ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೌತಿಕ ತರಗತಿ ನಡೆಸಿದರೆ ಶಿಸ್ತುಕ್ರಮ

ಸಭೆಯಲ್ಲಿ ಖಾಸಗಿ ಶಾಲೆಗಳಿಗೆ ಡಿಡಿಪಿಐ ಕೃಷ್ಣಮೂರ್ತಿ ಎಚ್ಚರಿಕೆ
Last Updated 5 ಏಪ್ರಿಲ್ 2021, 14:44 IST
ಅಕ್ಷರ ಗಾತ್ರ

ಕೋಲಾರ: ‘ಶಾಲೆಗಳಲ್ಲಿ ಕೋವಿಡ್‌ ಹೊಸ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. 6ರಿಂದ 9ನೇ ತರಗತಿಯನ್ನು ಭೌತಿಕವಾಗಿ ನಡೆಸಿದರೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಡಿಡಿಪಿಐ ಕೃಷ್ಣಮೂರ್ತಿ ಖಾಸಗಿ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದರು.

ಇಲ್ಲಿ ಸೋಮವಾರ ನಡೆದ ತಾಲ್ಲೂಕಿನ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರ ಸಭೆಯಲ್ಲಿ ಮಾತನಾಡಿ, ‘ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಎಲ್ಲಾ ಶಾಲೆಗಳು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಸರ್ಕಾರದ ಹೊಸ ಮಾರ್ಗಸೂಚಿ ಪಾಲಿಸಬೇಕು’ ಎಂದು ಸೂಚಿಸಿದರು.

‘ಈಗಾಗಲೇ 6ರಿಂದ 9ನೇ ತರಗತಿವರೆಗೆ ಭೌತಿಕ ತರಗತಿ ನಡೆಸಬಾರದೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರ ನಡುವೆಯೂ ಖಾಸಗಿ ಶಾಲೆಗಳವರು ತರಗತಿ ನಡೆಸಿದರೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸುತ್ತೇವೆ. ಪರೀಕ್ಷೆ ನಡೆಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸರ್ಕಾರದ ಆದೇಶದಂತೆ ಕ್ರಮ ವಹಿಸಿ’ ಎಂದು ತಿಳಿಸಿದರು.

‘ಖಾಸಗಿ ಶಾಲೆಗಳಲ್ಲಿ ಶೇ 70ರಷ್ಟು ಶುಲ್ಕ ವಸೂಲಿ ಮಾಡಬೇಕೆಂದು ಸರ್ಕಾರ ಆದೇಶಿಸಿದೆ. ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಪೋಷಕರಿಂದ ದೂರು ಬಂದರೆ ಆಡಳಿತ ಮಂಡಳಿಯು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಆರ್‌ಟಿಇ ಶುಲ್ಕ ಮರುಪಾವತಿ ಸಂಬಂಧ ಒಂದೆರಡು ದಿನದಲ್ಲಿ ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ಶಾಲೆಗಳಲ್ಲಿ ಜೂನಿಯರ್ ರೆಡ್‌ಕ್ರಾಸ್‌ ಸ್ಥಾಪಿಸಬೇಕು’ ಎಂದು ಹೇಳಿದರು.

ಶಾಲೆ ಉಳಿಸಬೇಕು: ‘ಶಿಕ್ಷಣ ಸಂಸ್ಥೆಗಳು ಇಲಾಖೆ ಆದೇಶಗಳನ್ನು ಪಾಲಿಸುತ್ತವೆ. ಪೋಷಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿವೆ. ಆದರೆ, ಶಾಲೆ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ. ಸರ್ಕಾರ ನಿಗದಿಪಡಿಸಿದ ಶೇ 70ರಷ್ಟು ಶುಲ್ಕ ಮಾತ್ರ ವಸೂಲಿ ಮಾಡಬೇಕು ಎಂಬುದನ್ನು ಒಪ್ಪಿಕೊಂಡಿದ್ದೇವೆ’ ಎಂದು ಖಾಸಗಿ ಅನುದಾನರಹಿತ ಶಾಲೆಗಳ ರಾಜ್ಯ ಸಂಘಟನೆ (ಕ್ಯಾಮ್ಸ್‌) ಜಿಲ್ಲಾ ಅಧ್ಯಕ್ಷ ಎ.ಸದಾನಂದ ಸ್ಪಷ್ಟಪಡಿಸಿದರು.

‘ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಕಷ್ಟ ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು. ಸರ್ಕಾರ ನಿಗದಿಪಡಿಸಿದ ಶೇ 70 ಶುಲ್ಕವನ್ನು ಸಾಕಷ್ಟು ಪೋಷಕರು ಪಾವತಿಸುತ್ತಿಲ್ಲ. ಶುಲ್ಕ ವಸೂಲಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿ ಶಾಲೆಗಳನ್ನು ಉಳಿಸಬೇಕು’ ಎಂದು ಕ್ಯಾಮ್ಸ್‌ ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮೀನಾರಾಯಣ ಮನವಿ ಮಾಡಿದರು.

ಶಿಕ್ಷಕರ ಜವಾಬ್ದಾರಿ: ‘ಮಕ್ಕಳ ಸುರಕ್ಷತೆಯು ಶಿಕ್ಷಕರ ಜವಾಬ್ದಾರಿ. ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಮತ್ತು ಸ್ಯಾನಿಟೈಸರ್‌ ಬಳಸಬೇಕು. ಎಲ್ಲಾ ಶಿಕ್ಷಕರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸಲಹೆ ನೀಡಿದರು.

ವಿವಿಧ ಖಾಸಗಿ ಶಾಲೆಗಳ ಮುಖ್ಯಸ್ಥರು, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ರಾಘವೇಂದ್ರ, ಆರ್.ಶ್ರೀನಿವಾಸನ್, ಬಿಆರ್‌ಪಿ ನಾಗರಾಜ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT