ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜಿಎಂಎಲ್ ಮೈನಿಂಗ್ ಮನೆಗಳ ನೋಂದಣಿ: ಕಾರ್ಮಿಕರಲ್ಲಿ ಅಸಮಾಧಾನ

Published 6 ಜುಲೈ 2023, 7:41 IST
Last Updated 6 ಜುಲೈ 2023, 7:41 IST
ಅಕ್ಷರ ಗಾತ್ರ

-ಕೃಷ್ಣಮೂರ್ತಿ

ಕೆಜಿಎಫ್‌: ಚಿನ್ನದ ಗಣಿ (ಬಿಜಿಎಂಎಲ್‌) ಕಾರ್ಮಿಕರು ವಾಸ ಮಾಡುತ್ತಿರುವ ಮನೆಗಳನ್ನು ನೋಂದಣಿ ಮಾಡಿಕೊಡಲು ನಗರಸಭೆಯಿಂದ ಐಡಿ ನಂಬರ್ ಪಡೆಯುವಂತೆ ಬಿಜಿಎಂಎಲ್ ಆಡಳಿತ ವರ್ಗ ನೋಟಿಸ್ ಹೊರಡಿಸಿರುವುದು ಕಾರ್ಮಿಕ ವರ್ಗದಲ್ಲಿ ಗೊಂದಲ ಉಂಟು ಮಾಡಿದೆ.

ಸ್ವಯಂ ನಿವೃತ್ತಿ ಪಡೆದ (ಎಸ್‌ಟಿಬಿಪಿ) ಕಾರ್ಮಿಕರಿಗೆ ಮನೆಗಳನ್ನು ಸ್ವಂತ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ಕೇಂದ್ರ ಗಣಿ ಸಚಿವಾಲಯ ನಿರ್ಧರಿಸಿದ್ದು, ಅದರಂತೆ ಮೊದಲು ಅರ್ಜಿ ನೀಡಿದವರಿಗೆ ಮೊದಲ ಆದ್ಯತೆಯಂತೆ ಅರ್ಜಿ ಆಹ್ವಾನಿಸಿದೆ. ಅದರಂತೆ ಮೈನಿಂಗ್ ಪ್ರದೇಶದಲ್ಲಿ ವಾಸ ಮಾಡುತ್ತಿರುವವರು ನಗರಸಭೆಯಿಂದ ಆಸ್ತಿ ಐಡಿಗಳನ್ನು ಪಡೆದು ಸ್ವರ್ಣಭವನಕ್ಕೆ (ಬಿಜಿಎಂಎಲ್ ಅಧಿಕೃತ ಆಡಳಿತ ಕಚೇರಿ) ನೀಡುವಂತೆ ಸೂಚಿಸಿರುವುದು ಕಾರ್ಮಿಕ ವಲಯದಲ್ಲಿ ಗೊಂದಲವನ್ನು ಉಂಟು ಮಾಡಿದೆ. ತಮ್ಮ ಮನೆಗಳ ಉಸ್ತುವಾರಿಯನ್ನು ಬಿಜಿಎಂಎಲ್‌ ವಹಿಸಿಕೊಂಡಿರುವುದರಿಂದ ಮೈನಿಂಗ್ ಅಧಿಕಾರಿಗಳೇ ಐಡಿ ನಂಬರ್‌ಗಳನ್ನು ಪ್ರತಿ ಮನೆಗೆ ನೀಡಲಿ ಎಂದು ವಾದ ಮಂಡಿಸುತ್ತಿದ್ದಾರೆ.

ಮನೆಗಳಲ್ಲಿ ವಾಸ ಮಾಡುತ್ತಿರುವವರು ಈಗಾಗಲೇ ಠೇವಣಿ ಹಣವನ್ನು ಬಿಜಿಎಂಎಲ್‌ಗೆ ನೀಡಿದ್ದಾರೆ. ಮಾಸಿಕ ಬಾಡಿಗೆಯನ್ನು ಕೂಡ ನೀಡುತ್ತಿದ್ದಾರೆ. ಆದರೆ ಅವರಿಗೆ ಬಿಜಿಎಂಎಲ್ ಅವರ ಆಸ್ತಿಯನ್ನು ನೋಂದಣಿ ಮಾಡಿಕೊಟ್ಟಿಲ್ಲ. ಆಸ್ತಿ ನೋಂದಣಿ ಮಾಡದೆ ನಗರಸಭೆಯಲ್ಲಿ ಯಾವ ರೀತಿ ಆಸ್ತಿಗೆ ಐಡಿ ಸೃಷ್ಟಿಸಲು ಸಾಧ್ಯ ಎಂಬುದು ಕಾರ್ಮಿಕರ ಅಳಲಾಗಿದೆ.

ಬಿಜಿಎಂಎಲ್‌ ಅಧಿಕಾರಿಗಳ ನಡೆ ನಗರಸಭೆ ಅಧಿಕಾರಿಗಳಲ್ಲಿ ಕೂಡ ಕಸಿವಿಸಿ ಉಂಟು ಮಾಡಿದೆ. ಚಿನ್ನದ ಗಣಿ ಮುಚ್ಚಿದ ಸಂದರ್ಭದಲ್ಲಿ ಮೈನಿಂಗ್ ಕಾಲೋನಿಗಳನ್ನು ನಗರಸಭೆಗೆ ವರ್ಗಾಯಿಸಲಾಗಿತ್ತು. ಅದರ ಸ್ವಚ್ಛತಾ ಕಾರ್ಯವನ್ನು ನಗರಸಭೆ ವಹಿಸಿಕೊಳ್ಳಬೇಕೆಂದು ಉಲ್ಲೇಖವಾಗಿತ್ತು. ಆದರೆ ಗಣಿ ಆಡಳಿತ ವರ್ಗ ನಷ್ಟದ ನೆಪ ಹೇಳಿ ವಾರ್ಷಿಕವಾಗಿ ನೀಡಬೇಕಾಗಿದ್ದ ತೆರಿಗೆಯನ್ನು ಕಟ್ಟಿಲ್ಲ. ಇಲ್ಲಿಯವರೆಗೂ ಸುಮಾರು ₹32 ಕೋಟಿ ಆಸ್ತಿ ತೆರಿಗೆ ನಗರಸಭೆಗೆ ಬರಬೇಕಾಗಿದೆ ಎಂದು ನಗರಸಭೆಯ ಅಧಿಕಾರಿಗಳು ಹೇಳುತ್ತಾರೆ.

ಚಿನ್ನದ ಗಣಿ ವ್ಯಾಪ್ತಿಯಲ್ಲಿ 2005ರ ಸಮೀಕ್ಷೆ ಪ್ರಕಾರ 20,359 ಕಟ್ಟಡಗಳು ಇವೆ. ಗಣಿ ಕಾರ್ಮಿಕರ ಕುಟುಂಬಗಳು ಮತ್ತು ಗಣಿಯ ಕಚೇರಿಗಳು ಇವೆ. ಈ ಕಟ್ಟಡಗಳಿಗೆ ನಗರಸಭೆಯಲ್ಲಿ ಪಿಐಡಿ ಸಂಖ್ಯೆ ಇದೆ. ಆದರೆ ಅವುಗಳನ್ನು ನೇರವಾಗಿ ಗಣಿ ಕಾರ್ಮಿಕರಿಗೆ ನೀಡುವ ಯಾವ ಆದೇಶವೂ ಸರ್ಕಾರದಿಂದ ಬಂದಿಲ್ಲ. 2005ರ ನಂತರ ಮೈನಿಂಗ್ ಪ್ರದೇಶದಲ್ಲಿ ಸಾವಿರಾರು ಹೊಸ ಕಟ್ಟಡಗಳು ಅನಧಿಕೃತವಾಗಿ ತಲೆ ಎತ್ತಿವೆ. ಅವುಗಳಿಗೆ ಪಿಐಡಿ ನಂಬರ್ ಇದೆಯೇ ಇಲ್ಲವೇ ಎಂಬುದರ ಬಗ್ಗೆ ನಗರಸಭೆಯಲ್ಲಿ ಮಾಹಿತಿ ಇಲ್ಲ. ಇಷ್ಟು ವರ್ಷಗಳ ಕಾಲ ಇಂತಹ ಮನೆಗಳಲ್ಲಿ ಮತ್ತು ಕಟ್ಟಡಗಳಲ್ಲಿರುವವರಿಗೆ ಕಟ್ಟಡ ಅವರ ಹೆಸರಿಗೆ ನೋಂದಣಿ ಆಗುವುದು ಅಸಾಧ್ಯ ಎಂದು ನಗರಸಭೆ ಮೂಲಗಳು ತಿಳಿಸಿವೆ.

ಬಿಜಿಎಂಎಲ್‌ ಪ್ರದೇಶದಲ್ಲಿರುವ 12 ಸಾವಿರ ಎಕರೆ ಪ್ರದೇಶವನ್ನು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಗುತ್ತಿಗೆ ಮೇಲೆ ಕೊಟ್ಟಿದೆ. ರಾಜ್ಯ ಸರ್ಕಾರ ಲೀಸ್ ರದ್ದುಪಡಿಸಿ ಮನೆಗಳನ್ನು ಕಾರ್ಮಿಕರ ಕುಟುಂಬಗಳಿಗೆ ನೋಂದಣಿ ಮಾಡಿಕೊಡಬೇಕು. ಅದನ್ನು ಬಿಟ್ಟು ಕೇಂದ್ರ ಸರ್ಕಾರದ ಕಂಪನಿ ಮನೆಗಳನ್ನು ನೋಂದಣಿ ಮಾಡುವುದು ಕಾನೂನಿನ ಪ್ರಕಾರ ಎಷ್ಟು ಸರಿ ಎಂಬುದು ಕೂಡ ಗೊಂದಲಕ್ಕೆ ಕಾರಣವಾಗಿದೆ. ನೋಂದಣಿ ಪ್ರಕ್ರಿಯೆಯನ್ನು ಸಾಂಕೇತಿಕವಾಗಿ ಜಾರಿಗೊಳಿಸಲು 10 ಮನೆಗಳ ಐಪಿಡಿ ನಂಬರ್‌ಗಳನ್ನು ನೀಡುವಂತೆ ಬಿಜಿಎಂಎಲ್ ಆಡಳಿತ ವರ್ಗ ನಗರಸಭೆಯನ್ನು ಕೋರಿದೆ. ಜತೆಗೆ ನಗರಸಭೆ ಜತೆ ಚರ್ಚೆ ಮಾಡದೆ ಕರಪತ್ರ ಹೊರಡಿಸಿ ನಗರಸಭೆಯಿಂದ ಐಡಿ ಪಡೆಯುವಂತೆ ಸೂಚಿಸಿರುವುದರಿಂದ ಗಣಿ ಕಾರ್ಮಿಕರು ನಗರಸಭೆಗೆ ಎಡತಾಕುತ್ತಿದ್ದಾರೆ. ಅವರನ್ನು ನಗರಸಭೆ ಸಿಬ್ಬಂದಿ ವಾಪಸ್ ಕಳಿಸುತ್ತಿದ್ದಾರೆ.

ವಾಸ್ತವ ಸಂಗತಿಯನ್ನು ಬಿಟ್ಟು ಗೊಂದಲ ಉಂಟು ಮಾಡುವ ಕರಪತ್ರವನ್ನು ಬಿಜಿಎಂಎಲ್ ಅಧಿಕಾರಿಗಳು ಹೊರಡಿಸಿದ್ದಾರೆ. ಅವರ ಕ್ರಮ ಸರಿಯಲ್ಲ
-ಅನ್ವರಸನ್‌, ಕಾರ್ಮಿಕ ಮುಖಂಡ
ಆರ್ಥಿಕ ಹೊರೆ
ಕಾರ್ಮಿಕರಿಗೆ ಬರಬೇಕಾದ ಸವಲತ್ತುಗಳ ಬಗ್ಗೆ ನ್ಯಾಯಾಲಯಕ್ಕೆ ಮೊರೆ ಹೋಗಿದ್ದೇವೆ. 2007ರಲ್ಲಿಯೇ ಸೆಟ್ಲ್‌ಮೆಂಟ್‌ ಆಗಿದೆ. ನಾವು ನಗರಸಭೆಯಲ್ಲಿ ತೆರಿಗೆ ಕಟ್ಟಬೇಕೆಂದು ಹೇಳುತ್ತದೆ. ಅದು ಹೇಗೆ ಸಾಧ್ಯ. ಕಾರ್ಮಿಕರನ್ನು ಮತ್ತಷ್ಟು ಶೋಷಣೆ ಮಾಡಲಾಗುತ್ತಿದೆ. ಕಾರ್ಮಿಕರು ಈಗಾಗಲೇ ಸಾಕಷ್ಟು ಆರ್ಥಿಕವಾಗಿ ಕುಗ್ಗಿ ಹೋಗಿದ್ದಾರೆ. ಅವರಿಗೆ ಬರಬೇಕಾದ ಸವಲತ್ತುಗಳು ಇನ್ನೂ ಬಂದಿಲ್ಲ. ಇಂತಹ ಸಮಯದಲ್ಲಿ ಹೆಚ್ಚುವರಿ ಹೊರೆಯನ್ನು ಹೊರಿಸುವುದಕ್ಕೆ ಬಿಡುವುದಿಲ್ಲ. ಆರ್ಥಿಕವಾಗಿ ಹೊರೆ ಆಗದಂತೆ ಮನೆಗಳನ್ನು ಕಾರ್ಮಿಕರಿಗೆ ನೀಡಬೇಕು ಎಂದು ಬಿಜಿಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಮೂರ್ತಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT