ಬುಧವಾರ, ಏಪ್ರಿಲ್ 21, 2021
25 °C
ದೇವಾಲಯಗಳಲ್ಲಿ ಭಕ್ತರ ದಂಡು: ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ

ಜಿಲ್ಲೆಯಲ್ಲಿ ಕಳೆಗಟ್ಟಿದ ಹೊಸ ವರ್ಷಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಜಿಲ್ಲೆಯಲ್ಲಿ ಬುಧವಾರ ಹೊಸ ವರ್ಷಾಚರಣೆಯ ಸಂಭ್ರಮ ಕಳೆಗಟ್ಟಿತು. ಹೊಸ ವರ್ಷದ ಹಿನ್ನೆಲೆಯಲ್ಲಿ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದ ದೇವಾಲಯಗಳಲ್ಲಿ ಇಡೀ ದಿನ ವಿಶೇಷ ಪೂಜೆ ನಡೆಯಿತು.

ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಮಂಗಳವಾರ ರಾತ್ರಿಯೇ ಪಟಾಕಿ ಸಿಡಿಸಿ ಹಾಗೂ ಕೇಕ್‌ ಕತ್ತರಿಸಿ ಹೊಸ ವರ್ಷವನ್ನು ಸಂತಸದಿಂದ ಬರ ಮಾಡಿಕೊಳ್ಳಲಾಯಿತು. ರಾತ್ರಿ 12 ಗಂಟೆವರೆಗೆ ಕಾದು ಕುಳಿತಿದ್ದ ಮಕ್ಕಳು ಕುಟುಂಬದ ಹಿರಿಯರ ಜತೆ ಸೇರಿ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಯುವಕರ ಗುಂಪು ‘ಹ್ಯಾಪಿ ನ್ಯೂ ಇಯರ್‌‘ ಎಂದು ಕೂಗುತ್ತಾ ಬೈಕ್‌ಗಳಲ್ಲಿ ನಗರ ಪ್ರದಕ್ಷಿಣೆ ಹಾಕಿತು.

ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯದ ಸಂದೇಶ ಹರಿದಾಡಿದವು. ಮಹಿಳೆಯರು ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿ ಹೊಸ ವರ್ಷಕ್ಕೆ ಶುಭಾಶಯ ಕೋರಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಮಕ್ಕಳು ಹೊಸ ಬಟ್ಟೆ ಧರಿಸಿ ಸಂತಸಪಟ್ಟರು. ಕೋಲಾರಮ್ಮ, ಸೋಮೇಶ್ವರ, ನೆಲಗಂಗಮ್ಮ ದೇವಾಲಯ ಭಕ್ತರಿಂದ ತುಂಬಿ ಹೋಗಿತ್ತು.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ಭಕ್ತರ ದೊಡ್ಡ ದಂಡೇ ದೇವಾಲಯಕ್ಕೆ ಹರಿದು ಬಂದಿತು. ಭಕ್ತರು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಸ್ಥಾನಗಳನ್ನು ತಳಿರು ತೋರಣ, ಹೂವುಗಳಿಂದ ಸಿಂಗರಿಸಲಾಗಿತ್ತು. ವಿದ್ಯುತ್‌ ದೀಪಾಲಂಕಾರ ಸಹ ಮಾಡಲಾಗಿತ್ತು. ದೇವರ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ಭಕ್ತರು ಸಂಜೆವರೆಗೂ ದೇವಸ್ಥಾನಕ್ಕೆ ಬರುತ್ತಲೇ ಇದ್ದರು.

ಡೂಂಲೈಟ್ ವೃತ್ತದಲ್ಲಿನ ಗಣಪತಿ ದೇವಾಲಯ, ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಾಲಯ, ಹಳೆ ಅಂಚೆ ಕಚೇರಿ ರಸ್ತೆಯ ಪಂಚಮುಖಿ ದೇವಸ್ಥಾನ, ನಗರದ ಹೊರ ವಲಯದ ಕೊಂಡರಾಜನಹಳ್ಳಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಭಕ್ತರಿಗೆ ತೀರ್ಥ, ಪ್ರಸಾದ ವಿತರಿಸಲಾಯಿತು.

ಶುಭಾಶಯ ವಿನಿಮಯ: ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಅಲ್ಲದೇ, ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಶುಭಾಶಯ ಕೋರಿದರು. ಕ್ರೈಸ್ತ ಸಮುದಾಯದವರು ಕುಟುಂಬ ಸದಸ್ಯರೊಂದಿಗೆ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮೆಥೋಡಿಸ್ಟ್‌ ಹಾಗೂ ಸಂತ ಮೇರಿಯಮ್ಮ ಚರ್ಚ್‌ಗೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು.

ಸರ್ಕಾರಿ ಕಚೇರಿಗಳಲ್ಲೂ ಹೊಸ ವರ್ಷ ಆಚರಿಸಲಾಯಿತು. ನಗರಸಭೆ ಕಚೇರಿಯಲ್ಲಿ ಪೌರ ಕಾರ್ಮಿಕರಿಗೆ ಕೇಕ್‌ ವಿತರಿಸಿ ಶುಭ ಕೋರಲಾಯಿತು. ದೇವಸ್ಥಾನ, ಚರ್ಚ್‌ಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿರಂತರ ಗಸ್ತು ನಡೆಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಅಂತರಗಂಗೆ ಬೆಟ್ಟಕ್ಕೆ ಮಂಗಳವಾರ ರಾತ್ರಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

ಮಾಂಸದೂಟದ ಘಮಲು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೇಕರಿಗಳಲ್ಲಿ ವಿವಿಧ ವಿನ್ಯಾಸದ ಕೇಕ್‌ ಸಿದ್ಧಪಡಿಸಲಾಗಿತ್ತು. ಬೇಕರಿಗಳಲ್ಲಿ ಕೇಕ್‌ ವಹಿವಾಟು ಭರ್ಜರಿಯಾಗಿತ್ತು. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಮದ್ಯದ ವಹಿವಾಟು ಜೋರಾಗಿತ್ತು. ಮೀನು ಹಾಗೂ ಮಾಂಸದ ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿದ್ದವು.

ಮಹಿಳೆಯರು ಮನೆಗಳಲ್ಲಿ ವಿಶೇಷ ಭಕ್ಷ್ಯ ಸಿದ್ಧಪಡಿಸಿದ್ದರು. ಮನೆಗಳಲ್ಲಿ ಬಿರಿಯಾನಿ, ಕಬಾಬ್‌ ಘಮಲು ಹರಡಿತ್ತು. ಮನೆ ಮಂದಿಯೆಲ್ಲಾ ಒಟ್ಟಾಗಿ ಮಾಂಸದೂಟ ಸವಿದು ಸಂಭ್ರಮಿಸಿದರು. ಜತೆಗೆ ಸ್ನೇಹಿತರು, ಸಂಬಂಧಿಕರು ಹಾಗೂ ನೆರೆಹೊರೆಯವರಿಗೆ ಆತಿಥ್ಯ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.