಾದ ಮರಗಳಲ್ಲಿ ಅಪರೂಪಕ್ಕೆ ಇಲಿ ಬಾಲದಂಥ ಹೂ ಗೊಂಚಲುಗಳು ಕಾಣಿಸಿಕೊಂಡಿವೆ’ ಎಂಬುದು ಬೆಳೆಗಾರರ ಅಳಲು.

ಇಷ್ಟರ ನಡುವೆ, ಬಂದಿರುವ ಹೂ ಸಹ ಆರೋಗ್ಯಕರವಾಗಿಲ್ಲ. ಕೆಲವು ಕಡೆಗಳಲ್ಲಿ ಅಂಟು ನೊಣದ ಹಾವಳಿ ಕಂಡುಬಂದಿದೆ. ಬೂದಿರೋಗ ಹೂವಿಗೆ ಮಾರಕವಾಗಿ ಪರಿಣಮಿಸಿದೆ. ಹೂವಿನೊಂದಿಗೆ ಮರಗಳು ಚಿಗುರುತ್ತಿರುವುದರಿಂದ, ಚಿಗುರು ಸೇವನೆಗೆ ಬರುವ ಜಿಗಿ ನೊಣಗಳು ಹೂವಿನ ಆರೋಗ್ಯ ಕೆಡೆಸಿ ಹಾಳು ಮಾಡುತ್ತಿವೆ.

ತಾಲ್ಲೂಕಿನ ಹೊಗಳಗೆರೆ ಮಾವು ಅಭಿವೃದ್ಧಿ ಕೇಂದ್ರ ಹಾಗೂ ತಾಲ್ಲೂಕು ತೋಟಗಾರಿಕಾ ಇಲಾಖೆ ವತಿಯಿಂದ ಮಾವಿನ ಹೂ ರಕ್ಷಣೆಗೆ ಅಗತ್ಯವಾದ ಸಲಹೆ ಸಿಗುತ್ತದೆ. ಆದರೆ ಹೆಚ್ಚಿನ ಸಂಖ್ಯೆಯ ರೈತರು ಅದನ್ನು ಪರಿಗಣಿಸದೆ, ಔಷಧಿ ಅಂಗಡಿ ಮಾಲೀಕರು ಅಥವಾ ಔಷಧ ಕಂಪನಿಗಳ ಏಜೆಂಟರು ಸೂಚಿಸಿದ ಔಷಧಗಳನ್ನು ಖರೀದಿಸಿ ಸಿಂಪರಣೆ ಮಾಡುತ್ತಿದ್ದಾರೆ.

ವಯಸ್ಸಾದ ಮರಗಳಲ್ಲಿ ತೆಳುವಾಗಿ ಹೂ ಬಂದಿದ್ದರೂ, ಕೆಲವು ಮಾವು ಬೆಳೆಗಾರರು, ಕಾಂಡಕ್ಕೆ ಕೊಡಲಿ ಹಾಕಿದ್ದಾರೆ. ಈಗಾಗಲೇ ತಾಲ್ಲೂಕಿನಲ್ಲಿ ಸುಮಾರು 1 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಂಜೆ ಮಾವಿನ ಮರಗಳನ್ನು ತೆಗೆಯಲಾಗಿದೆ. ವಿಶೇಷವೆಂದರೆ ಮರ ಕಡಿದ ಕಡೆ ಮತ್ತೆ ಮಾವಿನ ಸಸಿ ನೆಡಲಾಗುತ್ತಿದೆ. ಇದರಿಂದಾಗಿ ತಾಲ್ಲೂಕಿನಲ್ಲಿ ಮಾವು ಬೆಳೆಯುವ ವಿಸ್ತೀರ್ಣ ಕಡಿಮೆಯಾಗುತ್ತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.