ಕೋಲಾರ: ‘ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ತಪ್ಪು ಮಾಡಿದ್ದಾನೆಯೋ ಇಲ್ಲವೋ ಎಂಬುದನ್ನು ನ್ಯಾಯಾಲಯ ನಿರ್ಧರಿಸಲಿದೆ. ರಾಜಕಾರಣದಲ್ಲಿದ್ದ ಮಾತ್ರಕ್ಕೆ ಅಪ್ಪ ಹೇಗೆ ಕೆಟ್ಟವರು ಆಗುತ್ತಾರೆ? ತನಿಖೆ ನಡೆದು ತೀರ್ಪು ಹೊರಬೀಳಲಿ. ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತದೆ’ ಎಂದು ಸಚಿವ ಮುನಿರತ್ನ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜೈಲಿಗೆ ಹೋಗಿ ಏನೋ ಗೆದ್ದವರಂತೆ ವಿಮಾನ ನಿಲ್ದಾಣದಿಂದ ಮೆರವಣಿಗೆ ಬಂದವರು ಈಗ ಹೇಗಿದ್ದಾರೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಮಾಡಾಳ್ ಪ್ರಕರಣ ತನಿಖೆ ಹಂತದಲ್ಲಿದ್ದು, ನಾವು ಹೇಗೆ ಪ್ರತಿಕ್ರಿಯಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.
ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಿಂದ ಬಿಜೆಪಿಗೆ ಹಿನ್ನಡೆ ಆಗಲಿದೆಯೇ ಎಂಬುದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಕುಂಕುಮ ಇಟ್ಟುಕೊಳ್ಳದ ಮಹಿಳೆಯನ್ನು ಸಂಸದ ಎಸ್.ಮುನಿಸ್ವಾಮಿ ನಿಂದಿಸಿದ್ದರ ಕುರಿತು, ‘ನನಗೆ ಈ ವಿಚಾರವೇ ಗೊತ್ತಿಲ್ಲ. ವಿಷಯ ತಿಳಿದುಕೊಳ್ಳುತ್ತೇನೆ’ ಎಂದರು.
ಸಚಿವರಾದ ನಾರಾಯಣಗೌಡ, ಸೋಮಣ್ಣ ಪಕ್ಷ ತೊರೆಯುವ ವಿಚಾರ ಕುರಿತು, ‘ಮಾಧ್ಯಮದವರು ಈ ವಿಚಾರವಾಗಿ ಮೂರು ದಿನ ಸುದ್ದಿ ಪ್ರಕಟಿಸುವುದನ್ನು ನಿಲ್ಲಿಸಿದರೆ ಅವರು ಎಲ್ಲೂ ಹೋಗುವುದಿಲ್ಲ. ಸೋಮಣ್ಣ ಸ್ವಂತ ಶಕ್ತಿ ಮೇಲೆ ರಾಜಕೀಯ ಮಾಡಿಕೊಂಡು ಬಂದಿದ್ದಾರೆ’ ಎಂದು ಹೇಳಿದರು.
‘ಚುನಾವಣಾ ಪ್ರಚಾರ ಸಮಿತಿಯಲ್ಲಿ ನನಗೂ ಸ್ಥಾನ ನೀಡಿಲ್ಲ. ನನ್ನ ಜೊತೆಯಲ್ಲಿ ಬಿಜೆಪಿ ಸೇರಿದ ಕೆಲವರಿಗೆ ಅವಕಾಶ ಸಿಕ್ಕಿದೆ. ಆದರೆ, ಚುನಾವಣೆಯೇ ಅಂತಿಮವಲ್ಲ; ಮುಂದಿನ ದಿನಗಳಲ್ಲಿ ಸ್ಥಾನಮಾನ ಸಿಗಲಿದ್ದು, ಪಕ್ಷ ಯಾರನ್ನೂ ಕೈಬಿಡಲ್ಲ’ ಎಂದು ನುಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.