ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಮುಖಂಡರು ಪೊಲೀಸರ ವಾಗ್ವಾದ

ರೈಲ್ವೆ ಅಂಡರ್‌ಪಾಸ್‌ ಸಮಸ್ಯೆ: ನಿಲ್ದಾಣಕ್ಕೆ ಮುತ್ತಿಗೆ ಯತ್ನ
Last Updated 5 ನವೆಂಬರ್ 2020, 14:22 IST
ಅಕ್ಷರ ಗಾತ್ರ

ಕೋಲಾರ: ಅವೈಜ್ಞಾನಿಕ ರೈಲ್ವೆ ಕೆಳ ಸೇತುವೆಗಳ (ಅಂಡರ್‌ಪಾಸ್‌) ಸಮಸ್ಯೆ ಪರಿಹರಿಸುವಂತೆ ಹಾಗೂ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲೆತ್ನಿಸಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರಿಗೆ ಪೊಲೀಸರು ತಡೆಯೊಡ್ಡಿದ್ದರಿಂದ ಪರಸ್ಪರ ವಾಗ್ವಾದ ನಡೆದು ಆತಂಕದ ವಾತಾವರಣ ಸೃಷ್ಟಿಯಾಯಿತು.

ಪೊಲೀಸರು ಸಂಘಟನೆ ಸದಸ್ಯರನ್ನು ನಿಲ್ದಾಣದ ಪ್ರವೇಶ ಭಾಗದಲ್ಲೇ ತಡೆದರು. ಇದರಿಂದ ಆಕ್ರೋಶಗೊಂಡ ಸಂಘಟನೆ ಸದಸ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ಘೋಷಣೆ ಕೂಗಿ ಮುನ್ನುಗ್ಗಲು ಯತ್ನಿಸಿದರು. ಈ ವೇಳೆ ತಳ್ಳಾಟ ಉಂಟಾಗಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿತು.

ನಂತರ ರೈಲ್ವೆ ಅಧಿಕಾರಿಗಳು ಸಂಘಟನೆ ಸದಸ್ಯರ ಜತೆ ಮಾತುಕತೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಿದರು. ಬಳಿಕ ನಿಲ್ದಾಣದ ಮುಂಭಾಗ ಪ್ರತಿಭಟನೆ ಮಾಡಿದ ಸಂಘಟನೆ ಸದಸ್ಯರು, ‘ಜಿಲ್ಲೆಯ ವಿವಿಧೆಡೆ ನಿರ್ಮಿಸಿರುವ ರೈಲ್ವೆ ಕೆಳ ಸೇತುವೆಗಳ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ತುಂತುರು ಮಳೆ ಬಂದರೂ ಅಂಡರ್‌ಪಾಸ್‌ಗಳು ಕೆರೆಯಂತಾಗಿ ಜನ ಜೀವನಕ್ಕೆ ತೊಂದರೆಯಾಗುತ್ತಿದೆ’ ಎಂದು ದೂರಿದರು.

‘ಪ್ರತಿ ಬಾರಿ ಮಳೆ ಬಂದಾಗಲೂ ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಮತ್ತು ಜನರ ಓಡಾಟಕ್ಕೆ ಸಮಸ್ಯೆಯಾಗುತ್ತದೆ. ಕೆಳ ಸೇತುವೆಗಳು ನಿರ್ಮಾಣವಾದ ದಿನದಿಂದಲೂ ಈ ಸಮಸ್ಯೆಯಿದೆ. ಈ ಬಗ್ಗೆ ಸಾರ್ವಜನಿಕರು ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ’ ಎಂದು ಕಿಡಿಕಾರಿದರು.

‘ಅಂಡರ್‌ಪಾಸ್‌ನಲ್ಲಿ ಮಳೆ ನೀರು ತುಂಬಿಕೊಳ್ಳುವುದರಿಂದ ಸುತ್ತಮುತ್ತಲ ಗ್ರಾಮಗಳು ಹಾಗೂ ಬಡಾವಣೆಗಳಿಗೆ ಸಂಪರ್ಕ ಕಡಿದು ಹೋಗುತ್ತದೆ. ಇದರಿಂದ ಆ ಭಾಗದ ಜನ ಹಳಿ ದಾಟಿಕೊಂಡು ಓಡಾಡುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಹಳಿ ದಾಟುವ ಯತ್ನದಲ್ಲಿ ಹಲವರು ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಆದರೂ ಅಧಿಕಾರಿಗಳು ಸಮಸ್ಯೆ ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ಸಂಕಷ್ಟ: ‘ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಬೆಳೆ ನಾಶವಾಗಿ ರೈತರಿಗೆ ಸಮಸ್ಯೆಯಾಗುತ್ತಿದೆ. ಎಪಿಎಂಸಿಗಳಲ್ಲಿ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಇಲ್ಲವಾಗಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಆರೋಪಿಸಿದರು.

‘ರೈತರ ಮೇಲೆ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ಸರ್ಕಾರಗಳು ರೈತರ ಹಿತ ಕಾಯುವಲ್ಲಿ ವಿಫಲವಾಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿ ರೈತರ ಮರಣ ಶಾಸನ ಬರೆಯುತ್ತಿವೆ. ಸರ್ಕಾರಗಳಿಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲ’ ಎಂದು ಗುಡುಗಿದರು.

ತೀವ್ರ ಹೋರಾಟ: ‘ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ರೈಲ್ವೆ ಕೆಳ ಸೇತುವೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಸಂಘಟನೆಯ ರಾಜ್ಯ ಘಟಕದ ಸಂಚಾಲಕ ನಾಗರಾಜಗೌಡ, ಜಿಲ್ಲಾ ಘಟಕದ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಎ.ನಳಿನಿಗೌಡ, ಸದಸ್ಯರಾದ ವರಮಹಾಲಕ್ಷ್ಮೀ, ಆಂಜಿನಪ್ಪ, ಚಾಂದ್‌ಪಾಷಾ, ತಿಮ್ಮಣ್ಣ, ಜಮೀರ್‌ಪಾಷಾ, ಕಿರಣ್, ಜಾವೇದ್, ಜಮೀರ್, ಶಮೀರ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT