ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಫಲಾನುಭವಿ ಮನೆ ಬಾಗಿಲಿಗೆ ‘ಮಾಸ್ಟರ್‌ ಬ್ಯಾಗ್‌’

ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಪದಾರ್ಥ ಸೋರಿಕೆ ತಡೆಗೆ ಕ್ರಮ
Last Updated 8 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಕೋಲಾರ: ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಪದಾರ್ಥಗಳ ಸೋರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕಿಟ್‌ ರೂಪದಲ್ಲಿ (ಮಾಸ್ಟರ್‌ ಬ್ಯಾಗ್‌) ಫಲಾನುಭವಿಗಳಿಗೆ ನೇರವಾಗಿ ಆಹಾರ ಪದಾರ್ಥ ತಲುಪಿಸುವ ಯೋಜನೆ ರೂಪಿಸಿದೆ.

ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆ ರೂಪಿಸಿವೆ. ಈ ಯೋಜನೆಗಳಡಿ ಅಂಗನವಾಡಿಗಳಲ್ಲೇ ಪೌಷ್ಟಿಕ ಆಹಾರ ಸಿದ್ಧಪಡಿಸಿ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಕೊಡಲಾಗುತ್ತಿತ್ತು.

ಸದ್ಯ ಕೋವಿಡ್‌ ಭೀತಿ ಹಿನ್ನೆಲೆಯಲ್ಲಿ ಅಂಗನವಾಡಿಗಳನ್ನು ಬಂದ್ ಮಾಡಿರುವುದರಿಂದ ಫಲಾನುಭವಿಗಳ ಮನೆಗೆ ಆಹಾರ ಪದಾರ್ಥ ಪೂರೈಸಲಾಗುತ್ತಿದೆ. ಗುತ್ತಿಗೆದಾರರು ಪೂರಕ ಪೌಷ್ಟಿಕ ಆಹಾರ ಸಂಸ್ಕರಣಾ ಘಟಕಗಳಿಗೆ (ಎಂಎಸ್‌ಪಿ) ಪೌಷ್ಟಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುತ್ತಾರೆ. ನಂತರ ಎಂಎಸ್‌ಪಿಗಳಿಂದ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥ ಕಳುಹಿಸಲಾಗುತ್ತದೆ.

ಜಿಲ್ಲೆಯಲ್ಲಿ 1,999 ಅಂಗನವಾಡಿಗಳು ಹಾಗೂ 81 ಮಿನಿ ಅಂಗನವಾಡಿ ಕೇಂದ್ರಗಳಿವೆ. 83,402 ಮಕ್ಕಳು, 10,057 ಗರ್ಭಿಣಿಯರು, 9,636 ಬಾಣಂತಿಯರು ಮತ್ತು 50 ಮಂದಿ ಕಿಶೋರಿಯರು (ಶಾಲೆಯಿಂದ ಹೊರಗುಳಿದ ಹೆಣ್ಣು ಮಕ್ಕಳು) ಪೌಷ್ಟಿಕ ಆಹಾರ ಪದಾರ್ಥಗಳ ಫಲಾನುಭವಿಗಳಾಗಿದ್ದಾರೆ. ತಿಂಗಳಲ್ಲಿ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಒಟ್ಟಾರೆ 26 ದಿನ ಆಹಾರ ಪದಾರ್ಥ ನೀಡಲಾಗುತ್ತಿದೆ.

ತೂಕದಲ್ಲಿ ವಂಚನೆ: ಅಂಗನವಾಡಿ ಕೇಂದ್ರಗಳಿಂದ ಫಲಾನುಭವಿಗಳಿಗೆ ನೀಡುವ ಆಹಾರ ಪದಾರ್ಥಗಳ ತೂಕದಲ್ಲಿ ವಂಚನೆಯಾಗುತ್ತಿರುವ ಬಗ್ಗೆ ಇಲಾಖೆಗೆ ಸಾಕಷ್ಟು ದೂರು ಬಂದಿವೆ. ಸಾರ್ವಜನಿಕರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಹಿರಿಯ ಅಧಿಕಾರಿಗಳು ಆಹಾರ ಪದಾರ್ಥಗಳನ್ನು ಬಿಡಿ ಬಿಡಿಯಾಗಿ ಫಲಾನುಭವಿಗಳಿಗೆ ಕೊಡುವ ಬದಲು ಪ್ಯಾಕಿಂಗ್‌ ಮಾಡಿ ಕಿಟ್‌ ರೂಪದಲ್ಲಿ ಕೊಡುವ ನಿರ್ಧಾರ ಮಾಡಿದ್ದಾರೆ.

ಎಂಎಸ್‌ಪಿಯಲ್ಲೇ ಪ್ಯಾಕಿಂಗ್‌: ನಿಗದಿತ ಎಲ್ಲಾ ಆಹಾರ ಪದಾರ್ಥಗಳನ್ನು ಎಂಎಸ್‌ಪಿಗಳಲ್ಲೇ ಚೀಲಕ್ಕೆ ತುಂಬಿಸಿ ಕಿಟ್‌ ಮಾಡಿ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ನಂತರ ಅಂಗನವಾಡಿಗಳಿಂದ ಫಲಾನುಭವಿಗಳ ಮನೆ ಬಾಗಿಲಿಗೆ ಆಹಾರ ಪದಾರ್ಥಗಳ ಕಿಟ್‌ ತಲುಪಲಿದೆ. ಒಮ್ಮೆ ಪ್ಯಾಕಿಂಗ್‌ ಆದ ಕಿಟ್‌ಗಳನ್ನು ಅಂಗನವಾಡಿಗಳಲ್ಲಿ ತೆರೆಯಲು ಅವಕಾಶವಿಲ್ಲ.

ಕಳೆದೊಂದು ವಾರದಿಂದ ಪ್ರಾಯೋಗಿಕವಾಗಿ ಗರ್ಭಿಣಿಯರು ಮತ್ತು ಬಾಣಂತಿಯರ ಮನೆಗಳಿಗೆ ಮಾಸ್ಟರ್‌ ಬ್ಯಾಗ್‌ಗಳಲ್ಲಿ ಆಹಾರ ಪದಾರ್ಥಗಳನ್ನು ವಿತರಿಸುವ ಕಾರ್ಯ ಆರಂಭವಾಗಿದೆ. ಈ ವಿಧಾನದಲ್ಲಿ ಅಂಗನವಾಡಿ ನೌಕರರ ಹಸ್ತಕ್ಷೇಪ ತಪ್ಪಲಿದ್ದು, ಆಹಾರ ಪದಾರ್ಥಗಳ ಸೋರಿಕೆಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT