ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ: ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು

ಕೋಲಾರ: ‘ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಸ್ಥಳೀಯ ಮುಖಂಡರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಕಿವಿಮಾತು ಹೇಳಿದರು.
ತಾಲ್ಲೂಕಿನ ಕ್ಯಾಲನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಮಾತನಾಡಿ, ‘ಕ್ಷೇತ್ರದ ಗಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಎಲ್ಲರೂ ಪಕ್ಷಬೇಧ ಮರೆತು ಅಭಿವೃದ್ಧಿಗೆ ಸಹಕಾರ ನೀಡಿ’ ಎಂದು ಮನವಿ ಮಾಡಿದರು.
‘ಮಾಜಿ ಸಚಿವ ದಿವಂಗತ ಬೈರೇಗೌಡರಿಗೆ ರಾಜಕೀಯ ಜನ್ಮ ನೀಡಿದ ಈ ಕ್ಷೇತ್ರದಲ್ಲಿ ನನಗೆ ಶಾಸಕನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಬೈರೇಗೌಡರ ಹಾದಿಯಲ್ಲೇ ಸಾಗಿ ಜವಾಬ್ದಾರಿಯುತವಾಗಿ ಅಭಿವೃದ್ಧಿ ಕಾರ್ಯ ಕೈಗೊಂಡು ಜನರ ವಿಶ್ವಾಸ ಗಳಿಸುತ್ತೇನೆ’ ಎಂದು ಭರವಸೆ ನೀಡಿದರು.
‘ಅಭಿವೃದ್ಧಿ ವಿಚಾರದಲ್ಲಿ ಪಕ್ಷ ರಾಜಕೀಯ ಮಾಡುವುದು ಸರಿಯಲ್ಲ. ಗ್ರಾಮಗಳಲ್ಲಿ ಯಾವ ಕೆಲಸ ಆಗಬೇಕಿದೆ ಎಂಬುದನ್ನು ಗಮನಕ್ಕೆ ತಂದರೆ ಅನುದಾನ ಬಿಡುಗಡೆ ಮಾಡಿಸುತ್ತೇನೆ. ಅಧಿಕಾರಿಗಳು ಸಹ ರಾಜಕೀಯ ಬಿಟ್ಟು ಜನರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಗ್ರಾಮಗಳಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ಪಟ್ಟಿ ನೀಡಿದರೆ ಆದ್ಯತೆ ಮೇಲೆ ಪರಿಗಣಿಸಲಾಗುತ್ತದೆ’ ಎಂದರು.
ಸರ್ಕಾರ ಸುಭದ್ರ: ‘ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯ ಸಮ್ಮಿಶ್ರ ಸರ್ಕಾರ 100 ದಿನ ಪೂರೈಸಿದ್ದು, ಮುಂದಿನ 5 ವರ್ಷಗಳ ಕಾಲ ಸರ್ಕಾರ ಸುಭದ್ರವಾಗಿರುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ನಾನು ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿಯವರ ಮೇಲೆ ಒತ್ತಡ ತಂದು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸುತ್ತೇನೆ’ ಎಂದು ಹೇಳಿದರು.
ಅರ್ಜಿ ಸಲ್ಲಿಕೆ: ಕ್ಯಾಲನೂರು ಸುತ್ತಮುತ್ತಲಿನ ಉರಟಿ ಅಗ್ರಹಾರ, ಕಡಗಟ್ಟೂರು, ಬೈರಾಂಡಹಳ್ಳಿ, ಕಾಮಂಡಹಳ್ಳಿ, ರಘುಪತಿ ಹೊಸಹಳ್ಳಿ, ರಘುಪತಿ ಅಗ್ರಹಾರ, ಬೀಚಗೊಂಡಹಳ್ಳಿ, ಚನ್ನಸಂದ್ರ ಗ್ರಾಮದಲ್ಲಿ ಸಭೆ ನಡೆಯಿತು. ರಸ್ತೆ, ಕುಡಿಯುವ ನೀರು, ವಸತಿ, ನಿವೇಶನ ಸೌಕರ್ಯ ಕೋರಿ ಸಾರ್ವಜನಿಕರು ಶಾಸಕರಿಗೆ ಅರ್ಜಿ ಸಲ್ಲಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ದಯಾನಂದ್, ಕೋಚಿಮುಲ್ ನಿರ್ದೇಶಕ ರಾಮಕೃಷ್ಣೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಗೋಪಾಲ್ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.