ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಶಾಲೆ ಅಭಿವೃದ್ಧಿಗೆ ನರೇಗಾ ಸಹಕಾರಿ

ಮುಖ್ಯ ಶಿಕ್ಷಕರ ಸಭೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಹೇಳಿಕೆ
Last Updated 17 ಆಗಸ್ಟ್ 2020, 17:21 IST
ಅಕ್ಷರ ಗಾತ್ರ

ಕೋಲಾರ: ‘ನರೇಗಾ ಯೋಜನೆ ಮೂಲಕ ಶಾಲೆಗಳಿಗೆ ಆಟದ ಮೈದಾನ, ಕಾಂಪೌಂಡ್ ಸೇರಿದಂತೆ
ಮತ್ತಿತರ ಮೂಲಸೌಕರ್ಯ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಕ್ರಮ ವಹಿಸಲಿದೆ’ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾ.ಪಂ ಆಡಳಿತಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ತಿಳಿಸಿದರು.

ಅರಾಭಿಕೊತ್ತನೂರು ಗ್ರಾ.ಪಂ ವ್ಯಾಪ್ತಿಯ ಶಾಲೆಗಳ ಮೂಲಸೌಕರ್ಯ ಸಮಸ್ಯೆ ಸಂಬಂಧ ಸೋಮವಾರ ನಡೆದ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ‘ಶಾಲೆಗಳಿಗೆ ಅಗತ್ಯವಿರುವ ತುರ್ತು ಸೌಕರ್ಯಗಳ ಮಾಹಿತಿ ನೀಡಿ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನರೇಗಾ ಯೋಜನೆ ಹೆಚ್ಚು ಸಹಕಾರಿ’ ಎಂದರು.

‘ಶಾಲೆಗಳಲ್ಲಿ ಕಾಂಪೌಂಡ್, ಆಟದ ಮೈದಾನ, ಕೈತೋಟ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದು ಕೆಲಸ ಆರಂಭಿಸಬೇಕು. ಕಾಮಗಾರಿ ವಿಳಂಬ ಆಗಬಾರದು’ ಎಂದು ಪಿಡಿಒಗೆ ಸೂಚಿಸಿದರು.

‘ಸರ್ಕಾರಿ ಶಾಲೆ ಆಸ್ತಿ ದಾಖಲೆಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಆಸ್ತಿ ದಾಖಲೆಪತ್ರಗಳಿಲ್ಲದ ಶಾಲೆಗಳ ಬಗ್ಗೆ ಗಮನಹರಿಸಿ ಶೀಘ್ರವೇ ದಾಖಲೆಪತ್ರ ಮಾಡಿಸಿಕೊಳ್ಳಿ. ಗ್ರಾಮದ ಅಭಿವೃದ್ಧಿಗೆ ಸುಂದರ ಶಾಲೆ, ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ, ವಿದ್ಯುತ್ ಸೌಕರ್ಯ ಅತಿ ಮುಖ್ಯ. ಈ ಕಾರ್ಯಕ್ಕೆ ಗ್ರಾ.ಪಂ ಒತ್ತು ನೀಡಬೇಕು’ ಎಂದು ಹೇಳಿದರು.

ಒತ್ತುವರಿ ತೆರವುಗೊಳಿಸಿ: ‘ಅರಾಭಿಕೊತ್ತನೂರು ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಮರಳು ಮತ್ತು ಜಲ್ಲಿ ತೆರವುಗೊಳಿಸಿ. ತ್ಯಾವನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಜಾಗ ಒತ್ತುವರಿಯಾಗಿದ್ದು, ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಿ. ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಉದ್ಯಾನ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದ್ದು, ಅಂದಾಚು ವೆಚ್ಚ ಪಟ್ಟಿ ಸಿದ್ಧಪಡಿಸಿ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಅನುರಾಧಾ, ‘ಪ್ರೌಢ ಶಾಲೆ ಆವರಣದಲ್ಲಿನ ಗಿಡಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ನರೇಗಾ ಯೋಜನೆಯಡಿ ಕಾಮಗಾರಿ ನಡೆಸಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಇದರಿಂದ ಶಾಲೆ ಅಭಿವೃದ್ಧಿಗೆ ಅಡ್ಡಿಯಾಗಿದೆ. ದೊಡ್ಡಅಯ್ಯೂರು ಶಾಲೆಯ ಉಳಿಕೆ ಕಾಂಪೌಂಡ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ಶಿಕ್ಷಕರು ತಮ್ಮ ಶಾಲೆಗಳ ವ್ಯಾಪ್ತಿಯಲ್ಲಿ ಆಗಬೇಕಿರುವ ಕಾಮಗಾರಿಗಳ ಮಾಹಿತಿ ನೀಡಿದರು. ಗ್ರಾ.ಪಂ ಕಾರ್ಯದರ್ಶಿ ಎಸ್.ಕೆ.ಪ್ರಮೀಳಾ, ಬಿಆರ್‌ಪಿಗಳಾದ ದ ಎಂ.ಆರ್.ಗೋಪಾಲಕೃಷ್ಣ, ಪ್ರವೀಣ್, ಸಿಎಸ್.ನಾಗರಾಜ್, ಸವಿತಾ, ವಿವಿಧ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT