ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್ | ಮನೆ ನೋಂದಣಿಗೆ ಶುಲ್ಕ ಬೇಡ: ಗಣಿ ಕಾರ್ಮಿಕರ ಮನವಿ

Published 19 ಫೆಬ್ರುವರಿ 2024, 16:05 IST
Last Updated 19 ಫೆಬ್ರುವರಿ 2024, 16:05 IST
ಅಕ್ಷರ ಗಾತ್ರ

ಕೆಜಿಎಫ್‌: ಬಿಜಿಎಂಎಲ್‌ ಕಾರ್ಖಾನೆ ಮುಚ್ಚಿದ ಸಂದರ್ಭದಲ್ಲಿ ಎಸ್‌ಟಿಬಿಪಿ (ಸ್ವಯಂ ನಿವೃತ್ತಿ ಯೋಜನೆ)ಯಡಿ ನಿವೃತ್ತಿ ಪಡೆದ ಕಾರ್ಮಿಕರಿಗೆ ಅವರು ವಾಸ ಮಾಡುತ್ತಿರುವ ಮನೆಗಳ ಸ್ವಾಧೀನಕ್ಕೆ ಸ್ಟಾಂಪ್‌ ಶುಲ್ಕ ವಿಧಿಸಬಾರದು ಎಂದು ಬಿಜಿಎಂಎಲ್‌ ಸೂಪರ್‌ವೈಸರ್ಸ್‌, ಅಧಿಕಾರಿಗಳ ಕೈಗಾರಿಕಾ ಕೋ ಅಪರೇಟಿವ್‌ ಸೊಸೈಟಿ ಆಗ್ರಹಿಸಿದೆ.

ಈ ಸಂಬಂಧ ಸೊಸೈಟಿ ಈಗಾಗಲೇ ಶಾಸಕಿ ಎಂ.ರೂಪಕಲಾ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ನ್ಯಾಯಾಲಯದ ನಿರ್ದೇಶನದಂತೆ ಕಂಪನಿಯು ಬಿಜಿಎಂಎಲ್‌ ಕಾರ್ಮಿಕರು ವಾಸ ಮಾಡುತ್ತಿರುವ ಮನೆಗಳನ್ನು ಅವರಿಗೆ ಮೂಲಬೆಲೆಯಲ್ಲಿ ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅವರು ವಾಸ ಮಾಡುತ್ತಿರುವ ಮನೆಗಳ ಬೆಲೆ ಈಗಾಗಲೇ ಅವರು ಕಂಪನಿಗೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕುಟುಂಬಗಳು ಆರ್ಥಿಕವಾಗಿ ಸಬಲವಾಗಿಲ್ಲ. ಗಣಿ ಕಾರ್ಮಿಕರ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಪರಿಶೀಲಿಸಿ ಮನೆಗಳ ಸ್ವಾಧೀನ ಪತ್ರದ ನೋಂದಣಿಯನ್ನು ಕೆಜಿಎಫ್‌ ಉಪ ನೋಂದಣಾಧಿಕಾರಿ ಉಚಿತವಾಗಿ ನೋಂದಣಿ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಬಿಜಿಎಂಎಲ್‌ಗೆ ಸೇರಿದ ಜಾಗವನ್ನು ರಾಜ್ಯ ಸರ್ಕಾರ ಮರಳಿ ವಾಪಸ್ ಪಡೆಯುವ ಪ್ರಕ್ರಿಯೆ 2016ರಲ್ಲಿ ಪ್ರಾರಂಭವಾದರೂ ನಂತರದ ದಿನಗಳಲ್ಲಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಕೂಡಲೇ ಸರ್ಕಾರ ಈ ನಿಟ್ಟಿನಲ್ಲಿ ಮುಂದುವರಿದು, ಬಿಜಿಎಂಎಲ್‌ ವ್ಯಾಪ್ತಿಯಲ್ಲಿರುವ ಸಾವಿರಾರು ಎಕರೆ ಜಾಗ ಮರಳಿ ಪಡೆದು ಅಲ್ಲಿ ಉದ್ಯೋಗ ಸೃಷ್ಟಿಯಾಗುವ ಕಾರ್ಯ ಮಾಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಕಾರ್ಮಿಕ ಸಂಘದ ಮನವಿಯಂತೆ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತರು ಕೋಲಾರ ಜಿಲ್ಲಾ ನೋಂದಣಾಧಿಕಾರಿಗೆ ಪತ್ರ ಬರೆದಿದ್ದು, ಎಸ್‌ಟಿಬಿಪಿ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡುವ ಸಂದರ್ಭದಲ್ಲಿ ಸ್ವತ್ತಿಗೆ ತಗಲುವ ಮಾರುಕಟ್ಟೆ ಮೌಲ್ಯ, ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕದ ವಿವರ ಕಳಿಸಿಕೊಡಬೇಕು ಎಂದು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT