ಶುಕ್ರವಾರ, ಆಗಸ್ಟ್ 12, 2022
27 °C
ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಒತ್ತಾಯ

ಸಂಸದೆ ಸುಮಲತಾ ಕ್ಷಮೆ ಯಾಚಿಸಲಿ: ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅವಮಾನಕರ ಪದ ಬಳಸಿರುವ ಸಂಸದೆ ಸುಮಲತಾ ಅವರು ಬಹಿರಂಗ ಕ್ಷಮೆ ಯಾಚಿಸಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಗೋವಿಂದರಾಜು ಒತ್ತಾಯಿಸಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಅಂಬರೀಷ್‌ರ ಅಂತ್ಯ ಸಂಸ್ಕಾರವನ್ನು ಗೌರವಯುತವಾಗಿ ನಡೆಸಿಕೊಟ್ಟಿದ್ದಾರೆ. ಆದರೆ, ಸುಮಲತಾ ಅವರಿಗೆ ಕೃತಜ್ಞತೆಯಿಲ್ಲ’ ಎಂದು ಕಿಡಿಕಾರಿದರು.

‘ದೇಶದಲ್ಲಿ ಕಿತ್ತು ತಿನ್ನುವ ಸಮಸ್ಯೆಗಳು ಸಾಕಷ್ಟಿವೆ. ಬಿಜೆಪಿ ಸರ್ಕಾರದಲ್ಲೂ ಸಮಸ್ಯೆಗಳಿವೆ. ಆ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ. ಅಂಬರೀಷ್‌ ಅವರ ಹೆಸರಿನಲ್ಲಿ ಈಗ ಚರ್ಚೆ ಅನಗತ್ಯ. ಕೆಆರ್‌ಎಸ್ ಜಲಾಶಯ ಬಿರುಕು ಬಿಟ್ಟಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಬಿರುಕು ಬಿಟ್ಟರೆ ಯಾವುದೇ ಅಣೆಕಟ್ಟು ಉಳಿಯುವುದಿಲ್ಲ. ಹೀಗಾಗಿ ಕೆಆರ್‌ಎಸ್ ಹೆಸರಿನಲ್ಲಿ ರಾಜಕಾರಣ ಬೇಡ’ ಎಂದು ತಿಳಿಸಿದರು.

‘ಸುಮಲತಾ ಅವರು ಕೆಆರ್‌ಎಸ್‌ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಂಡು ಮಂಡ್ಯದ ಜತೆಗೆ ಇಡೀ ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸುತ್ತಿರುವುದು ಸರಿಯಲ್ಲ. ಲಕ್ಷಾಂತರ ರೈತರು ಕೆಆರ್‌ಎಸ್‌ ನೀರು ನಂಬಿ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ, ಅಧಿಕಾರಿಗಳು ಕೆಆರ್‌ಎಸ್ ವಿಚಾರದಲ್ಲಿ ಸ್ಪಷ್ಟನೆ ಕೊಟ್ಟಿದ್ದರೂ ಸುಮಲತಾ ವಿನಾಕಾರಣ ಸುಳ್ಳು ಹೇಳುತ್ತಾ ಜನರ ದಾರಿ ತಪ್ಪಿಸುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಹೇಗೆ ಗೆಲುವು ಸಾಧಿಸಿದರು ಎಂಬುದು ಇಡೀ ರಾಜ್ಯಕ್ಕೆ ಗೊತ್ತು. ಬಿಜೆಪಿ ಮತ್ತು ಕಾಂಗ್ರೆಸ್‌ನ ಅಪವಿತ್ರ ಮೈತ್ರಿಯಿಂದ ಸುಮಲತಾ ಗೆದ್ದರು. ಮಂಡ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ ಎಂಬ ಕಾರಣಕ್ಕೆ ಸುಮಲತಾ ಅವರು ಕೆಆರ್‌ಎಸ್ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು.

ಕಡಿವಾಣ ಹಾಕಲಿ: ‘ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಕ್ರಮ ಗಣಿಗಾರಿಕೆ ಇದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವೂ ಅಕ್ರಮವೇ. ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಸರ್ಕಾರ, ಅಧಿಕಾರಿಗಳು ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ಅದಕ್ಕೆ ಯಾರೂ ಅಡ್ಡಿಪಡಿಸುವುದಿಲ್ಲ. ಆದರೆ, ಸುಮಲತಾ ಅವರು ರಾಜಕೀಯ ದುರುದ್ದೇಶಕ್ಕೆ ಮತ್ತು ಪ್ರಚಾರಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಸಂಸದೆಯಾಗಿ ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ಮಾಡುವುದು ಸುಮಲತಾ ಅವರ ಕೆಲಸವಾ? 18 ಲಕ್ಷ ಮತದಾರರಿಂದ ಆಯ್ಕೆಯಾದ ಸಂಸದರ ಕೈ ಕೆಳಗೆ ಸಾಕಷ್ಟು ಅಧಿಕಾರಿಗಳಿರುತ್ತಾರೆ. ಆ ಅಧಿಕಾರಿಗಳೇ ಏಕೆ ಕ್ರಮ ಕೈಕೊಳ್ಳಬಾರದು. ಅದಕ್ಕೆ ಯಾರೂ ವಿರೋಧ ಮಾಡುವುದಿಲ್ಲ’ ಎಂದು ಹೇಳಿದರು.

‘ಕುಮಾರಸ್ವಾಮಿ ವಿರುದ್ಧ ಮಾತನಾಡಲು ರಾಕ್‌ಲೈನ್‌ ವೆಂಕಟೇಶ್ ಯಾರು? ರಾಕ್‌ಲೈನ್‌ ವೆಂಕಟೇಶ್‌ಗೆ ನೈತಿಕತೆಯಿಲ್ಲ. ಸಿನಿಮಾ ರಂಗದ ಅವರು ಕುಮಾರಸ್ವಾಮಿ ಬಗ್ಗೆ ಹಗುರವಾಗಿ ಮಾತನಾಡಬಾರದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು