ಭಾನುವಾರ, ಜೂನ್ 20, 2021
25 °C
ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಧರಣಿ

ಭೂ ಸುಧಾರಣೆ ತಿದ್ದುಪಡಿ ರೈತಕುಲಕ್ಕೆ ಮಾರಕ: ಧರಣಿನಿರತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಇಲ್ಲಿ ಸೋಮವಾರ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.

‘ಕಾರ್ಪೊರೇಟ್‌ ಕಂಪನಿಗಳೇ ಕೃಷಿ ಬಿಟ್ಟು ತೊಲಗಿ. ನಮ್ಮೂರ ಭೂಮಿ ನಮಗಿರಲಿ -ಅನ್ಯರಿಗಿಲ್ಲ’ ಎಂದು ಘೋಷಣೆ ಕೂಗಿದ ಧರಣಿನಿರತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ರಿಯಲ್‌ ಎಸ್ಟೇಟ್‌ ದಂಧೆಕೋರರು, ಬಂಡವಾಳಶಾಹಿಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಒತ್ತಡಕ್ಕೆ ಮಣಿದು ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿದೆ. ಸರ್ಕಾರದ ಈ ನಡೆ ಖಂಡನೀಯ’ ಎಂದು ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿ ಅಸಮಾಧಾನ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಮೊಳಗಿತು. ಅದೇ ರೀತಿ ಇಂದು ಕೃಷಿ ಭೂಮಿಗೆ ಮಾರಕವಾಗುತ್ತಿರುವ ಕಾರ್ಪೊರೇಟ್‌ ಕಂಪನಿ ಮಾಲೀಕರೇ, ಬಂಡವಾಳಶಾಹಿಗಳೇ ಹಾಗೂ ಭೂಗಳ್ಳರೇ ಕೃಷಿ ಭೂಮಿ ಬಿಟ್ಟು ತೊಲಗಿ ಎಂಬ ಘೋಷಣೆ ಪ್ರತಿ ಹಳ್ಳಿಯಲ್ಲೂ ಮೊಳಗಬೇಕು’ ಎಂದು ಹೇಳಿದರು.

‘ಸ್ವಾತಂತ್ರ್ಯ ನಂತರ ದೇಶದಲ್ಲಿ ಭೀಕರ ಬರಗಾಲ ಎದುರಾಗಿ ಜನ ಹಸಿವಿನಿಂದ ಮೃತಪಟ್ಟ ಸಂದರ್ಭದಲ್ಲಿ ಸರ್ಕಾರ ಪ್ರತಿ ಹಳ್ಳಿಯಲ್ಲೂ ಕೃಷಿಗೆ ಭೂಮಿ ವಿಂಗಡಣೆ ಮಾಡಿ ಭೂ ಸುಧಾರಣೆ ಕಾಯ್ದೆ ಜಾರಿಗೆ ತಂದಿತು. ಆದರೆ, ಈಗಿನ ಸರ್ಕಾರಗಳು ಕೃಷಿ ನಾಶ ಮಾಡಿ ಕಾರ್ಪೊರೇಟ್‌ ಕಂಪನಿಗಳ ಬೂಟು ನೆಕ್ಕಿ ಆಹಾರ ಭದ್ರತೆಗಾಗಿ ಹೊರ ದೇಶಗಳತ್ತ ಕೈಚಾಚುವ ಪರಿಸ್ಥಿತಿ ಸೃಷ್ಟಿಸುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಅಪಾಯಕಾರಿ ಕಾಯ್ದೆ: ‘ಈವರೆಗೆ ಕೃಷಿಕರಿಗೆ ಮಾತ್ರ ಕೃಷಿ ಭೂಮಿ ಖರೀದಿಸಲು ಅವಕಾಶವಿತ್ತು. ಕಾಯ್ದೆ ತಿದ್ದುಪಡಿ ಮಾಡಿರುವುದರಿಂದ ಕೃಷಿಕರಲ್ಲದವರಿಗೂ ಕೃಷಿ ಭೂಮಿ ಖರೀದಿಸಲು ಅವಕಾಶ ಸಿಕ್ಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್‌ ಸಂದರ್ಭ ಬಳಸಿಕೊಂಡು ಬ್ರಿಟೀಷರಿಗಿಂತಲೂ ಕಡೆಯಾದ ಅಪಾಯಕಾರಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ’ ಎಂದು ಧರಣಿನಿರತರು ಕಿಡಿಕಾರಿದರು.

‘ಸರ್ಕಾರ ರೈತರನ್ನು ಬೀದಿಗೆ ತಳ್ಳಿ, ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಹಿತ ಕಾಯಲು ಹೊರಟಿದೆ. ರಿಯಲ್‌ ಎಸ್ಟೇಟ್‌ ಉದ್ಯಮಿಗಳ ಕೈಗೊಂಬೆಯಾಗಿರುವ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು, ಸಣ್ಣ ಭೂ ಹಿಡುವಳಿದಾರರು ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ’ ಎಂದು ದೂರಿದರು.

ಹೋರಾಟದ ಎಚ್ಚರಿಕೆ: ‘ ರೈತ ಕುಲಕ್ಕೆ ಮಾರಕವಾಗಿರುವ ಕರ್ನಾಟಕ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೆ ರಾಜ್ಯದೆಲ್ಲೆಡೆ ರೈತರಿಗೆ ಜಾಗೃತಿ ಮೂಡಿಸಿ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘಟನೆ ಸದಸ್ಯರಾದ ಕಾವ್ಯಾಂಜಲಿ, ಪವಿತ್ರಾ, ವರಮಹಾಲಕ್ಷ್ಮೀ, ತಿಮ್ಮಣ್ಣ, ವೆಂಕಟೇಶಪ್ಪ, ನಾಗೇಶ್, ಮಂಜುನಾಥ್, ಹನುಮಯ್ಯ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.