ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್‌ | ಪ್ರಥಮ ದರ್ಜೆ ಕಾಲೇಜು ದುಸ್ಥಿತಿಗೆ ಶಾಸಕಿ ಎಂ.ರೂಪಕಲಾ ಗರಂ

ಪ್ರಥಮ ದರ್ಜೆ ಕಾಲೇಜು ಸ್ಥಿತಿ ಕಂಡು ಶಾಸಕಿ ತರಾಟೆ
Last Updated 22 ನವೆಂಬರ್ 2022, 6:09 IST
ಅಕ್ಷರ ಗಾತ್ರ

ಕೆಜಿಎಫ್‌: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡೆಸ್ಕ್‌ ಇಲ್ಲದ ಕಾರಣ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ತರಗತಿಯಲ್ಲಿ ನೆಲದ ಮೇಲೆ ಚಾಪೆ ಹಾಸಿ ಕುಳಿತು ಕುಳಿತು ಪಾಠ ಕೇಳುತ್ತಿದ್ದಾರೆ.

ಕಾಲೇಜಿಗೆ ಸೋಮವಾರ ಕೆಜಿಎಫ್‌ ಶಾಸಕಿ ಎಂ.ರೂಪಕಲಾ ಭೇಟಿ ನೀಡಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಚಾಪೆ ಮೇಲೆ ಕುಳಿತು ಪಾಠ ಕೇಳುತ್ತಿರುವುದನ್ನು ಕಂಡ ಅವರು ಕಾಲೇಜು ಸಿಬ್ಬಂದಿಯನ್ನು ತರಾಟೆಗೆ ತೆಗದುಕೊಂಡರು.

‘ಬೆಳಿಗ್ಗೆ 9.30ಕ್ಕೆ ಕಾಲೇಜಿಗೆ ಬಂದರೆ ಮಧ್ಯಾಹ್ನ 1.30 ವರೆಗೂ ನಡೆಯುವ ತರಗತಿಗಳನ್ನು ನೆಲದ ಮೇಲೆ ಕುಳಿತು ಕೇಳಬೇಕು. ಜೀನ್ಸ್‌ ಪ್ಯಾಂಟ್‌ ಧರಿಸಿದ ವಿದ್ಯಾರ್ಥಿಗಳಿಗೆ ಕೆಳಗೆ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ. ಆದ್ದರಿಂದ ಹುಡುಗರ ಹಾಜರಾತಿ ಕಡಿಮೆ ಇದೆ’ ಎಂದು ವಿದ್ಯಾರ್ಥಿಗಳು ಶಾಸಕರಿಗೆ ಮಾಹಿತಿ ನೀಡಿದರು.

‘ಪದವಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕೇಳುವುದು ವಿಷಾದದ ಸಂಗತಿ. ಉನ್ನತ ವ್ಯಾಸಂಗಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಮೂಲ ಸೌಕರ್ಯ ಒದಗಿಸಲು ಕಾಲೇಜು ಶಿಕ್ಷಣ ಇಲಾಖೆ ಕ್ರಮ ವಹಿಸಿಲ್ಲ. ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಬೇಕು. ಹಾಗಾಗಿ ಶೀಘ್ರ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಕರೆದು ಪೀಠೋಪಕರಣ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

‘ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂಬ ಮಾಹಿತಿ ಇದ್ದರೂ ಮೂಲ ಸೌಕರ್ಯ ಒದಗಿಸಲು ಕಾಲೇಜು ಶಿಕ್ಷಣ ಇಲಾಖೆ ಕ್ರಮ ವಹಿಸಿಲ್ಲ’ ಎಂದು ಶಾಸಕಿ ರೂಪಕಲಾ ಅಸಮಾಧಾನ ವ್ಯಕ್ತಪಡಿಸಿದರು.

ಕಾಲೇಜಿನ ಹೊಸ ಕಟ್ಟಡಕ್ಕಾಗಿ ಸರ್ಕಾರದೊಡನೆ ವ್ಯವಹರಿಸಿ ಹಣ ಬಿಡುಗಡೆ ಮಾಡಿಸಲಾಯಿತು. ಇನ್ನೂ ₹2 ಕೋಟಿ ವೆಚ್ಚದಲ್ಲಿ ಕಾಲೇಜು ಅಭಿವೃದ್ಧಿ ಮಾಡಲಾಗುವುದು ಎಂದು ಅವರು ಹೇಳಿದರು.ನಗರಸಭೆ ಅಧ್ಯಕ್ಷ ವಳ್ಳಲ್‌ ಮುನಿಸ್ವಾಮಿ ಮತ್ತು ಕಾಲೇಜು ಸಿಬ್ಬಂದಿ ಶಾಸಕಿಯ ಜೊತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT