ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ: ಸ್ಕೈವಾಕ್ ಇಲ್ಲದೆ ಪ್ರಯಾಣಿಕರ ಪರದಾಟ

ರೈಲು ಇಳಿದು ಬಸ್‌ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ತೊಂದರೆ l ನಿತ್ಯ ಸಂಚಾರ ದಟ್ಟಣೆ
Last Updated 6 ಫೆಬ್ರುವರಿ 2023, 5:53 IST
ಅಕ್ಷರ ಗಾತ್ರ

ಬಂಗಾರಪೇಟೆ: ರೈಲ್ವೆ ನಿಲ್ದಾಣಕ್ಕೆ ಬಸ್ ನಿಲ್ದಾಣ ಅಂಟಿಕೊಂಡಿದೆ. ಬೆಂಗಳೂರು ವಿಭಾಗದ ಏಕೈಕ ರೈಲ್ವೆ ನಿಲ್ದಾಣ ಇದಾಗಿದೆ. ಆದರೆ, ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಹಾಗೆ ಸುಮಾರು ಇನ್ನೂರು ಮೀಟರ್ ಸುತ್ತುಹಾಕಿ ಬಸ್‌ ನಿಲ್ದಾಣ
ತಲುಪಬೇಕು.

ಎರಡು ನಿಲ್ದಾಣಗಳ ಮಧ್ಯೆ ಸುಮಾರು 15 ಮೀಟರ್‌ ವಿಸ್ತೀರ್ಣದ ರಾಜಕಾಲುವೆ ಇದೆ. ಅಲ್ಲದೆ, ನಿಲ್ದಾಣದಿಂದ ಪ್ರಯಾಣಿಕರು ಸಂಚರಿಸಲು ಆಗದಂತೆ ರೈಲ್ವೆ ಸುತ್ತು
ಗೋಡೆ ನಿರ್ಮಿಸಲಾಗಿದೆ. ಹಾಗಾಗಿ ಕೊಂಕಣ ಸುತ್ತಿ ಮೈಲಾರಕ್ಕೆ ಬರುವ ಹಾಗೆ ಸುಮಾರು ಇನ್ನೂರು ಮೀಟರ್ ಸುತ್ತು ಹಾಕಿ ಬಸ್‌ ನಿಲ್ದಾಣ ತಲುಪಬೇಕಿದೆ.

ಸ್ಕೈವಾಕ್ ನಿರ್ಮಾಣ ಮಾಡಬೇಕು ಎಂದು ರೈಲ್ವೆ ಪ್ರಯಾಣಿಕರ ಸುರಕ್ಷತೆ ಸಂಘಟನೆ ಹಲವು ವರ್ಷದಿಂದ ಒತ್ತಾಯ ಮಾಡುತ್ತಲೇ
ಬಂದಿದೆ. ಮನವಿಗೆ ಸ್ಪಂದಿಸಿದ ಅಂದಿನ ರೈಲ್ವೆ ವ್ಯವಸ್ಥಾಪಕ ರಮೇಶ್‌ ಗೌಡ ಅವರು, ನಾಲ್ಕು ವರ್ಷದ ಹಿಂದೆಯೇ ಸ್ಕೈವಾಕ್ ಮತ್ತು ಎಸ್ಕಲೇಟರ್ ಅಳವಡಿಕೆಗೆ ಇಲಾಖೆಗೆ ಪ್ರಸ್ತಾವ ಕೂಡ ಸಲ್ಲಿಸಿದ್ದರು.

ಪರಿಣಾಮ ಎಸ್ಕಲೇಟರ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಸ್ಕೈವಾಕ್ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ. ಜತೆಗೆ ಪ್ರಸ್ತುತ ಅಳವಡಿಸುತ್ತಿರುವ ಎಸ್ಕಲೇಟರ್ ಕೂಡ ಅನುಮೋದಿತ ಯೋಜನೆಯಂತೆ ಅಳವಡಿಸುತ್ತಿಲ್ಲ ಎನ್ನುವ ಅಪಸ್ವರ ಎದ್ದಿದೆ. ನಿಲ್ದಾಣದೊಳಗೆ ಮಾತ್ರ ಹತ್ತಲು ಹಾಗೂ ಇಳಿಯಲು ಎಸ್ಕಲೇಟರ್ ವ್ಯವಸ್ಥೆ ಮಾಡಲಾಗುತ್ತಿದೆ. ನಿಲ್ದಾಣದ ಹೊರಗೆ ಹತ್ತುವ ವ್ಯವಸ್ಥೆ ಮಾತ್ರ ಇದ್ದು, ಇಳಿಯಲು ಯಾವುದೇ ವ್ಯವಸ್ಥೆ ಕೂಡ ಇಲ್ಲವಾಗಿದೆ.

ಅಲ್ಲದೆ, ನಿಲ್ದಾಣದ ಹೊರಗೆ ಸಾರ್ವಜನಿಕರು ಸಂಚರಿಸುವ ರಸ್ತೆಯಲ್ಲೇ ಎಸ್ಕಲೇಟರ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣ ಕುಗ್ಗಿದೆ. ಆ ರಸ್ತೆಯಲ್ಲಿ ಒಂದೆಡೆ ಎಸ್ಕಲೇಟರ್ ಅಳವಡಿಕೆ, ಇದರ ಪಕ್ಕದಲ್ಲೇ ಆಟೊ ನಿಲ್ದಾಣ, ಮತ್ತೊಂದೆಡೆ ಕೇಬಲ್ ಹಾಕಲು ಕಾಲುವೆ ಅಗೆಯಲಾಗಿದೆ. ಇದರಿಂದ ಆಟೊ, ಜನರ ಸಂಚಾರಕ್ಕೆ ಪರದಾಡುವಂತಾಗಿದೆ.

ಪಟ್ಟಣದ ರೈಲ್ವೆ ನಿಲ್ದಾಣ ವಿಸ್ತಾರದಲ್ಲಿ ಬೆಂಗಳೂರು ಹೊರತು
ಪಡಿಸಿದರೆ ಎರಡನೇ ದೊಡ್ಡರೈಲ್ವೆ ಜಂಕ್ಷನ್ ಇದಾಗಿದೆ. ನಾಲ್ಲು ದಿಕ್ಕುಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಜಿಲ್ಲೆಯ ಏಕೈಕ ನಿಲ್ದಾಣ ಕೂಡ ಹೌದು. ನಿತ್ಯ 100ಕ್ಕೂ ಹೆಚ್ಚು ಪ್ರಯಾಣಿಕ ಹಾಗೂ ಗೂಡ್ಸ್ ರೈಲುಗಳು
ಸಂಚರಿಸುತ್ತವೆ.

ಇಲ್ಲಿನ ರೈಲ್ವೆ ನಿಲ್ದಾಣದ ಮೂಲಕ ನಿತ್ಯ 20 ಸಾವಿರಕ್ಕೂ ಹೆಚ್ಚು ನಿತ್ಯ ಪ್ರಯಾಣಿಕರು ಕೆಲಸಕ್ಕಾಗಿ ಬೆಂಗಳೂರಿಗೆ ಹೋಗಿ ಬರುತ್ತಾರೆ. 20ನಿಮಿಷಕ್ಕೆ ಒಂದು ರೈಲು ಸಂಚರಿಸುತ್ತಿದ್ದು, ನಿತ್ಯ ಜನದಟ್ಟಣೆಯಿಂದ ಕೂಡಿರುತ್ತದೆ.
ಮುಖ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ಖಾಸಗಿ ಬಸ್‌ಗಳು ಮುಖ್ಯ ರಸ್ತೆಯಲ್ಲಿ ನಿಲ್ಲಿಸಿ ರೈಲ್ವೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಸ್ಪರ್ಧೆಯಲ್ಲಿ
ನಿಲ್ಲುತ್ತವೆ. ಇದರಿಂದ ಕೋಲಾರ ಮತ್ತು ಕೆಜಿಎಫ್ ಕಡೆ ಸಂಚರಿಸುವ ವಾಹನ ಹಾಗೂ ಪ್ರಯಾಣಿಕರಿಗೆ ಅಡಚಣೆಯಾಗಿದೆ.

ರೈಲ್ವೆ ನಿಲ್ದಾಣದಿಂದ ಕೆಎಸ್ಆರ್‌ಟಿಸಿ ಹಾಗೂ ಮುನ್ಸಿಪಲ್ ಬಸ್ ನಿಲ್ದಾಣಗಳಿಗೆ ಸ್ಕೈವಾಕ್ ನಿರ್ಮಿಸಿ ಸಂಚಾರ ದಟ್ಟಣೆಗೆ ಮುಕ್ತಿ ನೀಡಬೇಕು ಎನ್ನುವುದು ಪ್ರಯಾಣಿಕರ ಹಲವು ದಶಕಗಳ ಆಗ್ರಹವಾಗಿದೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT