ಬಂಗಾರಪೇಟೆ: ತಾಲ್ಲೂಕಿನ ಕೇತಗಾನಹಳ್ಳಿ ಪಂಚಾಯಿತಿ ಅಧ್ಯಕ್ಷೆ ಹಾಗೂ ಪಿಡಿಒ ಸೇರಿ ₹20 ಲಕ್ಷ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಪಂಚಾಯಿತಿಯ ಕೆಲ ಸದಸ್ಯರು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ದೂರು ಸಲ್ಲಿಸಿದ್ದಾರೆ.
ಅಹವಾಲು ಸ್ವೀಕರಿಸಿದ ಶಾಸಕರು, ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಪಂಚಾಯಿತಿ ಅಧ್ಯಕ್ಷೆ ಆಶಾಲತ ಮತ್ತು ಅಭಿವೃದ್ಧಿ ಅಧಿಕಾರಿ ಎಚ್.ಎಂ. ರವಿ ಅವರು 15ನೇ ಹಣಕಾಸು ಯೋಜನೆಯಡಿ ಒಂದೇ ವಾರದಲ್ಲಿ ಸುಮಾರು ₹20 ಲಕ್ಷ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹಣ ದುರ್ಬಳಕೆ ಬಗ್ಗೆ ಪಂಚಾಯಿತಿ ಸದಸ್ಯರೆಲ್ಲರೂ ಧ್ವನಿ ಎತ್ತಿದ್ದರೂ ಯಾರ ಮಾತಿಗೆ ಬೆಲೆ ಕೊಡುತ್ತಿಲ್ಲ. ಅಧ್ಯಕ್ಷೆ ತನಗಿಷ್ಟ ಬಂದಂತೆ ನಡೆದುಕೊಂಡಿದ್ದಾರೆ. ಪಿಡಿಒ ಅಧ್ಯಕ್ಷರ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ ಎಂದು ದೂರಿದ್ದಾರೆ.