ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠ ನಿಗಮ ರಚನೆ ವಿರೋಧಿಸದ ಕಸಾಪ ಅಧ್ಯಕ್ಷ: ಸಾ.ರಾ.ಗೋವಿಂದು‌ ಟೀಕೆ

ಕನ್ನಡ ಸಾಹಿತ್ಯ ಪರಿಷತ್ತಿಗೆ ಮರಾಠ ಅಭಿವೃದ್ಧಿ ನಿಗಮ ರಚಿಸಿದ ಸರ್ಕಾರವನ್ನು ಪ್ರಶ್ನಿಸುವ ಜವಾಬ್ದಾರಿ ಇಲ್ಲವೆ?
Last Updated 4 ಜನವರಿ 2021, 14:10 IST
ಅಕ್ಷರ ಗಾತ್ರ

ಕೋಲಾರ: ‘ಕನ್ನಡ ಸಾಹಿತ್ಯ ಪರಿಷತ್ತಿಗೆ ಮರಾಠ ಅಭಿವೃದ್ಧಿ ನಿಗಮ ರಚಿಸಿದ ಸರ್ಕಾರವನ್ನು ಪ್ರಶ್ನಿಸುವ ಜವಾಬ್ದಾರಿ ಇಲ್ಲವೆ? ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಮರಾಠ ನಿಗಮ ರಚನೆ ವಿರೋಧಿಸಿ ಬೀದಿಗಿಳಿದು ಹೋರಾಟ ಮಾಡಿದ್ದಾರಾ?’ ಎಂದು ರಾಜ್‌ಕುಮಾರ್‌ ಅಭಿಮಾನಿಗಳ ಬಳದ ಅಧ್ಯಕ್ಷ ಸಾ.ರಾ.ಗೋವಿಂದು ಪ್ರಶ್ನಿಸಿದರು.

ಇಲ್ಲಿ ಸೋಮವಾರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಸಾಹಿತ್ಯ ಸಮ್ಮೇಳನ, ನಾಡು ನುಡಿಯ ಚಟುವಟಿಕೆಗಳಿಗೆ ಕೋಟಿಗಟ್ಟಲೇ ಅನುದಾನ ತೆಗೆದುಕೊಂಡು ಸರ್ಕಾರದ ನಾಡದ್ರೋಹಿ ನಡೆ ಪ್ರಶ್ನಿಸದ ಮನು ಬಳಿಗಾರ್‌ ಅವರಿಗೆ ನಾಚಿಕೆ ಆಗಬೇಕು’ ಎಂದು ತೀವ್ರ ವಾಗ್ದಾಳಿ ನಡೆಸಿದರು.

‘ಪರಿಷತ್ತು ಕರ್ನಾಟಕದಲ್ಲಿ ಕನ್ನಡ ಉಳಿಸಲು, ಕನ್ನಡಿಗರಿಗೆ ಉದ್ಯೋಗ ಕೊಡಿಸಲು ಹೋರಾಟ ಮಾಡದಿರುವುದು ದೊಡ್ಡ ದುರಂತ. ಪುಟಗೋಸಿ ಅನುದಾನಕ್ಕಾಗಿ ಸರ್ಕಾರದ ಕಾಲು ಹಿಡಿಯಬೇಡಿ. ನಾಡಿನ ಜನರ ಬಳಿ ಭಿಕ್ಷೆ ಬೇಡಿ ಸಾಹಿತ್ಯ ಸಮ್ಮೇಳನ ಮಾಡಿ’ ಎಂದು ಗುಡುಗಿದರು.

‘ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶಕ್ಕೆ ಸರ್ಕಾರ ಏಕಾಏಕಿ ಮರಾಠ ನಿಗಮ ರಚಿಸಿ ಕನ್ನಡಿಗರ ಹೃದಯಕ್ಕೆ ಬೆಂಕಿ ಇಟ್ಟಿತು. ವಿಪಕ್ಷಗಳು ಸಹ ಈ ಬಗ್ಗೆ ಚಕಾರವೆತ್ತಲಿಲ್ಲ. ಸರ್ಕಾರ ಮರಾಠ ನಿಗಮಕ್ಕೆ ಮೀಸಲಿಟ್ಟಿರುವ ₹ 50 ಕೋಟಿಯಲ್ಲಿ ಮರಾಠಿಗರಿಗೆ ಒಂದು ಚಡ್ಡಿ ಕೊಡಿಸಲು ಆಗಲ್ಲ’ ಎಂದು ಟೀಕಿಸಿದರು.

‘ಮಹಾರಾಷ್ಟ್ರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೆಯಾ? ಮರಾಠರ ಓಲೈಕೆಗಾಗಿ ಮರಾಠ ನಿಗಮ ರಚಿಸಿದ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ? ಸರ್ಕಾರ ಪೊಲೀಸ್‌ ಬಲ, ಅಧಿಕಾರ ಬಳಸಿಕೊಂಡು ಕನ್ನಡಪರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಆದರೆ, ಇದು ಸಾಧ್ಯವಿಲ್ಲ. ನಾಡ ವಿರೋಧಿ ಸರ್ಕಾರಕ್ಕೆ ಕನ್ನಡಪರ ಹೋರಾಟಗಾರರು ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

ಅಧಿಕಾರ ದಾಹ: ‘ಆಳುವ ಪಕ್ಷಗಳಿಗೆ ಅಧಿಕಾರದ ದಾಹ ಹೆಚ್ಚಿದೆ. ಯಾವುದೇ ಪಕ್ಷದಿಂದ ಕನ್ನಡ ಉದ್ಧಾರವಾಗಲ್ಲ. ರಾಜ್ಯದಲ್ಲಿ ಈವರೆಗೆ ಆಡಳಿತ ನಡೆಸಿರುವ ಯಾವುದೇ ಪಕ್ಷ ಸರೋಜಿನಿ ಮಹಿಷಿ ವರದಿ ಜಾರಿ, ಮೇಕೆದಾಟು ಮತ್ತು ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಮನಸ್ಸು ಮಾಡಿಲ್ಲ. ಸಾಹಿತ್ಯ ಪರಿಷತ್‌ ಸಹ ಈ ಬಗ್ಗೆ ಹೋರಾಟ ಮಾಡುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ರಾಮಕೃಷ್ಣ ಹೆಗಡೆಯವರು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮೂರು ಮತ್ತು ನಾಲ್ಕನೇ ದರ್ಜೆಯ ನೌಕರರಿಗೆ ಕಡ್ಡಾಯವಾಗಿದ್ದ ಕನ್ನಡ ಪರೀಕ್ಷೆ ಕಿತ್ತು ಹಾಕಿದರು. ಆಗ ಸಾಹಿತ್ಯ ಪರಿಷತ್‌ ಧ್ವನಿ ಎತ್ತಲಿಲ್ಲ. ಇದರ ಫಲವಾಗಿ ಹೊರಗಿನಿಂದ ಬಂದವರು ನೇರವಾಗಿ ಹುದ್ದೆಗೆ ನೇಮಕವಾದರು. ರಾಮಕೃಷ್ಣ ಹೆಗಡೆ ಕನ್ನಡದ ಮನಸ್ಸುಗಳನ್ನು ಛಿದ್ರಗೊಳಿಸಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿರೋಧಿಗಳಲ್ಲ: ‘ಕನ್ನಡಪರ ಹೋರಾಟಗಾರರು ನಾಡು, ನುಡಿಯ ಜತೆಗೆ ಸಮಾಜಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಹೋರಾಟಗಾರರಿಂದಲೇ ಕನ್ನಡ ಉಳಿದಿದೆ. ಹೋರಾಟಗಾರರು ಪರಭಾಷಾ ವಿರೋಧಿಗಳಲ್ಲ. ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದವರು ಕನ್ನಡಿಗರಾಗಿ ಇಲ್ಲಿನ ನಾಡು, ನುಡಿ ಗೌರವಿಸಬೇಕು’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT