ಶನಿವಾರ, ಫೆಬ್ರವರಿ 29, 2020
19 °C
15ಕ್ಕೆ ಜನರ ಸೇವೆಗೆ ಮುಕ್ತ: ಜಿಲ್ಲಾಧಿಕಾರಿ ಪರಿಶೀಲನೆ

ಮಕ್ಕಳ ಆಸ್ಪತ್ರೆಗೆ ಉದ್ಘಾಟನೆ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಇಲ್ಲಿನ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್) ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಉದ್ಘಾಟನಾ ಸಮಾರಂಭ ಫೆ.15ಕ್ಕೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

ಕಳೆದ 6 ತಿಂಗಳಿಂದ ಹಲವು ಬಾರಿ ಆಸ್ಪತ್ರೆ ಉದ್ಘಾಟನಾ ಸಮಾರಂಭ ನಿಗದಿಪಡಿಸಿ ಕಾರಣಾಂತರದಿಂದ ಮುಂದೂಡಲಾಗಿತ್ತು. ಇದರಿಂದ ಜಿಲ್ಲೆಯ ಜನ ಹಾಗೂ ವಿವಿಧ ಸಂಘಟನೆಗಳ ಸದಸ್ಯರು ಆಕ್ರೋಶಗೊಂಡು ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ಮಾಡಿದ್ದರು.

ಹೀಗಾಗಿ ಅಧಿಕಾರಿಗಳು ಆರೋಗ್ಯ ಸಚಿವರು ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಮೇಲೆ ಒತ್ತಡ ತಂದು ಆಸ್ಪತ್ರೆ ಉದ್ಘಾಟನಾ ಸಮಾರಂಭ ನಿಗದಿಪಡಿಸಿದ್ದಾರೆ. ಪ್ರಸ್ತುತ ಎಸ್‌ಎನ್‌ಆರ್‌ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ಮಕ್ಕಳಿಗೆ 40 ಹಾಗೂ ತಾಯಂದಿರಿಗೆ 50 ಹಾಸಿಗೆ ಸಾಮರ್ಥ್ಯವಿದ್ದು, ರೋಗಿಗಳ ಸಂಖ್ಯೆ ಹೆಚ್ಚಿರುವ ಕಾರಣ ಸಮಸ್ಯೆ ಎದುರಾಗಿದೆ. ಅಲ್ಲದೇ, ರೋಗಿಗಳಿಗೆ ಸೌಲಭ್ಯ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ.

ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಕೆ.ಆರ್.ರಮೇಶ್‌ಕುಮಾರ್ ಆಸ್ಪತ್ರೆಯ ಸಮಸ್ಯೆ ಅರಿತು ಸುಸಜ್ಜಿತ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದ ಮಂಜೂರಾತಿ ಕೊಡಿಸಿದ್ದರು. ಅಲ್ಲದೇ, 2017ರ ಜನವರಿಯಲ್ಲಿ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಶೀಘ್ರವೇ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಕಟ್ಟಡವು ನಿರ್ಮಾಣಗೊಂಡು ಸುಮಾರು ಏಳೆಂಟು ತಿಂಗಳಾಗಿದೆ.

ಸೌಲಭ್ಯಗಳು: ನೂತನವಾಗಿ ಆರಂಭಗೊಳ್ಳಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸುಸಜ್ಜಿತ ಸೌಲಭ್ಯ ಕಲ್ಪಿಸಲಾಗಿದೆ. ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಕೊಠಡಿಗಳು, ಮಕ್ಕಳ ತೀವ್ರ ನಿಗಾ ಘಟಕ, ರಾಷ್ಟ್ರೀಯ ಉಚಿತ ಔಷಧ ವಿತರಣಾ ಸೌಲಭ್ಯ, ಲಸಿಕೆ ಸೌಲಭ್ಯ, ತಾತ್ಕಾಲಿಕ ಮತ್ತು ಶಾಶ್ವತ ಕುಟುಂಬ ಕಲ್ಯಾಣ ಯೋಜನೆ ಸೌಲಭ್ಯ ನೀಡಲು ವ್ಯವಸ್ಥೆ ಮಾಡಲಾಗಿದೆ.

ಆಸ್ಪತ್ರೆಯು ಜನರ ಸೇವೆಗೆ ಮುಕ್ತವಾಗುತ್ತಿರುವುದರಿಂದ ಅಗತ್ಯ ಸಿಬ್ಬಂದಿ, ವೈದ್ಯಕೀಯ ಉಪಕರಣ ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೊನೆಗೂ ಆಸ್ಪತ್ರೆಗೆ ಉದ್ಘಾಟನಾ ಭಾಗ್ಯ ಕೂಡಿ ಬಂದಿರುವುದರಿಂದ ಜಿಲ್ಲೆಯ ಜನ ಸಂತಸಗೊಂಡಿದ್ದಾರೆ.

ಸಕಲ ಸಿದ್ಧತೆ: ಆಸ್ಪತ್ರೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ಫೆ.15ರಂದು
ನಡೆಯುವ ಆಸ್ಪತ್ರೆ ಉದ್ಘಾಟನಾ ಸಮಾರಂಭಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಆರೋಗ್ಯ ಸಚಿವ ಶ್ರೀರಾಮುಲು ಅವರು ಆಸ್ಪತ್ರೆ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಸಂಸದ ಎಸ್.ಮುನಿಸ್ವಾಮಿ, ಶಾಸಕ ಕೆ.ಶ್ರೀನಿವಾಸಗೌಡ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸುತ್ತಾರೆ’ ಎಂದು ಹೇಳಿದರು.

‘ಎಸ್‌ಎನ್‌ಆರ್ ಆಸ್ಪತ್ರೆಯ ಗುತ್ತಿಗೆ ಆಧಾರದ ಸಿಬ್ಬಂದಿಗೆ 5 ತಿಂಗಳಿಂದ ವೇತನ ಬಾರದಿರುವ ಸಂಗತಿ ಗಮನಕ್ಕೆ ಬಂದಿದೆ. ವೇತನ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)