ಶುಕ್ರವಾರ, ಜನವರಿ 22, 2021
22 °C
ಖಾಸಗಿ ಶಿಕ್ಷಣ ಸಂಸ್ಥೆ– ಶಿಕ್ಷಕರ ಸಮಸ್ಯೆ ಬಗೆಹರಿಸುವ ಭರವಸೆ

ವೇತನ ಪಾವತಿ: ವರದಿಗೆ ಡಿ.ಸಿ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಶಿಕ್ಷಕರ ನಡುವಿನ ಸಮಸ್ಯೆಗಳನ್ನು 2 ತಿಂಗಳಲ್ಲಿ ಬಗೆಹರಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಭರವಸೆ ನೀಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆ ಸಂಬಂಧ ಇಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಕೋವಿಡ್‌ ಹಾವಳಿಯಿಂದ ಹಲವು ಕ್ಷೇತ್ರಗಳು ಸಂಕಷ್ಟಕ್ಕೆ ಸಿಲುಕಿವೆ. 2020ರ ಮಾರ್ಚ್‌ನಿಂದ ತರಗತಿಗಳು ಸ್ಥಗಿತಗೊಂಡಿದ್ದು, ಈವರೆಗೂ ಪೂರ್ಣ ಪ್ರಮಾಣದಲ್ಲಿ ಶಾಲೆ ತೆರೆಯಲು ಸಾಧ್ಯವಾಗಿಲ್ಲ’ ಎಂದರು.

‘ಲಾಕ್‌ಡೌನ್‌ ಸಂದರ್ಭದಲ್ಲಿ ಜಿಲ್ಲೆಯು ಹಸಿರು ವಲಯದಲ್ಲಿತ್ತು. ಇದೀಗ ಶಾಲೆ ಆರಂಭಕ್ಕೆ ಸರ್ಕಾರ ಸಮ್ಮತಿಸಿದೆ. ಶಾಲೆಗಳಲ್ಲಿ ಕೋವಿಡ್‌ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು. ಕಡ್ಡಾಯವಾಗಿ ಸ್ಯಾನಿಟೈಸರ್ ಮತ್ತು ಮಾಸ್ಕ್ ಬಳಸಬೇಕು, ವಿದ್ಯಾರ್ಥಿಗಳು ಅಂತರ ಪಾಲನೆ ಮಾಡಬೇಕು’ ಎಂದು ಸೂಚಿಸಿದರು.

‘ಲಾಕ್‌ಡೌನ್‌ ಕಾರಣಕ್ಕೆ ಕೆಲ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಕಡಿಮೆ ವೇತನ ನೀಡಿವೆ. ಮತ್ತೆ ಕೆಲ ಸಂಸ್ಥೆಗಳು ವೇತನ ಕೊಟ್ಟಿಲ್ಲ. ಹಲವು ಸಂಸ್ಥೆಗಳು ಶಿಕ್ಷಕರನ್ನು ಕೆಲಸದಿಂದ ತೆಗೆದು ಹಾಕಿವೆ. ನಿರುದ್ಯೋಗಿಗಳಾಗಿರುವ ಶಿಕ್ಷಕರು ಗಾರೆ ಕೆಲಸಕ್ಕೆ ಹೋಗುತ್ತಿದ್ದಾರೆ ಮತ್ತು ತರಕಾರಿ ವ್ಯಾಪಾರ ಮಾಡುತ್ತಿದ್ದಾರೆ. ಖಾಸಗಿ ಶಾಲಾ ಶಿಕ್ಷಕರಿಗೆ ಸೇವಾ ಭದ್ರತೆ ಕಲ್ಪಿಸಬೇಕು’ ಎಂದು ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿ.ನಾಗೇಶ್ ಮನವಿ ಮಾಡಿದರು.

‘ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿ ಸಿಬ್ಬಂದಿಯನ್ನು ಕುಟುಂಬ ಸದಸ್ಯರೆಂದು ಭಾವಿಸಿದ್ದೇವೆ, ಅವರಿಗೆ ಸಮಸ್ಯೆಯಾದರೆ ಸಂಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಅವರ ಪರವಾಗಿ ನಾವು ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದೇವೆ’ ಎಂದು ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಮುನಿಯಪ್ಪ ಹೇಳಿದರು.

ಸತ್ಯಾಗ್ರಹ: ‘ಶುಲ್ಕ ಪಾವತಿಸುವಂತೆ ಪೋಷಕರನ್ನು ಒತ್ತಾಯಿಸಲು ಆಗುವುದಿಲ್ಲ. ಕೆಲ ಪೋಷಕರು ಸಂಕಷ್ಟದಲ್ಲೂ ಶುಲ್ಕ ಪಾವತಿಸಿದ್ದಾರೆ. ಇನ್ನು ಕೆಲವರು ಪಾವತಿ ಮಾಡುತ್ತಿಲ್ಲ. ಆದರೂ ಮಕ್ಕಳ ಹಿತದೃಷ್ಟಿಯಿಂದ ಆನ್‌ಲೈನ್‌ ಮೂಲಕ ಪಠ್ಯ ಬೋಧನೆ ಮಾಡಲಾಗುತ್ತಿದೆ, ಇದರಿಂದ ಪ್ರಯೋಜನವಾಗುತ್ತಿಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ. ಶಿಕ್ಷಕರಿಗೆ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಲು ಬೆಂಗಳೂರಿನಲ್ಲಿ ಜ.6ರಂದು ಸತ್ಯಾಗ್ರಹ ಹಮ್ಮಿಕೊಂಡಿದ್ದು, ಶಿಕ್ಷಕರು ಬೆಂಬಲ ನೀಡಬೇಕು’ ಎಂದು ಕೋರಿದರು.

‘ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ವೇತನ ನೀಡಿರದಿದ್ದರೆ ಕೊಡಿಸುತ್ತೇವೆ. ಕಾರ್ಮಿಕರ ಕಾಯ್ದೆಯಡಿ ಕನಿಷ್ಠ ವೇತನ ನೀಡಲೇಬೇಕು. ಸರ್ಕಾರದ ಕಾನೂನು ಉಲ್ಲಂಘಿಸಿದರೆ ಶಿಸ್ತುಕ್ರಮ ಜರುಗಿಸುತ್ತೇವೆ. ಶಿಕ್ಷಣ ಸಂಸ್ಥೆಗಳವರು ಶಿಕ್ಷಕರಿಗೆ ಸೇವಾ ಭದ್ರತೆ ನೀಡದಿದ್ದರೆ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಯಾರು ವೇತನ ಕೊಟ್ಟಿದ್ದಾರೆ, ಯಾರು ವೇತನ ಪಾವತಿಸಿಲ್ಲ ಎಂಬ ಬಗ್ಗೆ ಸಮಗ್ರ ವರದಿ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿ ಡಿಡಿಪಿಐಗೆ ಆದೇಶಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ಅನುದಾನರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ಜಿಲ್ಲಾ ಘಟಕದ ಅಧ್ಯಕ್ಷ ಆದಿಲ್‌ ಪಾಷಾ, ಪದಾಧಿಕಾರಿ ಕೆ.ರಾಜೇಶ್‌ಸಿಂಗ್‌, ಮದರ್‌ ಥೆರೆಸಾ ವಿದ್ಯಾ ಸಂಸ್ಥೆ ಅಧ್ಯಕ್ಷ ಶ್ರೀಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಗೌಡ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.