ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸುರಕ್ಷತೆಗೆ ನಿಗಾ ವಹಿಸಿ: ಡಿ.ಸಿ

ಜಿಲ್ಲಾ ಕೇಂದ್ರದಲ್ಲಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ
Last Updated 3 ಫೆಬ್ರುವರಿ 2020, 13:29 IST
ಅಕ್ಷರ ಗಾತ್ರ

ಕೋಲಾರ: ‘ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮಕ್ಕಳ ಸುರಕ್ಷತೆ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಸಿದ್ಧತೆ ಸಂಬಂಧ ಇಲ್ಲಿ ಸೋಮವಾರ ನಡೆದ ಅನುಪಾಲನಾ ಸಭೆಯಲ್ಲಿ ಮಾತನಾಡಿ, ‘ಇಡೀ ಕಾರ್ಯಕ್ರಮದಲ್ಲಿ ಲೋಪವಾಗದಂತೆ ಹಬ್ಬದ ವಾತಾವರಣ ಮೂಡಿಸಿ. ರಾಜ್ಯಕ್ಕೆ ಜಿಲ್ಲೆ ಬಗ್ಗೆ ಒಳ್ಳೆಯ ಸಂದೇಶ ರವಾನಿಸಿ’ ಎಂದು ಹೇಳಿದರು.

‘ಜಿಲ್ಲಾ ಕೇಂದ್ರದ ಜೂನಿಯರ್ ಕಾಲೇಜಿನಲ್ಲಿ ಫೆ.5, 6 ಮತ್ತು 7ರಂದು ಸ್ಪರ್ಧೆ ನಡೆಯಲಿದೆ. ರಾಜ್ಯ ಮಟ್ಟದ ಕಾರ್ಯಕ್ರಮ ಜಿಲ್ಲೆಗೆ ಸಿಕ್ಕಿರುವುದು ಹೆಮ್ಮೆ. ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್‌ಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್, ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳನ್ನು ಬರಮಾಡಿಕೊಳ್ಳಲು ಅಧಿಕಾರಿಗಳನ್ನು ನೇಮಿಸಿ’ ಎಂದು ತಿಳಿಸಿದರು.

‘ಚುನಾವಣಾ ಕರ್ತವ್ಯದಂತೆಯೇ ಕಾರ್ಯಕ್ರಮದ ಯಶಸ್ಸಿಗೆ ಹೆಚ್ಚು ಶ್ರದ್ಧೆಯಿಂದ ಕೆಲಸ ಮಾಡಿ. ಕಾರ್ಯಕ್ರಮ ಮುಗಿದು ಮಕ್ಕಳು ಅವರವರ ಜಿಲ್ಲೆಗೆ ಹೋಗುವವರೆಗೂ ಯಾವುದೇ ಹಂತದಲ್ಲಿ ಲೋಪವಾಗಬಾರದು. ದಿನದ 24 ತಾಸೂ ಮಕ್ಕಳ ಹೊಣೆ ಅಧಿಕಾರಿಗಳದು’ ಎಂದು ತಾಕೀತು ಮಾಡಿದರು.

‘ದೂರದ ಜಿಲ್ಲೆಗಳ ಮಕ್ಕಳು ಫೆ.4ರ ಮಧ್ಯಾಹ್ನವೇ ಬರಲಿದ್ದು, ಅವರಿಗೆ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಹೆಸರು ನೋಂದಾಯಿಸಿಕೊಳ್ಳಿ. ಆರೋಗ್ಯ ಇಲಾಖೆಯು ವೈದ್ಯರು, ಶುಶ್ರೂಷಕಿಯರು ಇರುವ 3 ತಂಡ ರಚನೆ ಮಾಡಬೇಕು’ ಎಂದು ತಿಳಿಸಿದರು.

ಊಟ–ತಿಂಡಿ

‘ನಗರದ ಮೆಥೋಡಿಸ್ಟ್ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಊಟ, ತಿಂಡಿ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಅಲ್ಲಿಗೆ ತೆರಳಲು ಅನುಕೂಲವಾಗುವಂತೆ ರಸ್ತೆಯಲ್ಲಿ ಸೂಚನಾ ಫಲಕ ಹಾಕಿ. ಜತೆಗೆ ಜೂನಿಯರ್ ಕಾಲೇಜಿನಿಂದ ಮೆಥೋಡಿಸ್ಟ್‌ ಶಾಲೆವರೆಗೆ ರಸ್ತೆ ಬದಿಯಲ್ಲಿ ಬ್ಯಾರಿಕೇಡ್ ಹಾಕಬೇಕು’ ಎಂದು ಸೂಚಿಸಿದರು.

‘ಮಕ್ಕಳಿಗೆ ಊಟ ನೀಡುವ ಮುನ್ನ ಆಹಾರ ಸುರಕ್ಷತಾ ಅಧಿಕಾರಿಗಳು ಕಡ್ಡಾಯವಾಗಿ ಆಹಾರದ ಗುಣಮಟ್ಟ ದೃಢೀಕರಿಸಬೇಕು. ಮಕ್ಕಳ ವಸತಿ ಸ್ಥಳಗಳಿಂದ 34 ಬಸ್‌ ವ್ಯವಸ್ಥೆ ಮಾಡಿದ್ದು, ಮೆಥೋಡಿಸ್ಟ್ ಶಾಲೆ ಆವರಣದಲ್ಲೇ ಮಕ್ಕಳು ಬೆಳಿಗ್ಗೆ ತಿಂಡಿ ತಿಂದು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಮಧ್ಯಾಹ್ನ ಮತ್ತು ರಾತ್ರಿಯ ಊಟ ಅಲ್ಲಿಯೇ ಮಾಡಿ ಬಸ್‌ಗಳಲ್ಲಿ ವಾಸ್ತವ್ಯದ ಸ್ಥಳಕ್ಕೆ ತೆರಳಬೇಕು’ ಎಂದರು.

3 ಸಾವಿರ ಆಸನ

‘ಜೂನಿಯರ್ ಕಾಲೇಜು ಮೈದಾನದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸುತ್ತಿದ್ದು, 3 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ವೇದಿಕೆಯಲ್ಲಿ ಮುಂದಿನ ಸಾಲಿನಲ್ಲಿ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಆಸನ ಅಳವಡಿಸಬೇಕು. ಶೌಚಾಲಯ ಮತ್ತು ನೀರಿನ ಸೌಕರ್ಯ ಸಮರ್ಪಕವಾಗಿರಬೇಕು’ ಎಂದು ಹೇಳಿದರು.

‘ಕಾರ್ಯಕ್ರಮ ನಡೆಯುವ ಸ್ಥಳದ ಎಲ್ಲಾ ಕಡೆ ಸಿ.ಸಿ ಕ್ಯಾಮೆರಾ ಅಳವಡಿಸಿ. ಪ್ರತಿ ಮಗುವಿನ ಬಗ್ಗೆ ನಿಗಾ ವಹಿಸಿ. ಮಕ್ಕಳಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ಜಿಲ್ಲೆ ನೀಡಿದ ಆತಿಥ್ಯದ ಬಗ್ಗೆ ರಾಜ್ಯದ ಇತರೆ ಜಿಲ್ಲೆಗಳಿಗೆ ಉತ್ತಮ ಸಂದೇಶ ರವಾನೆಯಾಗಬೇಕು’ ಎಂದು ಕಿವಿಮಾತು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಪ್ರಭಾರ) ಕೃಷ್ಣಪ್ಪ, ನಗರಸಭೆ ಆಯುಕ್ತ ಶ್ರೀಕಾಂತ್, ಡಯಟ್ ಪ್ರಾಂಶುಪಾಲ ಕೆ.ಎಂ.ಜಯರಾಮರೆಡ್ಡಿ, ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT