ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ನೈತಿಕ– ಸಾಂಸ್ಕೃತಿಕ ದಿವಾಳಿತನ: ನಾಗಮೋಹನ್‌ದಾಸ್ ಕಳವಳ

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ
Last Updated 14 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಕೋಲಾರ: ‘ದೇಶದಲ್ಲಿ ನೈತಿಕ ಮೌಲ್ಯಗಳ ಅಧಃಪತನವಾಗುತ್ತಿದೆ. ಮೌಲ್ಯಗಳ ಮರು ಸ್ಥಾಪನೆಗೆ ಸಮುದಾಯ ಸಂಸ್ಥೆಗಳು ಸೈದ್ಧಾಂತಿಕ ಹೋರಾಟ ನಡೆಸಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಪ್ರತಿಪಾದಿಸಿದರು.

ಇಲ್ಲಿ ಶನಿವಾರ ಸಮುದಾಯ ಕರ್ನಾಟಕ ಸಂಘಟನೆಯ 7ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ದೇಶದಲ್ಲಿ ಆರ್ಥಿಕ ದಿವಾಳಿತನದ ಜತೆಗೆ ನೈತಿಕ ಮತ್ತು ಸಾಂಸ್ಕೃತಿಕ ದಿವಾಳಿತನ ತಾಂಡವಾಡುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ದೇಶದಲ್ಲಿ ಬಹುಮುಖಿ ಸಂಸ್ಕೃತಿ ಹಾಳಾಗುತ್ತಿದ್ದು, ಏಕಮುಖ ಸಂಸ್ಕೃತಿ ಬೆಳೆಸುವ ಷಡ್ಯಂತ್ರ ನಡೆದಿದೆ. ರಾಷ್ಟ್ರದ ಒಟ್ಟಾರೆ ಆರ್ಥಿಕ ಸಂಪತ್ತು ಕೇವಲ ಶೇ 10ರಷ್ಟು ಮಂದಿಯ ಕೈ ಸೇರುತ್ತಿದೆ. ಶೇ 90ರಷ್ಟು ಜನ ಕೇವಲ 10ರಷ್ಟು ಸಂಪತ್ತನ್ನು ಅನುಭವಿಸುತ್ತಿದ್ದಾರೆ. ದಿನೇದಿನೇ ಅಸಮಾನತೆ ಹೆಚ್ಚುತ್ತಿದ್ದು, ಇದನ್ನು ತೊಡೆದು ಹಾಕಲು ಸಮುದಾಯವು ಒಟ್ಟಾಗಿ ಹೋರಾಟ ಮಾಡಬೇಕು’ ಎಂದು ತಿಳಿಸಿದರು.

‘ರೈತರು, ಮಹಿಳೆಯರು, ಕಾರ್ಮಿಕರಲ್ಲಿ ಅತೃಪ್ತಿ ತಾಂಡವಾಡುತ್ತಿದೆ. ಈ ಅತೃಪ್ತಿ ವಿರುದ್ಧ ಆಕ್ರೋಶ ಉಂಟಾಗುತ್ತಿದೆ. ಅಸಮಾನತೆ, ಅತೃಪ್ತಿ ಇರುವವರೆಗೂ ಉದ್ಯೋಗ, ಅನ್ನಕ್ಕಾಗಿ ಹೋರಾಟ ನಡೆಯುತ್ತಲೇ ಇರುತ್ತದೆ. ಜತೆಗೆ ಹಿಂಸೆಯ ಕರಾಳತೆಯೂ ಇರುತ್ತದೆ’ ಎಂದು ವಿಷಾದಿಸಿದರು.

‘ದೇಶದಲ್ಲಿ ಕೃಷಿ ಬಿಕ್ಕಟ್ಟು ಹೆಚ್ಚುತ್ತಿದೆ. ಅವ್ಯವಸ್ಥೆಯಿಂದ ಕೃಷಿಕರು ನಿರಾತಂಕವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ನೀರಾವರಿ ಸಮಸ್ಯೆ ತೀವ್ರವಾಗಿದೆ. ಮತ್ತೊಂದೆಡೆ ಬೆಳೆದವನಿಗೆ ಬೆಲೆ ಇಲ್ಲದಂತಾಗಿದ್ದು, ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಆರ್ಥಿಕ ಬಿಕ್ಕಟ್ಟು ತೀವ್ರವಾಗಿದ್ದು, ದೇಶದ ಜಿಡಿಪಿ ಕುಸಿಯುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಅಸಮಾನತೆಯ ಭಾರತ: ‘ಆರ್ಥಿಕ ದಿವಾಳಿತನದಿಂದ ಕಾರ್ಖಾನೆಗಳಲ್ಲಿ ಸಮಸ್ಯೆಗಳು ಎದುರಾಗಿ ಅವುಗಳನ್ನು ಮುಚ್ಚಲಾಗುತ್ತಿದೆ.  ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ. ವಿದ್ಯಾರ್ಥಿ ಚಳವಳಿ ನಿಂತಿದೆ. ಅಸಮಾನತೆಯ ಭಾರತ ಕಟ್ಟುತ್ತಿರುವುದೇ ದೇಶದಲ್ಲಿ ಹಿಂಸೆ, ಕ್ರೌರ್ಯ, ಅತ್ಯಾಚಾರ ಹೆಚ್ಚಳಕ್ಕೆ ಪ್ರಮುಖ ಕಾರಣ’ ಎಂದು ಹೇಳಿದರು.

‘ಶ್ರೀಮಂತಿಕೆ ದೇಶದ ಎಲ್ಲರಿಗೂ ಸಮನಾಗಿ ಹಂಚಿಕೆಯಾಗಿಲ್ಲ. ನ್ಯಾಯಾಂಗ ವ್ಯವಸ್ಥೆ ಬಗೆಗಿನ ನಂಬಿಕೆ ಹಾಳು ಮಾಡುತ್ತಿದ್ದೇವೆ. ತೀರ್ಪುಗಳು ಅಸಂವಿಧಾನಿಕವಾಗುತ್ತಿವೆ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿವೆ. ಇಂತಹ ಸಂದರ್ಭದಲ್ಲಿ ಸೈದ್ಧಾಂತಿಕ ಸಂಘರ್ಷದಿಂದಲೇ ಬದಲಾವಣೆ ಸಾಧ್ಯ’ ಎಂದು ಸಲಹೆ ನೀಡಿದರು.

ಕುಂಭಕರ್ಣ ನಿದ್ದೆ: ‘ಆಹಾರ ಕೊರತೆಯಿಂದ ನರಳುತ್ತಿದ್ದ ದೇಶವನ್ನು ಆಹಾರ ಸ್ವಾವಲಂಬಿ ರಾಷ್ಟ್ರವಾಗಿ ಮಾಡಿದ ರೈತಾಪಿ ವರ್ಗ ಈಗ ಆರ್ಥಿಕವಾಗಿ ದಿವಾಳಿಯಾಗಿದೆ. ಯುವಕರು ನಗರ ಪಟ್ಟಣ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಭೀಕರ ಕೃಷಿ ಬಿಕ್ಕಟ್ಟು ಸೃಷ್ಟಿಯಾಗಿದ್ದರೂ ರೈತರು ಧ್ವನಿ ಎತ್ತುತ್ತಿಲ್ಲ. ರೈತರನ್ನು ಕುಂಭಕರ್ಣ ನಿದ್ದೆಯಿಂದ ಎಚ್ಚರಗೊಳಿಸಬೇಕು’ ಎಂದು ಕಿವಿಮಾತು ಹೇಳಿದರು.

‘ನಾನು 4 ದಶಕದಿಂದ ಸಮುದಾಯದ ಸಂಘಟನೆಯ ಒಡನಾಟದಲ್ಲಿದ್ದೇನೆ. ಸಂಘಟನೆಯು ಸಂವಿಧಾನ ಓದು ಅಭಿಯಾನವನ್ನು ರಾಜ್ಯದಲ್ಲೆಡೆ ಯಶಸ್ವಿಯಾಗಿ ನಡೆಸಿದೆ. ಸಮುದಾಯದ 7ನೇ ಸಮ್ಮೇಳನದಲ್ಲಿ ಭವಿಷ್ಯದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಆರೋಗ್ಯಕರ ಚರ್ಚೆ ನಡೆಯಬೇಕು. ಚಾರಿತ್ರಿಕ ಸತ್ಯಗಳ ವಿರುದ್ಧ ದೇಶ ಆಳುವವರು ಬಹಳ ಕಾಲ ಉಳಿಯುವುದಿಲ್ಲ. ಜನ ಆಶಾವಾದಿಗಳಾಗಬೇಕು. ಸತ್ಯಕ್ಕೆ ಜಯ ಖಂಡಿತ’ ಎಂದರು.

ಒಗ್ಗೂಡಬೇಕು: ‘ಬಡವರ ಬದುಕಿಗಾಗಿ, ಬದಲಾವಣೆಗಾಗಿ ಕಲೆ ಬಳಸಿಕೊಂಡ ಸಮುದಾಯ ಸಂಘಟನೆಯ ಬಗ್ಗೆ ಗೌರವವಿದೆ. ಸ್ವಯಂ ವಿಮರ್ಶೆಯಿಂದ ಬದಲಾವಣೆ ಆರಂಭವಾಗಲಿ. ಸಾಮಾಜಿಕ ಕ್ರಾಂತಿಗಿಂತಲೂ ಮಾನಸಿಕ ಕ್ರಾಂತಿ ಮುಖ್ಯ. ದೇಶ ಅಪಾಯಕಾರಿ ಸ್ಥಿತಿಯಲ್ಲಿರುವಾಗ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಸಿದ್ಧಾಂತ ಮುಂದುವರಿಸಬೇಕು. ಪ್ರಗತಿ ಶಕ್ತಿಗಳೆಲ್ಲವೂ ಸೈದ್ಧಾಂತಿಕ ಸ್ಪಷ್ಟತೆಯಿಂದ ಒಗ್ಗೂಡಬೇಕು’ ಎಂದು ಚಿತ್ರ ನಟ ಚೇತನ್ ಸಲಹೆ ನೀಡಿದರು.

‘ಸಂಘಟನೆ ಆರಂಭವಾದ ತುರ್ತು ಪರಿಸ್ಥಿತಿ ಕಾಲಕ್ಕಿಂತಲೂ ಈಗಿನ ಕಾಲಘಟ್ಟ ವಿಭಿನ್ನವಾಗಿದೆ. ಮುಂದಿನ ದಾರಿಯ ಬಗ್ಗೆ ಸಂಘಟನೆಗೆ ಸಮ್ಮೇಳನದ ಚರ್ಚೆಗಳು ದಾರಿದೀಪವಾಗಲಿ’ ಎಂದು ಸಮುದಾಯ ಕರ್ನಾಟಕ ಅಧ್ಯಕ್ಷ ಅಚ್ಯುತ ಹೇಳಿದರು.

‘ಸಾಂಸ್ಕೃತಿಕ ಪರಿಭಾಷೆ ಮೂಲಕ ಪ್ರತಿರೋಧದ ನೆಲೆಗಳನ್ನು ಅರ್ಥಪೂರ್ಣಗೊಳಿಸುವುದೇ ಸಂಘಟನೆಯ ಮೂಲ ಆಶಯ’ ಎಂದು ಸಮುದಾಯ ಕರ್ನಾಟಕ ಸಂಘಟನೆ ಕಾರ್ಯದರ್ಶಿ ವಿಠ್ಠಲ್ ಭಂಡಾರಿ ತಿಳಿಸಿದರು.

ದೇವರಾಜ್ ನಿಸರ್ಗತನಯ ಅವರ ‘ಕಣ್ಣಂಚಿನ ಬೆಳಕು’ ಕವನ ಸಂಕಲನವನ್ನು ಸಾಹಿತಿ ಸತ್ಯಮಂಗಲ ಮಹದೇವ ಬಿಡುಗಡೆ ಮಾಡಿದರು. ಸಾಹಿತಿಗಳಾದ ಕೆ.ಷರೀಫಾ, ಲಕ್ಷ್ಮೀಪತಿ ಕೋಲಾರ, ಚಂದ್ರಶೇಖರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT