ಮಂಗಳವಾರ, ಡಿಸೆಂಬರ್ 7, 2021
24 °C
ಆಯೋಗಕ್ಕೆ ಅಭ್ಯರ್ಥಿಗಳ ಪ್ರಮಾಣಪತ್ರ ಸಲ್ಲಿಕೆ

ಕೋಲಾರ ಪರಿಷತ್‌ ಚುನಾವಣೆ: ಕಣದಲ್ಲಿರುವ ಅಭ್ಯರ್ಥಿಗಳಿಗಿಂತ ಪತ್ನಿಯರೇ ಸಿರಿವಂತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗಿಂತ ಅವರ ಪತ್ನಿಯರೇ ಹೆಚ್ಚು ಸಿರಿವಂತರಾಗಿದ್ದಾರೆ. ಹಣ, ಆಸ್ತಿ, ಆಭರಣ, ವಾಹನಗಳು ಸೇರಿದಂತೆ ಆರ್ಥಿಕವಾಗಿ ಅಭ್ಯರ್ಥಿಗಳ ಪತ್ನಿಯರೇ ಒಂದು ಕೈ ಮೇಲಿದ್ದಾರೆ.

ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ, ಪತ್ನಿ ಹಾಗೂ ಕುಟುಂಬ ಸದಸ್ಯರ, ಅವಲಂಬಿತರ ವಾರ್ಷಿಕ ಆದಾಯ, ತೆರಿಗೆ ಪಾವತಿ, ಚಿನ್ನಾಭರಣ, ವಾಹನಗಳು, ಕೃಷಿ ಭೂಮಿ, ನಿವೇಶನಗಳ ವಿವರವನ್ನು ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಅದರ ವಿವರ ಕೆಳಗಿನಂತಿದೆ.

ಬಿಜೆಪಿ ಅಭ್ಯರ್ಥಿ ಡಾ.ಕೆ.ಎನ್‌.ವೇಣುಗೋಪಾಲ್‌ ಅವರಿಗಿಂತ ಅವರ ಪತ್ನಿ ಡಾ.ಎಂ.ಎಸ್‌.ಕವಿತಾ ಅವರೇ ಹಣ ಹಾಗೂ ಅಸ್ತಿಯಲ್ಲಿ ಒಂದು ಕೈ ಮೇಲಿದ್ದಾರೆ. ವೇಣುಗೋಪಾಲ್‌ರ ಬಳಿ ₹ 3.50 ಲಕ್ಷ, ಅವರ ಪತ್ನಿ ಡಾ.ಎಂ.ಎಸ್‌.ಕವಿತಾ ಬಳಿ ₹ 4.25 ಲಕ್ಷ, ಮಕ್ಕಳ ಬಳಿ ₹ 50 ಸಾವಿರ, ಇತರೆ ಕುಟುಂಬ ಸದಸ್ಯರ ಬಳಿ ₹ 5 ಲಕ್ಷ ನಗದು ಇದೆ. ವೇಣುಗೋಪಾಲ್‌ ವಿವಿಧ ಹಣಕಾಸು ಸಂಸ್ಥೆಗಳಲ್ಲಿ ₹ 1.28 ಲಕ್ಷ, ಪತ್ನಿಯು ₹ 97,681, ಕುಟುಂಬ ಸದಸ್ಯರು ₹ 47,206 ಠೇವಣಿ ಇಟ್ಟಿದ್ದಾರೆ.

ವೇಣುಗೋಪಾಲ್‌ ಅವರು ಸ್ನೇಹಿತರಿಗೆ ₹ 10.20 ಲಕ್ಷ ಮತ್ತು ಅವರ ಪತ್ನಿ ಕವಿತಾ ಅವರು ₹ 10 ಲಕ್ಷ ಸಾಲ ಕೊಟ್ಟಿದ್ದಾರೆ. ವೇಣುಗೋಪಾಲ್‌ರ ಬಳಿ ಒಂದು ಕಾರು ಹಾಗೂ ಪತ್ನಿ ಬಳಿ 2 ಕಾರುಗಳಿವೆ. ವೇಣುಗೋಪಾಲ್‌ರ ಬಳಿ ₹ 9 ಲಕ್ಷ ಮೌಲ್ಯದ 200 ಗ್ರಾಂ ಚಿನ್ನಾಭರಣ ಮತ್ತು ₹ 1.67 ಲಕ್ಷ ಬೆಲೆ ಬಾಳುವ ಎರಡೂವರೆ ಕೆ.ಜಿ ಬೆಳ್ಳಿ ಆಭರಣಗಳಿವೆ.

ಕವಿತಾ ಅವರ ಪತ್ನಿ ಬಳಿ ₹ 15.75 ಲಕ್ಷ ಬೆಲೆ ಬಾಳುವ 350 ಗ್ರಾಂ ಚಿನ್ನಾಭರಣ ಹಾಗೂ ₹ 2.01 ಲಕ್ಷ ಮೌಲ್ಯದ 3 ಕೆ.ಜಿ ಬೆಳ್ಳಿ ಆಭರಣಗಳಿವೆ. ಒಟ್ಟಾರೆ ಕುಟುಂಬದ ಬಳಿ ₹ 95.47 ಲಕ್ಷ ಮೌಲ್ಯದ ಚರಾಸ್ತಿ ಇದೆ. ಪತಿ ವೇಣುಗೋಪಾಲ್‌ ಅವರಿಗಿಂತ ಪತ್ನಿಯೇ ಹೆಚ್ಚಿನ ಚರಾಸ್ತಿ ಹೊಂದಿದ್ದಾರೆ.

ವೇಣುಗೋಪಾಲ್‌ರ ಹೆಸರಿನಲ್ಲಿ ಸುಮಾರು ₹ 55 ಲಕ್ಷ ಬೆಲೆ ಬಾಳುವ 8 ಎಕರೆ 32 ಗುಂಟೆ ಕೃಷಿ ಜಮೀನು, ಪತ್ನಿ ಹೆಸರಿನಲ್ಲಿ ₹ 15 ಲಕ್ಷ ಬೆಲೆ ಬಾಳುವ 2 ಎಕರೆ, ಇತರೆ ಕುಟುಂಬ ಸದಸ್ಯರ ಹೆಸರಿನಲ್ಲಿ ₹ 75 ಲಕ್ಷದ 9 ಎಕರೆ 10 ಗುಂಟೆ ಕೃಷಿ ಜಮೀನಿದೆ. ಪತ್ನಿ ಹೆಸರಿನಲ್ಲಿ ಶ್ರೀನಿವಾಸಪುರ ಪಟ್ಟಣದಲ್ಲಿ ಸುಮಾರು ₹ 80 ಲಕ್ಷ ಮೌಲ್ಯದ ನಿವೇಶನಗಳು, ಇತರೆ ಕುಟುಂಬ ಸದಸ್ಯರ ಹೆಸರಿನಲ್ಲಿ ₹ 3.25 ಕೋಟಿ ಬೆಲೆ ಬಾಳುವ ಕೃಷಿಯೇತರ ಜಮೀನು ಇದೆ.

ವೇಣುಗೋಪಾಲ್‌ರ ಹೆಸರಿನಲ್ಲಿ ₹ 3.50 ಕೋಟಿ ಬೆಲೆ ಬಾಳುವ ವಾಣಿಜ್ಯ ಕಟ್ಟಡ ಸೇರಿದಂತೆ ಒಟ್ಟಾರೆ ₹ 4.05 ಕೋಟಿಯ ಸ್ಥಿರಾಸ್ತಿ, ಪತ್ನಿ ಹೆಸರಿನಲ್ಲಿ ₹ 95 ಲಕ್ಷ ಮೌಲ್ಯದ ಮತ್ತು ಇತರೆ ಕುಟುಂಬ ಸದಸ್ಯರ ಹೆಸರಿನಲ್ಲಿ ₹ 4 ಕೋಟಿ ಬೆಲೆ ಬಾಳುವ ಸ್ಥಿರಾಸ್ತಿ ಇದೆ. ವೇಣುಗೋಪಾಲ್‌ರ ಸಾಲ ₹ 70 ಲಕ್ಷ ಮತ್ತು ಅವರ ಪತ್ನಿಯ ಸಾಲ ₹ 30.43 ಲಕ್ಷವಿದೆ. ವೈದ್ಯಕೀಯ ಪದವೀಧರರಾದ ವೇಣುಗೋಪಾಲ್‌ ವೈದ್ಯ ವೃತ್ತಿಯ ಜತೆಗೆ ಕೃಷಿ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.

ಕೋಟಿ ಒಡೆಯ: ಜೆಡಿಎಸ್‌ ಅಭ್ಯರ್ಥಿ ವಿ.ಇ.ರಾಮಚಂದ್ರ (ವಕ್ಕಲೇರಿ ರಾಮು) ಅವರು ವಿಪಕ್ಷಗಳ ಅಭ್ಯರ್ಥಿಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದು, ಕೋಟಿ ಒಡೆಯರಾಗಿದ್ದಾರೆ. ಅವರ ಬಳಿ ಸುಮಾರು 1.43 ಕೋಟಿ ಬೆಲೆ ಬಾಳುವ ಹಾಗೂ ಪತ್ನಿ ಬಳಿ ₹ 29.80 ಲಕ್ಷ ಮೌಲ್ಯದ ಚರಾಸ್ತಿಗಳಿವೆ. ಪತ್ನಿ ಬಳಿ ಅರ್ಧ ಕೆ.ಜಿ ಚಿನ್ನಾಭರಣ ಮತ್ತು 1 ಕೆ.ಜಿ ಬೆಳ್ಳಿ ಆಭರಣಗಳಿವೆ. ಇತರೆ ಕುಟುಂಬ ಸದಸ್ಯರ ಬಳಿ ₹ 17.70 ಲಕ್ಷ ಮೌಲ್ಯದ ಚರಾಸ್ತಿ ಇವೆ.

ರಾಮು ಅವರ ಹೆಸರಿನಲ್ಲಿ ₹ 3.46 ಕೋಟಿ ಬೆಲೆ ಬಾಳುವ ಕೃಷಿ ಭೂಮಿ, ₹ 28.33 ಲಕ್ಷ ಮೌಲ್ಯದ ಕೃಷಿಯೇತರ ಭೂಮಿ, ₹ 1.88 ಕೋಟಿ ಬೆಲೆ ಬಾಳುವ ವಾಣಿಜ್ಯ ಕಟ್ಟಡ ಹಾಗೂ ಪತ್ನಿ ಹೆಸರಿನಲ್ಲಿ ₹ 15.12 ಲಕ್ಷ ಬೆಲೆ ಬಾಳುವ ಕೃಷಿಯೇತರ ಭೂಮಿ ಇದೆ. ರಾಮು ಅವರು ₹ 21.20 ಲಕ್ಷ ಸಾಲವಿದೆ ಎಂದು ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಒಟ್ಟಾರೆ ಅವರು ₹ 5.63 ಕೋಟಿಯ ಒಡೆಯರಾಗಿದ್ದಾರೆ. ಬಿ.ಎ ಪದವೀಧರರಾದ ಅವರು ಕೃಷಿಯ ಜತೆಗೆ ಕುಕ್ಕಟ ಉದ್ಯಮ ನಡೆಸುತ್ತಿದ್ದಾರೆ.

ಆಸ್ತಿಗಿಂತ ಸಾಲ ಹೆಚ್ಚು: ಕಾಂಗ್ರೆಸ್‌ ಅಭ್ಯರ್ಥಿ ಎಂ.ಎಲ್‌.ಅನಿಲ್‌ಕುಮಾರ್ ಅವರು ಬ್ಯಾಂಕ್‌ನಲ್ಲಿ ₹ 50 ಸಾವಿರ ಮತ್ತು ಅವರ ಪತ್ನಿಯು ₹ 20 ಸಾವಿರ ಠೇವಣಿ ಇಟ್ಟಿದ್ದಾರೆ. ಅನಿಲ್‌ಕುಮಾರ್‌ ₹ 50 ಲಕ್ಷದ ಜೀವ ವಿಮೆ ಮಾಡಿಸಿದ್ದಾರೆ. ಅವರ ಬಳಿ ಒಂದು ಕಾರು ಮತ್ತು ಒಂದು ಬೈಕ್‌ ಇದೆ.

ಅನಿಲ್‌ಕುಮಾರ್‌ ₹ 15 ಲಕ್ಷ ಮೌಲ್ಯದ ಕೃಷಿ ಭೂಮಿ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ ₹ 29.47 ಲಕ್ಷ ಮೌಲ್ಯದ ಕೃಷಿಯೇತರ ಭೂಮಿಯಿದೆ. ಅನಿಲ್‌ಕುಮಾರ್‌ರ ಆಸ್ತಿ ಮೌಲ್ಯಕ್ಕಿಂತ ಸಾಲದ ಪ್ರಮಾಣವೇ ಹೆಚ್ಚಿದೆ. ₹ 2.63 ಕೋಟಿ ಸಾಲವಿದೆ ಎಂದು ಅವರು ಘೋಷಿಸಿಕೊಂಡಿದ್ದಾರೆ. ಬಿಎಸ್ಸಿ ಪದವೀಧರರಾದ ಅವರು ಕೃಷಿಯ ಜತೆಗೆ ಕುಕ್ಕುಟ ಉದ್ಯಮ ನಡೆಸುತ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿ ಎಂ.ಪಿ.ಅನಿಲ್‌ಕುಮಾರ್‌ ಅವರು ₹ 65 ಲಕ್ಷ ಮತ್ತು ಅವರ ಪತ್ನಿಯು ₹ 25 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅವರಿಗೆ ಪಿತ್ರಾರ್ಜಿತವಾಗಿ ಬಂದಿರುವ ₹ 30 ಲಕ್ಷ ಬೆಲೆ ಬಾಳುವ ಮನೆಯಿದೆ. ದ್ವಿತೀಯ ಪಿಯುಸಿ ಓದಿರುವ ಎಂ.ಪಿ.ಅನಿಲ್‌ಕುಮಾರ್‌ ಗುತ್ತಿಗೆದಾರರೆಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು