ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಹಾರವಿರಲಿ, ಸಮೀಕ್ಷೆ ಕೂಡ ಮಾಡಿಲ್ಲ’

Last Updated 25 ನವೆಂಬರ್ 2021, 6:10 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕಿನ ಸೂಲಿಕುಂಟೆ ಪಂಚಾಯಿತಿ ವ್ಯಾಪ್ತಿಯ ಎ.ಗೊಲ್ಲಹಳ್ಳಿಗೆ ಬುಧವಾರ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸತತ ಮಳೆಯಿಂದ ಬೆಳೆನಷ್ಟ ಆಗಿರುವುದನ್ನು ವೀಕ್ಷಿಸಿದರು.

ಎ.ಗೊಲ್ಲಹಳ್ಳಿ ಗ್ರಾಮದ ನಾರಾಯಣಸ್ವಾಮಿ ಅವರ ಬೂದುಕುಂಬಳಕಾಯಿ ತೋಟ ಹಾಗೂ ರಮೇಶ್ ಅವರ ರಾಗಿ ಹೊಲ ವೀಕ್ಷಿಸಿದ ಅವರು, ಎಷ್ಟು ಎಕರೆಯಲ್ಲಿ ಬೆಳೆ ಬೆಳೆಯಲಾಗಿದೆ. ಎಷ್ಟು ಖರ್ಚು ತಗುಲಿದೆ. ಎಷ್ಟು ನಷ್ಟವಾಗಿದೆ ಎಂದು ಅವರನ್ನು ಕೇಳಿದರು.

‘ಎರಡು ಎಕರೆಯಲ್ಲಿ ಬೂದುಕುಂಬಳಕಾಯಿ ಬೆಳೆದಿದ್ದು, ಇದುವರೆಗೂ ₹2 ಲಕ್ಷ ಖರ್ಚು ಮಾಡಿದ್ದೇನೆ. ಮಳೆ ಇಲ್ಲದಿದ್ದರೆ ಸುಮಾರು ₹6 ಲಕ್ಷದಷ್ಟು ಲಾಭ ನಿರೀಕ್ಷೆ ಮಾಡಿದ್ದೆ. ಈಗ ಮಳೆಯಿಂದ ಸಂಪೂರ್ಣವಾಗಿ ಕೊಳೆತುಹೋಗಿದೆ. ಕನಿಷ್ಟ ಖರ್ಚು ಕೂಡ ಬಂದಿಲ್ಲ' ಎಂದು ರೈತ ನಾರಾಯಣಸ್ವಾಮಿ, ಅವಲತ್ತುಕೊಂಡರು.

ಮಳೆಯಿಂದಾಗಿ ರಾಗಿ ತೆನೆ ಕಟಾವು ಮಾಡಲಾಗಿಲ್ಲ. ತೆನೆಗಳಲ್ಲೇ ಮೊಳಕೆ ಹೊಡೆದಿದೆ. ಕೈಗೆ ಬಂದಿದ್ದು ಬಾಯಿಗೆ ಬರದಂತಾಗಿದೆ. ಉತ್ತಮ ಫಸಲು ಸಿಗುತ್ತೆ ಎಂದುಕೊಂಡಿದ್ದ ನಿರೀಕ್ಷೆ ಹುಸಿಯಾಗಿದೆ ಎಂದು ರಾಗಿ ಬೆಳೆದಿದ್ದ ರೈತ ರಮೇಶ್ ಹೇಳಿದರು.

ಬೆಳೆ ವೀಕ್ಷಣೆ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ‘ಜಿಲ್ಲೆಯಲ್ಲಿ ಸುಮಾರು 50 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪ್ರಾಣಹಾನಿ ಕೂಡ ಆಗಿದೆ. ಮನೆಗಳು ಕುಸಿದು ಬಿದ್ದಿವೆ. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಹಾರವಿರಲಿ, ಕನಿಷ್ಠ ಸಮೀಕ್ಷೆ ಕೂಡ ಮಾಡಿಲ್ಲ’ ಎಂದು ಆರೋಪಿಸಿದರು.

‘ರಾಗಿ ಸುಮಾರು ಶೇ 60ರಷ್ಟು ನಾಶವಾಗಿದೆ. ಜತೆಗೆ ಶೇಂಗ, ಮೆಕ್ಕೆಜೋಳ, ಹೂವು, ಟೊಮೆಟೊ, ಆಲೂಗಡ್ಡೆ ಸೇರಿದಂತೆ ಬಹುತೇಕ ತರಕಾರಿ ಬೆಳೆ ಹಾನಿಯಾಗಿದೆ. ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಸರ್ಕಾರ ಇದುವರೆಗೂ ಸಮೀಕ್ಷೆ ಕೂಡ ಮಾಡಿಲ್ಲ. ನೀತಿ ಸಂಹಿತೆಗೂ ಬೆಳೆನಷ್ಟ ಸಮೀಕ್ಷೆಗೂ ಸಂಬಂಧವೇನು ಎಂದು ಪ್ರಶ್ನಿಸಿದರು. ನಷ್ಟ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು.

ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕೋಲಾರ ಶಾಸಕ ಶ್ರೀನಿವಾಸಗೌಡ, ಮಾಲೂರು ಶಾಸಕ ನಂಜೇಗೌಡ, ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಯಶವಂತ್‌ಕುಮಾರ್, ಸರ್ಕಲ್ ಇನ್ಸ್‌ಪೆಕ್ಟರ್ ಸುನಿಲ್‌ಕುಮಾರ್, ಚಿಕ್ಕಅಂಕಂಡಹಳ್ಳಿ ಪಂಚಾಯಿತಿ ಅಧ್ಯಕ್ಷ ಹರೀಶ್, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT