ಮುಳಬಾಗಿಲು: ಕೃಷಿಯನ್ನು ನೆಚ್ಚಿಕೊಂಡಿರುವವರು ತಾವು ನಷ್ಟ ಅನುಭವಿಸುತ್ತಿದ್ದೇವೆ ಎಂದು ಹೇಳುವುದು ಸಾಮಾನ್ಯ. ಆದರೆ, ತಿಮ್ಮನಾಯಕನಹಳ್ಳಿ ರೈತ ರಾಮಚಂದ್ರಪ್ಪ ಅವರು ಕೃಷಿಯನ್ನು ವೃತ್ತಿಯಾಗಿಸಿಕೊಂಡಿದ್ದು, ವ್ಯಾಪಾರವನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ. ಇದರಿಂದ ಯಶಸ್ವಿಯ ಶಿಖರ ಏರುತ್ತಿರುವ ಅವರು ಯುವ ರೈತರಿಗೆ ಮಾರ್ಗದರ್ಶಕರಾಗಿದ್ದಾರೆ.
ರಾಮಚಂದ್ರಪ್ಪ ಅವರು ತಮ್ಮ 15 ಎಕರೆ ಜಮೀನಿನಲ್ಲಿ ಕಾಲಕ್ಕೆ ತಕ್ಕಂಥ ಅತ್ಯಾಧುನಿಕ ಕೃಷಿ ಚಟುವಟಿಕೆಗಳನ್ನು ಅನುಸರಿಸಿಕೊಂಡು, ಏಕಕಾಲದಲ್ಲಿ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇದರಿಂದ ಒಂದು ಬೆಳೆಯಿಂದ ನಷ್ಟ ಉಂಟಾದರೆ ಮತ್ತೊಂದು ಬೆಳೆಯ ಮೂಲಕ ಲಾಭ ಗಳಿಸುತ್ತಿದ್ದಾರೆ.
ಪ್ರಾರಂಭದಲ್ಲಿ ಆಲೂಗಡ್ಡೆ, ಕೋಸು, ಟೊಮೆಟೊ ಹಾಗೂ ಮಾವಿನ ಬೆಳೆಗಳಿಗೆ ಮಾತ್ರ ಸೀಮಿತವಾಗಿದ್ದ ರಾಮಚಂದ್ರಪ್ಪ ಇದೀಗ ಋತುಮಾನಗಳಿಗೆ ತಕ್ಕಂತೆ ಸೇವಂತಿಗೆ, ಚೆಂಡು ಹೂವುಗಳನ್ನು ಬೆಳೆಯುತ್ತಿದ್ದಾರೆ. ಮೊದಲಿಗೆ ವಿಶಾಲವಾದ ಜಮೀನಿನಲ್ಲಿ ಸಾವಿರಾರು ಮಾವಿನ ಮರಗಳನ್ನು ನಾಟಿ ಮಾಡಿದ್ದ ಅವರು ವಾರ್ಷಿಕವಾಗಿ ಬರುವ ಫಸಲು ಮಾಡಿ ವರ್ಷಕ್ಕೊಮ್ಮೆ ಲಾಭ ಪಡೆಯುತ್ತಿದ್ದರು. ನಂತರ ಮಾವಿನ ಮರಗಳ ಮಧ್ಯೆ ಮಿಶ್ರ ಬೇಸಾಯ ಪದ್ಧತಿ ಆಧಾರದಲ್ಲಿ ನಾನಾ ಬಗೆಯ ಬೆಳೆಗಳನ್ನು ಹಾಕಿದರು. ಈ ಮೂಲಕ ಅವರು ಪೂರ್ಣಾವಧಿ ರೈತರಾಗಿ ಪರಿವರ್ತನೆಯಾಗಿದ್ದಾರೆ.
ಮಾವಿನ ವ್ಯಾಪಾರಿ: ತಮ್ಮ ಹೊಲದಲ್ಲಿನ ಮಾವಿನ ಹಣ್ಣುಗಳನ್ನು ಅವರಿವರಿಗೆ ಮಾರುತ್ತಿದ್ದ ರಾಮಚಂದ್ರಪ್ಪ ಅವರು, ಮಾವಿನ ಫಸಲನ್ನು ತಾವೇ ಖುದ್ದಾಗಿ ಮಾರುಕಟ್ಟೆಗೆ ತಂದು ಮಾರುತ್ತಿದ್ದರು. ನಂತರ ವರ್ಷಗಳು ಕಳೆಯುತ್ತಿದ್ದಂತೆ ಇತರರ ಮಾವಿನ ತೋಟಗಳಲ್ಲಿರುವ ಮಾವಿನಹಣ್ಣುಗಳನ್ನು ತಾವೇ ಖರೀದಿಸಿ, ಅವುಗಳನ್ನು ತಾವೇ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದರು. ಈ ಮೂಲಕ ಅವರು ಮಾವಿನ ವ್ಯಾಪಾರಿಗೆ ಹೊರಹೊಮ್ಮಿದ್ದಾರೆ.
ಇದೀಗ ತಾಲ್ಲೂಕಿನ ಸುನುಕುಂಟೆ ಎಂ ಗೊಲ್ಲಹಳ್ಳಿ ಬಳಿ ಹೊಸದಾಗಿ ಖರೀದಿಸಿದ ಜಮೀನಿನಲ್ಲಿ ಮಾವಿನ ಸಸಿಗಳನ್ನು ನಾಟಿ ಮಾಡಿದ್ದು, ಸಸಿಗಳ ಮಧ್ಯೆ ನಾಟಿ ಮಾಡಿದ ಟೊಮೆಟೊ, ಸೇವಂತಿಗೆ ಹಾಗೂ ಚೆಂಡು ಹೂವುಗಳು ಸಮೃದ್ಧವಾಗಿ ಬೆಳೆದಿವೆ. ಸೊಂಪಾಗಿ ಬೆಳೆದ ಬೆಳೆಗಳು ಕೃಷಿಕರು ಮತ್ತು ಸಾಮಾನ್ಯ ಜನರನ್ನು ಆಕರ್ಷಿಸುತ್ತಿವೆ.
‘ಎರಡು ಎಕರೆ ಪ್ರದೇಶದಲ್ಲಿ ಬೆಳೆಸಿರುವ ಸೇವಂತಿಗೆ ಸಸಿಗಳು ನಾಲ್ಕು ಅಡಿಗಳಷ್ಟು ಎತ್ತರಕ್ಕೆ ಬೆಳೆದಿದ್ದು ರೆಂಬೆ, ಕೊಂಬೆಗಳಲ್ಲಿ ಯಥೇಚ್ಛವಾಗಿ ಹೂವು ಬಿಟ್ಟಿವೆ. ಹಬ್ಬಗಳ ಋತುವಿನಲ್ಲಿ ಹೂವುಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಇದನ್ನು ಅರಿತು ಬೆಳೆಸಿರುವ ಸೇವಂತಿಗೆ ಸದ್ಯಕ್ಕೆ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ ₹50–₹60 ಬೆಲೆಯಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದರ ಹೆಚ್ಚಳವಾಗಿ, ಸುಮಾರು ₹7–₹8 ಲಕ್ಷ ಲಾಭ ಬರಬಹುದು’ ಎನ್ನುತ್ತಾರೆ ರೈತ ರಾಮಚಂದ್ರಪ್ಪ.
‘ಈಚೆಗೆ ಟೊಮೆಟೊ ಬೆಳೆಸಿದ್ದ ಎರಡು ಎಕರೆ ಭೂಮಿಯಲ್ಲಿಯೇ ಚೆಂಡು ಹೂವಿನ ಸಸಿ ಬೆಳೆಸಲಾಗಿದೆ. ಟೊಮೆಟೊ ಬೆಳೆಗಾಗಿ ನೆಲಕ್ಕೆ ಹಾಕಿದ್ದ ಪ್ಲಾಸ್ಟಿಕ್ ಪೇಪರ್ ಹಾಗೂ ಕಡ್ಡಿಗಳಿದ್ದು, ಅದರಲ್ಲಿಯೇ ಚೆಂಡು ಹೂವು ಬೆಳೆಸಿದ್ದರಿಂದಾಗಿ ಖರ್ಚು ಕಡಿಮೆಯಾಗಿದೆ. 10 ಸಾವಿರ ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡಲಾಗಿತ್ತು’ ಎಂದು ರಾಮಚಂದ್ರಪ್ಪ ಸಹೋದರ ಮಂಜುನಾಥ ಸ್ವಾಮಿ ಹೇಳಿದರು.
ರೈತರು ಕೇವಲ ಕೃಷಿ ಚಟುವಟಿಕೆಗಳಲ್ಲಿಯೇ ಮುಂದುವರಿಯಲು ಇಚ್ಛಿಸುತ್ತಾರೆ. ಆದರೆ ಕೃಷಿ ಜೊತೆಗೆ ತೋಟಗಾರಿಕಾ ವ್ಯಾಪಾರಿಗಳಾಗಿಯೂ ಬದಲಾದರೆ ಮಾರುಕಟ್ಟೆಯ ಆಳ–ಅಗಲ ತಿಳಿದು ಕೃಷಿ ಹಾಗೂ ವ್ಯಾಪಾರ ಎರಡರಲ್ಲೂ ಹೆಚ್ಚು ಲಾಭ ಪಡೆಯಬಹುದು.ರಾಮಚಂದ್ರಪ್ಪ, ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.