ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ರಮೇಶ್‌ಕುಮಾರ್‌ಗೆ ಮರ್ಯಾದೆ ಇಲ್ಲ: ಸಂಸದ ಮುನಿಯಪ್ಪ ತೀವ್ರ ವಾಗ್ದಾಳಿ

Last Updated 28 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕೋಲಾರ: ‘ಪಕ್ಷದ ಶಾಸಕರಾದ ರಮೇಶ್‌ಕುಮಾರ್‌, ಎಸ್‌.ಎನ್‌.ನಾರಾಯಣಸ್ವಾಮಿ, ವಿ.ಮುನಿಯಪ್ಪ, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮ್ಮದ್‌ ಅವರೇ ನನ್ನ ಸೋಲಿಗೆ ಕಾರಣ. ಅವರಿಗೆಲ್ಲಾ ಮಾನ ಮರ್ಯಾದೆ ಇಲ್ಲ’ ಎಂದು ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಬಹಿರಂಗವಾಗಿ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆ ಸೋಲಿನ ಸಂಬಂಧ ಜಿಲ್ಲೆಯ ಮಾಲೂರಿನಲ್ಲಿ ಬುಧವಾರ ನಡೆದ ಕಾಂಗ್ರೆಸ್‌ನ ಸತ್ಯ ಶೋಧನಾ ಸಮಿತಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಪಕ್ಷದ ಶಾಸಕರೇ ನನ್ನನ್ನು ಸೋಲಿಸಿದರು. ಅವರಿಗೆ ಸ್ವಲ್ಪವಾದರೂ ಮಾನವಿದ್ದರೆ ಕಾಂಗ್ರೆಸ್‌ ಕಚೇರಿಯ ಹೊಸ್ತಿಲು ತುಳಿಯಬಾರದು’ ಎಂದು ಗುಡುಗಿದರು.

‘ರಮೇಶ್‌ಕುಮಾರ್‌ ಹಾಗೂ ಅವರ ಬಣದ ಶಾಸಕರು ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡಲಿಲ್ಲ. ಕಾಂಗ್ರೆಸ್‌ಗೆ ಮತ ಹಾಕಬೇಡಿ ಎಂದು ಹೇಳಿ ಈಗ ಕಾಂಗ್ರೆಸ್‌ ಕಚೇರಿಗೆ ಬರುತ್ತಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ಪಟ್ಟಿಯನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೆ ಸಲ್ಲಿಸಿದ್ದೇನೆ’ ಎಂದರು.

‘ನಾನೇ ರಮೇಶ್‌ಕುಮಾರ್‌ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಕೊಡಿಸಿ ಬೆಳೆಸಿದೆ. ಆದರೆ, ಈಗ ಅವರು ನನ್ನ ವಿರುದ್ಧವೇ ಕೆಲಸ ಮಾಡಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡಿರುವ ರಮೇಶ್‌ಕುಮಾರ್‌ ಕಾಂಗ್ರೆಸ್‌ಗೆ ಬೇಡ. ಪಕ್ಷದ್ರೋಹಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸತ್ಯಶೋಧನಾ ಸಮಿತಿ ಸದಸ್ಯರಿಗೆ ಶಿಫಾರಸು ಮಾಡಿದ್ದೇನೆ’ ಎಂದು ಕಿಡಿಕಾರಿದರು.

ಧೈರ್ಯವಾಗಿ ಹೇಳಿ: ಸಭೆಗೂ ಮುನ್ನ ಕಾರ್ಯಕರ್ತರೊಂದಿಗೆ ಮಾತನಾಡಿದ ಮುನಿಯಪ್ಪ, ‘ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡಿದ ಕಾಂಗ್ರೆಸ್‌ ಶಾಸಕರ ಹೆಸರನ್ನು ಸತ್ಯಶೋಧನಾ ಸಮಿತಿ ಸದಸ್ಯರಿಗೆ ತಿಳಿಸಿ. ಎಲ್ಲವನ್ನೂ ಧೈರ್ಯವಾಗಿ ಹೇಳಿ. ಬಿಜೆಪಿ ಪರ ಕೆಲಸ ಮಾಡಿದವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ನಿಮ್ಮ ಅಭಿಪ್ರಾಯ ದೆಹಲಿಯ ವರಿಷ್ಠರಿಗೆ ತಲುಪುತ್ತದೆ. ದಿನೇಶ್‌ ಗುಂಡೂರಾವ್‌ ವರಿಷ್ಠರಿಗೆ ವರದಿ ಕಳುಹಿಸುತ್ತಾರೆ’ ಎಂದು ಸೂಚಿಸಿದರು.

ಸತ್ಯಶೋಧನಾ ಸಮಿತಿ ಸದಸ್ಯರಾದ ಮಾಜಿ ಸಂಸದ ಆರ್‌.ಧ್ರುವನಾರಾಯಣ್‌, ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌, ಮಾಜಿ ಸದಸ್ಯ ವೀರಣ್ಣ ಮತ್ತಿಕಟ್ಟಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸುಮಾರು 7 ತಾಸು ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.

ಮುನಿಯಪ್ಪ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಮಾಲೂರು ಶಾಸಕ ಕೆ.ವೈ.ನಂಜೇಗೌಡ, ಮಾಜಿ ಸಚಿವ ನಿಸಾರ್‌ ಅಹಮ್ಮದ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಸಭೆಯಲ್ಲಿ ಪಾಲ್ಗೊಂಡರು. ಆದರೆ, ರಮೇಶ್‌ಕುಮಾರ್‌ ಹಾಗೂ ಅವರ ಬಣದ ಶಾಸಕರು ಸಭೆಯಿಂದ ದೂರ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT