ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲೆ ಕಳೆದುಕೊಂಡ ನಂಗಲಿ ಸಂತೆ- ಸರ್ಕಾರಿ ಜಮೀನು ಒತ್ತುವರಿ ಆರೋಪ

Last Updated 16 ಜುಲೈ 2021, 3:55 IST
ಅಕ್ಷರ ಗಾತ್ರ

ನಂಗಲಿ: ಪ್ರತಿ ಶನಿವಾರ ನಡೆಯುವ ಇಲ್ಲಿನ ವಾರದ ಸಂತೆಗೆ ಸ್ವಂತ ಸ್ಥಳ ಇಲ್ಲದೆ ಇರುವುದರಿಂದ ಸಂತೆಗೆ ನೆಲೆಯೇ ಇಲ್ಲದಂತಾಗಿದ್ದು, ಬಜಾರು ರಸ್ತೆಗೆ ಬಂದಿದೆ.

ಸುಮಾರು 100 ವರ್ಷಗಳ ಇತಿಹಾಸ ಹೊಂದಿರುವ ಈ ಸಂತೆಗೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಚರ್ಚ್ ಮುಂಭಾಗದ ಸರ್ವೆ ನಂಬರ್ 383ರಲ್ಲಿ ಒಂದು ಎಕರೆ ನಿಗದಿಪಡಿಸಲಾಗಿತ್ತು.

ಹೆದ್ದಾರಿ ನಿರ್ಮಾಣ ಸಂದರ್ಭದಲ್ಲಿ 8 ಗುಂಟೆ ಹೋಗಿ 32 ಗುಂಟೆಗಳಲ್ಲಿ ಸಂತೆ ಸೇರುತಿತ್ತು. ಕಾಲ ಕಳೆಯುತ್ತಿದ್ದಂತೆ ಚರ್ಚ್ ಜಾಗದಲ್ಲಿ ಈ ಸ್ಥಳವನ್ನು ಸುತ್ತಮುತ್ತಲಿನ ಜನ ಒತ್ತುವರಿ ಮಾಡಿಕೊಂಡಿದ್ದರಿಂದ ಜಾಗವೇ ಮಾಯವಾಯಿತು. ಈಗ ಸಂತೆಯನ್ನು ವಿನಾಯಕ ಬೀದಿಯಲ್ಲಿ ನಡೆಸುವಂತಾಗಿದೆ.

ಪ್ರತಿ ಶನಿವಾರ ನಡೆಯುವ ಸಂತೆಯಲ್ಲಿ ಸುತ್ತಮುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳ ಜನರು ಒಂದು ವಾರಕ್ಕೆ ಆಗುವಷ್ಟು ತರಕಾರಿ ಮತ್ತು ದಿನಸಿ ತೆಗೆದುಕೊಂಡು ಹೋಗುತ್ತಿದ್ದರು. ಜೊತೆಗೆ ಬಡವರ್ಗದ ಜನರು ಮನೆಮಂದಿಗೆಲ್ಲಾ ಬಟ್ಟೆ ಹಾಗೂ ಕೃಷಿ ಸಲಕರಣೆ ಕೊಂಡುಕೊಂಡು ಹೋಗುತ್ತಿದ್ದರು. ಹಾಗಾಗಿ ತಾಲ್ಲೂಕಿನಲ್ಲಿಯೇ ಅತಿದೊಡ್ಡ ಸಂತೆ ಎಂಬ ಖ್ಯಾತಿಗೆ
ಪಾತ್ರವಾಗಿತ್ತು.

ವರ್ಷಗಳು ಉರುಳಿದಂತೆ ಈ ಸ್ಥಳವನ್ನು ಸುತ್ತಮುತ್ತಲಿನ ಜನರು ಅತಿಕ್ರಮಿಸಿಕೊಂಡು ಮನೆಗಳು ಹಾಗೂ ಅಂಗಡಿಗಳನ್ನು ನಿರ್ಮಿಸಿಕೊಂಡರು. ಸದ್ಯಕ್ಕೆ ಸಂತೆ ಜಾಗದಲ್ಲಿ ಹೋಟೆಲ್‌ಗಳು, ಅಂಗಡಿಗಳು ಹಾಗೂ ಮನೆಗಳು ನಿರ್ಮಾಣವಾಗಿವೆ. ಇಲ್ಲೊಂದು ಸಂತೆ ನಡೆಯುತ್ತಿತ್ತು ಎಂಬುವುದಕ್ಕೆಯಾವ ಪುರಾವೆಯೂ ಇಲ್ಲದಂತಾಗಿದೆ.

ನಂಗಲಿಯಲ್ಲಿ ಜಮೀನಿನ ಮೌಲ್ಯ ಹಾಗೂ ನಿವೇಶನಗಳ ಮೌಲ್ಯ ಗಗನಕ್ಕೇರಿದೆ. ಇದೇ ಸಂತೆ ನಡೆಯುತ್ತಿದ್ದ ಜಾಗದ ಅತಿಕ್ರಮಣಕ್ಕೆ ಕಾರಣ. ಸ್ವಂತ ನೆಲೆ ಇಲ್ಲದೆ ಇರುವುದರಿಂದ ವಿನಾಯಕ ದೇವಾಲಯದ ಬೀದಿಯಲ್ಲಿ ಸಂತೆ ಸೇರುತ್ತಿದೆ. ಆದರೆ ನಾನಾ ವ್ಯವಹಾರಗಳಿಗಾಗಿ ಜನರು, ವಾಹನಗಳು ಬಂದು ಹೋಗುವುದು ಹೆಚ್ಚಾಗುತ್ತಿದೆ. ಇದರಿಂದ ಸಂತೆ ಸೇರುವ ಬೀದಿಯಲ್ಲಿ ಪ್ರತಿ ಶನಿವಾರ ಜನರ ಓಡಾಟಕ್ಕೆ ಅವಕಾಶ ಇರುವುದಿಲ್ಲ. ಇದರಿಂದ ಪ್ರತಿನಿತ್ಯ ಓಡಾಡುವ ಜನರು ಬೇರೆ ಬೀದಿಗಳಲ್ಲಿ ಹೋಗಿ ಬರುವಂತಾಗಿದೆ ಎಂದು ಸ್ಥಳೀಯರು ದೂರುತ್ತಾರೆ.

ವಿನಾಯಕ ದೇವಾಲಯದ ಬೀದಿ, ರಾಷ್ಟ್ರೀಯ ಹೆದ್ದಾರಿ ಪಕ್ಕ, ಹೆದ್ದಾರಿಯ ಸರ್ವೀಸ್ ರಸ್ತೆ, ಮಲ್ಲೆಕುಪ್ಪ ರಸ್ತೆ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಹಾಗೂ ಪೊಲೀಸ್ ಠಾಣೆಯ ಪಕ್ಕದ ಬೀದಿಯಲ್ಲಿ ಅಂಗಡಿಗಳು ಸೇರುವುದರಿಂದ ಜನದಟ್ಟಣೆ ಹೆಚ್ಚಾಗಿ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿಯಾಗುತ್ತಿದೆ. ಆದ್ದರಿಂದ ನಂಗಲಿ ಸಂತೆ ಸಂಚಾರಿ
ಸಂತೆಯಾಗಿದೆ.

‘ಕೂಡಲೇ ಹಳೆಯ ಮೈದಾನವನ್ನು ಸಂತೆಗೆ ಮರಳಿ ಮೀಸಲಿಟ್ಟರೆ ಮತ್ತೆ ಹಳೆಯ ವೈಭವದ ದಿನಗಳು ಬರಲಿವೆ’ ಎನ್ನುತ್ತಾರೆ ಅಂಗಡಿ ಮಾಲೀಕ ರಾಮಣ್ಣ.

‘ಹಳೆಯ ಸಂತೆ ಜಾಗದ ಒತ್ತುವರಿಯಾಗಿದೆ. ಪಂಚಾಯಿತಿಯಿಂದ ಈ ಜಾಗವನ್ನು ಮರಳಿ ವಶಕ್ಕೆ ಪಡೆಯಲು ಹೋದಾಗ ಅಲ್ಲಿನ ಜನರು ಅಂಗಡಿ, ಮನೆಗಳನ್ನು ತೆರವು ಮಾಡಲಿಲ್ಲ. ಈ ಜಾಗ ನಮಗೇ ಸೇರಬೇಕು ಎಂದು ಕೆಲವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ’ ಎಂದರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಸಿ.ಪಿ. ಅಶ್ವತ್ಥ್ನಾರಾಯಣ.

‘ನಂಗಲಿ ಸಂತೆಯ ಸ್ಥಳದ ವಿವಾದ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ತಾತ್ಕಾಲಿಕವಾಗಿ ವಿನಾಯಕ ದೇವಾಲಯದ ಬೀದಿಯಲ್ಲಿ ಅನುಮತಿ ಇಲ್ಲದೆ ನಡೆಯುತ್ತಿದೆ. ಕೋರ್ಟ್ ಆದೇಶದ ನಂತರ ಮುಂದಿನ ಕ್ರಮವಹಿಸಲಾಗುತ್ತದೆ’ ಎಂದು ತಹಶೀಲ್ದಾರ್‌ ಕೆ.ಎನ್.ರಾಜಶೇಖರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT