ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಅಧಿಕ ಲಾಭ ತಂದ ಬಾಂಗ್ಲಾ ಸೇಬು, ರೈತನ ಸಾಧನೆಗೆ ಶ್ಲಾಘನೆ

Last Updated 14 ಸೆಪ್ಟೆಂಬರ್ 2022, 5:31 IST
ಅಕ್ಷರ ಗಾತ್ರ

ನಂಗಲಿ: ತೀವ್ರ ಮಳೆಗಾಲದಲ್ಲಿ ಎಲ್ಲ ಬೆಳೆ ಮಳೆಗೆ ಆಹುತಿಯಾಗಿ ರೈತರು ಸಂಕಷ್ಟ ಅನುಭವಿಸುತ್ತಿದ್ದರೆ ಬಾಂಗ್ಲಾ ಸೇಬು ಬೆಳೆದ ರೈತ ವೆಂಕಟರಾಜು ಅಧಿಕ ಲಾಭ ಗಳಿಸುತ್ತಿದ್ದಾರೆ.

ಹೆಬ್ಬಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಗವಾದಿ ವೆಂಕಟರಾಜು ತಮ್ಮ ಏಳು ಎಕರೆ ಭೂಮಿಯಲ್ಲಿ ಬಾಂಗ್ಲಾದೇಶದ ಸೇಬು ಬೆಳೆದು ಅಧಿಕ ಲಾಭ ಗಳಿಸುವುದರ ಜತೆಗೆ ಇತರ ರೈತರಿಗೆ ಮಾದರಿಯಾಗುವುದರ ಜತೆಗೆ ರೈತರಿಗೆ ನೂತನ ಬೆಳೆ ಪರಿಚಯಿಸಿ ಮಾದರಿ ಎನಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶದಿಂದ ಸಸಿಯೊಂದಕ್ಕೆ ₹120 ನೀಡಿ ತಮ್ಮ ಏಳು ಎಕರೆ ಭೂಮಿಯಲ್ಲಿ 12,000 ಗಿಡ ನಾಟಿ ಮಾಡಿ ಕೇವಲ ಒಂದು ವರ್ಷದಲ್ಲಿ ₹5-6 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾರೆ. ಒಂದೇ ರೀತಿಯ ಬೆಳೆ ಮಾಡಿ ಮಾಡಿ ಬಸವಳಿಯಿತ್ತಿರುವ ರೈತರಿಗೆ ನೂತನ ಬೆಳೆ ಪರಿಚಯಿಸಿ ತಾನೂ ಸಂಪಾದನೆ ಮಾಡುತ್ತಾ ಇತರ ರೈತರಿಗೂ ಸಂಪಾದನೆ ಮತ್ತು ಹೊಸ ತಳಿ ಬೆಳೆ ಪರಿಚಯಿಸಿ ಮಾದರಿ ರೈತರಾಗಿ ಹೊರ ಹೊಮ್ಮಿದ್ದಾರೆ.

ಅತ್ಯಲ್ಪ ಖರ್ಚು ಮತ್ತು ಕಡಿಮೆ ಅವಧಿಯಲ್ಲಿ ಫಸಲು ಬರುವುದರಿಂದ ರೈತ ವೆಂಕಟರಾಜು ಆಸಕ್ತಿ ತೋರಿ ಬಾಂಗ್ಲಾದೇಶದ ಸೇಬು ಬೆಳೆದಿರುವುದರಿಂದ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ನಾಟಿ ಮಾಡಿರುವ ಬಾಂಗ್ಲಾ ಸೇಬು ನೋಡಲು ಜನ ಮತ್ತು ರೈತರು ತಂಡೋಪತಂಡವಾಗಿ ರುಚಿ ನೋಡಿ ಹೋಗುತ್ತಿದ್ದಾರೆ. ಇದರಿಂದ ರೈತರ ಕುತೂಹಲಕಾರಿ ಮತ್ತು ನೂತನ ಬೆಳೆನೋಡಲು ಪ್ರತಿನಿತ್ಯ ತೋಟದ ಬಳಿ ಬಂದು ಹೋಗುತ್ತಿದ್ದಾರೆ.

ಇನ್ನು ಮಾರುಕಟ್ಟೆಯಲ್ಲಿ ಎಲ್ಲ ಋತುಮಾನಗಳಲ್ಲಿ ಒಂದು ಕೆ.ಜಿ ಬಾಂಗ್ಲಾ ಸೇಬು ಸುಮಾರು ₹50-60 ಮಾರಾಟ ಆಗುತ್ತಿದ್ದು, ಚೆನ್ನೈ, ಕೊಲ್ಕತ್ತಾ, ಬಾಂಗ್ಲಾದೇಶ ಮುಂತಾದ ಕಡೆಗಳಲ್ಲಿ ಇದಕ್ಕೆ ಹೆಚ್ಚು ಬೇಡಿಕೆ ಇರುವುದರಿಂದ ಯಾವುದೇ ಕಾರಣಕ್ಕೂ ಬಾಂಗ್ಲಾ ಸೇಬು ಬೆಳೆದ ರೈತ ನಷ್ಟ ಅನುಭವಿಸುವುದಿಲ್ಲ ಎಂಬುವುದು ವೆಂಕಟರಾಜು ಅನುಭವ. ಇದರಿಂದ ಈಗಾಗಲೇ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಬಾಂಗ್ಲಾ ಸೇಬು ಬೆಳೆಯಲು ರೈತರು ಮುಂದಾಗಿದ್ದಾರೆ.

ಇನ್ನು ಕಡಿಮೆ ಖರ್ಚಿನಲ್ಲಿ ಮತ್ತು ಬಹುತೇಕ ಯಾವುದೇ ರೋಗ ರುಜುನಗಳಿಗೆ ತುತ್ತಾಗದ ಬಾಂಗ್ಲಾ ಸೇಬು ರೈತರಿಗೆ ಅಧಿಕ ಲಾಭ ನೀಡಿ, ವರ್ಷದ ಎಲ್ಲ ಋತುಮಾನಗಳಲ್ಲಿ ಫಸಲು ಬೆಳೆಯಬಹುದು. ಚೆನ್ನೈ, ಹೈದರಾಬಾದ್, ಕೊಲ್ಕತ್ತಾ ವಿಶಾಖಪಟಂ ಮುಂತಾದ ಕಡೆ ಬಾಂಗ್ಲಾ ಸೇಬು ಬೆಳೆಗೆ ಉತ್ತಮ ಬೇಡಿಕೆ ಇದೆ.

ಇತರ ರೈತರಿಗೂ ಅನುಕೂಲ
ಸಾಮಾನ್ಯವಾಗಿ ಟೊಮೆಟೊ, ಆಲೂಗಡ್ಡೆ, ಕೋಸು ಮುಂತಾದ ಬೆಳೆ ಮಾಡುತ್ತಾ ಮಾಡಿದ ಬೆಳೆಗೆ ಸರಿಯಾಗಿ ಬೆಲೆ ಸಿಗದೆ ಇರುವುದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬಾಂಗ್ಲಾ ಸೇಬು ಬೆಳೆದು ಅಧಿಕ ಲಾಭ ಗಳಿಸುತ್ತಿದ್ದೇನೆ. ಇದನ್ನು ನೋಡಿ ಇತರ ರೈತರೂ ಕೂಡ ಬಾಂಗ್ಲಾದೇಶ ಸೇಬು ಬೆಳೆಯಲು ಮುಂದಾಗಿ ಲಾಭ ಗಳಿಸಲು ಯತ್ನಿಸುತ್ತಿರುವುದು ಖುಷಿಯ ವಿಚಾರ.
-ವೆಂಕಟರಾಜು, ಬಾಂಗ್ಲಾ ಸೇಬು ಬೆಳೆದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT