ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ತೆರೆಯಲಿ

ವಿಧಾನ ಪರಿಷತ್ ಮಾಜಿ ಸಭಾಪತಿ ಸುದರ್ಶನ್‌ ಸಲಹೆ
Last Updated 17 ಡಿಸೆಂಬರ್ 2019, 13:27 IST
ಅಕ್ಷರ ಗಾತ್ರ

ಕೋಲಾರ: ‘ಭಾರತೀಯ ಪರಂಪರೆಯಾದ ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಯೋಗ ಗುರು ಬಿಕೆಎಸ್ ಅಯ್ಯಂಗಾರ್‌ರ ನೆನಪಿನಲ್ಲಿ ಅವರ ಹುಟ್ಟೂರು ಬೆಳ್ಳೂರಿನಲ್ಲಿ ರಾಜ್ಯ ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ತೆರೆಯಬೇಕು’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮನವಿ ಮಾಡಿದರು.

ಬೆಳ್ಳೂರು ಕೃಷ್ಣಮಾಚಾರ್ ಶೇಷಮ್ಮ ಸ್ಮಾರಕ ನಿಧಿ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಬೆಳ್ಳೂರಿನ ರಮಾಮಣಿ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಕೆಎಸ್ ಅಯ್ಯಂಗಾರ್‌ರ 101ನೇ ಜನ್ಮ ದಿನಾಚರಣೆಯಲ್ಲಿ  ಮಾತನಾಡಿದರು.

‘ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯ ತರಬೇತಿಗಾಗಿ ದೂರದ ದೆಹಲಿಗೆ ಹೋಗುತ್ತಿದ್ದಾರೆ. ಆದರೆ, ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಾಗಿ ದೆಹಲಿಗೆ ಹೋಗಲು ಆರ್ಥಿಕ ಶಕ್ತಿಯಿಲ್ಲ. ಹೀಗಾಗಿ ಜಿಲ್ಲೆಯ ಬೆಳ್ಳೂರಿನಲ್ಲಿ ತರಬೇತಿ ಕೇಂದ್ರ ತೆರೆದರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.

‘ಶ್ರೇಷ್ಠ ಭಾರತ, ಬಹುತ್ವ ಭಾರತ, ಬಲಿಷ್ಠ ಭಾರತದ ಬಗ್ಗೆ ಮಾತಾನಾಡುವವರೇ ಹೆಚ್ಚು. ಆದರೆ, ಬಿಕೆಎಸ್ ಅಯ್ಯಂಗಾರ್‌ ಅವರು ಯೋಗ ಶಿಕ್ಷಣದ ಮೂಲಕ ಇಡೀ ವಿಶ್ವಕ್ಕೆ ಭಾರತದ ಕುರಿತು ಅಂತಹ ಕಲ್ಪನೆ ನೀಡಿದ್ದಾರೆ. ನಗರ ಪ್ರದೇಶದಲ್ಲಿ ಸಾಧನೆ ಸುಲಭ. ಆದರೆ, ಹಳ್ಳಿಗಾಡಿನಲ್ಲಿ ಉಚಿತ ವೈದ್ಯಕೀಯ ಸೇವೆ, ಶಿಕ್ಷಣ ನೀಡುವವರು ನಿಜಕ್ಕೂ ದೇವಮಾನವರು’ ಎಂದು ಬಣ್ಣಿಸಿದರು.

‘ಭಾರತದ ಸಂಸ್ಕೃತಿ ಮತ್ತು ಪರಂಪರೆಯ ದ್ಯೂತಕವಾದ ಯೋಗವು ವಿಶ್ವಮಾನ್ಯವಾಗಿದೆ. ಇಡೀ ವಿಶ್ವವೇ ಯೋಗದ ಮೊರೆ ಹೋಗಿರುವುದು ಹೆಮ್ಮೆಯ ವಿಷಯ. ಬೆಳ್ಳೂರಿನಲ್ಲಿ ಅನೇಕ ಸಂಸ್ಥೆ ಸ್ಥಾಪಿಸಿ ಸಮಾಜಕ್ಕೆ ಕೊಡುಗೆ ನೀಡಿರುವ ಬಿಕೆಎಸ್‌ ಅಯ್ಯಂಗಾರ್‌ ಅವರ ಟ್ರಸ್ಟ್‌ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತೇಜನ ನೀಡಬೇಕು’ ಎಂದು ಹೇಳಿದರು.

ಮಹಾನ್‌ ಚೇತನ: ‘ಬಿಕೆಎಸ್‌ ಅಯ್ಯಂಗಾರ್‌ ಅವರು ವಿಶ್ವಕ್ಕೆ ಯೋಗ ಪರಿಚಯಿಸಿದ ಮಹಾನ್ ಚೇತನ. ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಸಂದೇಶ ಸಮಾಜಕ್ಕೆ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು.

‘ಯೋಗವು ಮನುಷ್ಯನ ಕಣ ಕಣದಲ್ಲೂ ಪ್ರಕೃತಿಯ ಜತೆ ಜೀವನ ಸಾಕಾರಗೊಳಿಸುವ ಸಾಧನ. ಒತ್ತಡ ಮುಕ್ತ ಬದುಕು ರೂಪಿಸಿಕೊಳ್ಳಲು ಯೋಗಾಭ್ಯಾಸ ದಾರಿದೀಪ. ಯೋಗವು ಕೇವಲ ಭೌತಿಕ ಕ್ರಿಯೆಯಲ್ಲ. ಅದು ಜೀವನದ ಪರಿಪೂರ್ಣತೆಯ ದಾರಿ. ಉತ್ತಮ ಆರೋಗ್ಯಕ್ಕೆ ಯೋಗ ಸಹಕಾರಿ’ ಎಂದು ಕಿವಿಮಾತು ಹೇಳಿದರು.

‘ಬಿಕೆಎಸ್‌ ಅಯ್ಯಂಗಾರ್‌ರ ಪರಿಶ್ರಮದಿಂದ ಬೆಳ್ಳೂರು ಅಭಿವೃದ್ಧಿ ಹೊಂದಿದೆ. ಸುತ್ತಮುತ್ತಲ 30 ಹಳ್ಳಿಗಳಲ್ಲಿ ಯೋಗ ಶಿಕ್ಷಣ ನೀಡಲಾಗುತ್ತಿದೆ. ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಬಾಷ್‌ ಕಂಪನಿ ಸಹಯೋಗದಲ್ಲಿ ಕೌಶಲ ತರಬೇತಿ ನೀಡುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನೀಡಿದರು ಹಾಗೂ ಜನಪದ ನೃತ್ಯ ಪ್ರದರ್ಶಿಸಿದರು. ಸರ್ಕಾರಿ ಬಾಲಕರ ಕಾಲೇಜಿನ ಪ್ರಾಧ್ಯಾಪಕ ಮುರಳೀಧರ್, ಬೆಳ್ಳೂರು ಕೃಷ್ಣಮಾಚಾರ್ ಮತ್ತು ಶೇಷಮ್ಮ ಸ್ಮಾರಕ ನಿಧಿ ಟ್ರಸ್ಟ್ ಅಧ್ಯಕ್ಷ ಭಾಷ್ಯಂ ರಘು, ಉಪಾಧ್ಯಕ್ಷ ರಾಮ್‌ಪ್ರಸಾದ್, ಸದಸ್ಯರಾದ ಕೆ.ಅನಂತಕೃಷ್ಣ, ಕಸ್ತೂರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT