ಭಾನುವಾರ, ಜೂನ್ 20, 2021
29 °C
ರೋಣೂರು ಗ್ರಾಮದ ಕಂಟೈನ್‌ಮೆಂಟ್ ವಲಯ

ಕೋಲಾರ: ಬಾರ್‌ ಮುಚ್ಚಿಸಲು ಮೀನಮೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರೋಣೂರು ಗ್ರಾಮದಲ್ಲಿ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾದ ಮನೆಯ ಮುಂದಿನ ಮದ್ಯದಂಗಡಿಯನ್ನು ಮುಚ್ಚಿಸದೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮದಲ್ಲಿನ ಮನೆ ಕೆಲಸದ ಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ಇತ್ತೀಚೆಗೆ ದೃಢಪಟ್ಟಿತ್ತು. ಆ ಮಹಿಳೆ ಕೆಲಸ ಮಾಡುವ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಗ್ರಾ.ಪಂ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಸೀಲ್‌ಡೌನ್‌ ಮಾಡಿದ್ದಾರೆ. ಆದರೆ, ಮನೆ ಮುಂದಿನ ಮದ್ಯದಂಗಡಿಯನ್ನು ಬಂದ್‌ ಮಾಡಿಸದೆ ವಹಿವಾಟಿಗೆ ಅವಕಾಶ ನೀಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಮದ್ಯದಂಗಡಿಯಿಂದ ಸುಮಾರು 50 ಮೀಟರ್‌ ದೂರದಲ್ಲಿರುವ ಹೋಟೆಲ್‌ ಬಂದ್‌ ಮಾಡಿಸಿರುವ ಅಧಿಕಾರಿಗಳು ಬಾರ್‌ನ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ರೋಣೂರು ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಮೇಶ್‌ರೆಡ್ಡಿ ಅವರ ಮಗ ಈ ಬಾರ್‌ನ ಮಾಲೀಕರಾಗಿದ್ದಾರೆ. ರಮೇಶ್‌ರೆಡ್ಡಿ ಅವರು ಶ್ರೀನಿವಾಸಪುರ ತಾಲ್ಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ್‌ರ ಆತ್ಮೀಯ ಸ್ನೇಹಿತರಾದ ಕಾರಣ ಅಧಿಕಾರಿಗಳು ಬಾರ್‌ ಮುಚ್ಚಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಅಧಿಕಾರಿಗಳು ಹೇಳಿಲ್ಲ: ಗ್ರಾಮಸ್ಥರ ಆರೋಪದ ಸಂಬಂಧ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಕ ರಮೇಶ್‌ರೆಡ್ಡಿ, ‘ನನ್ನ ಮಗನ ಮಾಲೀಕತ್ವದ ಬಾರ್‌ ಕಂಟೈನ್‌ಮೆಂಟ್‌ ವಲಯದಲ್ಲಿ ಬರುತ್ತದೆ ಎಂದು ಅಧಿಕಾರಿಗಳು ಹೇಳಿಲ್ಲ. ಬಾರ್‌ನ ಒಂದು ಬಾಗಿಲು ಮಾತ್ರ ಸೀಲ್‌ಡೌನ್‌ ಪ್ರದೇಶದ ಕಡೆಗಿದೆ. ಹೀಗಾಗಿ ಆ ಬಾಗಿಲು ಮಾತ್ರ ಮುಚ್ಚಿದ್ದೇವೆ’ ಎಂದು ತಿಳಿಸಿದರು.

‘ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಆರೋಗ್ಯ ಇಲಾಖೆಯ ಜವಾಬ್ದಾರಿ. ಕಂಟೈನ್‌ಮೆಂಟ್‌ ವಲಯ ಗುರುತು ಮಾಡಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಳಿಸುವುದು ಗ್ರಾ.ಪಂ ಅಧಿಕಾರಿಗಳ ಕರ್ತವ್ಯ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಶ್ರೀನಿವಾಸ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು