ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನವೇ ಗಟ್ಟಿ’

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಲೇವಡಿ
Last Updated 13 ಫೆಬ್ರುವರಿ 2021, 14:38 IST
ಅಕ್ಷರ ಗಾತ್ರ

ಕೋಲಾರ: ‘ಕಾಂಗ್ರೆಸ್‌ ಮುಖಂಡರು ತಮ್ಮ ಪಕ್ಷದೊಳಗಿನ ಗೊಂದಲ ಮರೆ ಮಾಚುವ ದುರುದ್ದೇಶಕ್ಕೆ ಕೇಂದ್ರದ ಬಜೆಟ್‌ ವಿರುದ್ಧ ಟೀಕೆ ಮಾಡುತ್ತಿದ್ದಾರೆ’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಕಿಡಿಕಾರಿದರು.

ಇಲ್ಲಿ ಶನಿವಾರ ಪಕ್ಷದ ಕಾರ್ಯಕರ್ತರ ಸಭೆ ಮತ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ದೇಶದ ಸರ್ವತ್ತೋಮುಖ ಅಭಿವೃದ್ಧಿಗಾಗಿ ಜನಪರ ಬಜೆಟ್‌ ಮಂಡಿಸಿದೆ. ಆದರೆ, ಪ್ರತಿಪಕ್ಷಗಳು ಇಲ್ಲಸಲ್ಲದ ಟೀಕೆ ಮಾಡುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌ನಲ್ಲಿ ಒಳ ಜಗಳ ಹೆಚ್ಚಿದ್ದು, ಮುಖಂಡರು ತಮ್ಮ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಕೇಂದ್ರ ಬಜೆಟ್‌ನತ್ತ ಬೆಟ್ಟು ತೋರಿಸುತ್ತಿದ್ದಾರೆ. ರಾಜಕೀಯ ನಿರುದ್ಯೋಗಿಗಳಾಗಿರುವ ಕಾಂಗ್ರೆಸ್‌ ಮುಖಂಡರು ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಭವಿಷ್ಯದಲ್ಲಿ ವಿಪಕ್ಷ ಸ್ಥಾನವೇ ಗಟ್ಟಿ’ ಎಂದು ಲೇವಡಿ ಮಾಡಿದರು.

‘ಬಡವರು, ಪರಿಶಿಷ್ಟರು, ಕೃಷಿಕರು ಹಾಗೂ ಕಾರ್ಮಿಕರ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಹಲವಾರು ಅಭಿವೃದ್ಧಿ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದೊಂದು ಐತಿಹಾಸಿಕ ಬಜೆಟ್ ಆಗಿದ್ದು, ಕೃಷಿ ಉತ್ಪಾದನೆ ಹೆಚ್ಚಳ, ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ ಕ್ಷೇತ್ರದಲ್ಲಿ ಸೌಕರ್ಯ ವೃದ್ಧಿಗೆ ಪೂರಕವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಕೇಂದ್ರವು ಬಜೆಟ್‌ನಲ್ಲಿ ಜನರ ಮೇಲೆ ಹೊಸದಾಗಿ ಯಾವುದೇ ತೆರಿಗೆ ವಿಧಿಸದೆ ಸಾಲ ಪಡೆಯುವ ಆಯ್ಕೆ ಮಾಡಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವು ಅತಿ ವೇಗದಲ್ಲಿ ಅಭಿವೃದ್ಧಿ ಸಾಧಿಸುವ ವಿಶ್ವಾಸವಿದೆ. ಇದೇ ಕಾರಣಕ್ಕೆ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಕೃಷಿ ಸೌಕರ್ಯಕ್ಕಾಗಿ ₹ 1 ಲಕ್ಷ ಕೋಟಿ ಮೀಸಲಿಡಲಾಗಿದೆ’ ಎಂದು ಮಾಹಿತಿ ನೀಡಿದರು.

ಆರೋಗ್ಯ ಕೇಂದ್ರ: ‘ಹಿಂದಿನ ಹಣಕಾಸು ವರ್ಷದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಹೂಡಿಕೆ ಪ್ರಮಾಣ ₹ 94 ಸಾವಿರ ಕೋಟಿಯಿತ್ತು. ಈಗ ಈ ಮೊತ್ತವನ್ನು ₹ 2.23 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಭಾರತವು ಬೃಹತ್ ಆರೋಗ್ಯ ಮೂಲ ಸೌಕರ್ಯ ಕೇಂದ್ರವಾಗಿ ಬೆಳೆಯಲಿದೆ. ದೇಶವು ಜಗತ್ತಿನ ಆರೋಗ್ಯ ಕೇಂದ್ರ (ಹಬ್) ಆಗುವತ್ತ ಹೆಜ್ಜೆ ಹಾಕಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರೈತರ ಆದಾಯ ದ್ವಿಗುಣಗೊಳಿಸಲು ದೂರದೃಷ್ಟಿಯ ಯೋಜನೆ, ಯುವಕರಿಗೆ ಉದ್ಯೋಗಾವಕಾಶ ಹೆಚ್ಚಳಕ್ಕೆ ಯೋಜನೆ, ಆರೋಗ್ಯ ಕ್ಷೇತ್ರದ ಬಲವರ್ಧನೆಗೆ ₹ 64,180 ಕೋಟಿ, ಅಮೃತ್‌ ನಗರಗಳಲ್ಲಿ 2.86 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇವೆಲ್ಲವೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ನಿಶ್ಚಿತ’ ಎಂದರು.

‘ಪ್ರತಿಪಕ್ಷಗಳು ವಿರೋಧಕ್ಕಾಗಿ ಬಜೆಟ್‌ಗೆ ವಿರೋಧ ವ್ಯಕ್ತಪಡಿಸುತ್ತಿವೆ. ವಿಪಕ್ಷಗಳಿಗೆ ವಿರೋಧ ಮಾಡುವುದು ಬಿಟ್ಟು ಬೇರೆ ಕೆಲಸವಿಲ್ಲ. ಮುಂದಿನ ಚುನಾವಣೆಯಲ್ಲೂ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಳಿತದಿಂದ ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯಾಗಿದೆ’ ಎಂದು ತಿಳಿಸಿದರು.

ರಾಜ್ಯ ಬಜೆಟ್‌: ‘ಮಾ.5ಕ್ಕೆ ಮಂಡನೆಯಾಗುವ ರಾಜ್ಯ ಬಜೆಟ್‌ ರೈತರು, ಬಡವರ ಪರವಾಗಿ ಇರುತ್ತದೆ. ನಗರಾಭಿವೃದ್ಧಿಗೆ ಸಂಬಂಧಿಸಿದಂತೆ 10 ಮಹಾನಗರ ಪಾಲಿಕೆಗಳು, ಇತರೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯುಜಿಡಿ, ನೀರಿನ ಸೌಕರ್ಯಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಕೋಲಾರ ನಗರದ ರಸ್ತೆಗಳ ಅವ್ಯವಸ್ಥೆ ವಿಷಯ ಸದನದಲ್ಲೂ ಪ್ರಸ್ತಾಪವಾಗಿದೆ. ಕೋಲಾರ ನಗರಸಭೆಗೆ ಮಂಜೂರಾಗಿ ತಡೆ ಹಿಡಿದಿದ್ದ ₹ 5 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ವರ್ತುಲ ರಸ್ತೆ ನಿರ್ಮಾಣ ಸಂಬಂಧ ಬಜೆಟ್‌ನಲ್ಲಿ ಪೂರಕವಾಗಿ ಸ್ಪಂದಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ವೇಣುಗೋಪಾಲ್, ಮಾಜಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT